ಕುಶಾಲನಗರ, ಅ. ೧೫: ೧೨ನೇ ವರ್ಷದ ಕಾವೇರಿ ನದಿ ತೀರ್ಥ ಯಾತ್ರಾ ಅಭಿಯಾನ ತಾ. ೨೧ ರಂದು ತಲಕಾವೇರಿಯಿಂದ ಪ್ರಾರಂಭ ಗೊಳ್ಳಲಿದೆ. ನವೆಂಬರ್ ೧೩ ರಂದು ತಮಿಳುನಾಡಿನ ಪೂಂಪ್ಹಾರ್ ಬಳಿ ಕಾವೇರಿ ಮತ್ತು ಬಂಗಾಳಕೊಲ್ಲಿ ಸಮುದ್ರ ಸಂಗಮದಲ್ಲಿ ಸಮಾರೋಪ ಗೊಳ್ಳಲಿದೆ.
ಕಾವೇರಿ ನದಿ ಸ್ವಚ್ಛತಾ ಆಂದೋಲನ, ಅಖಿಲ ಭಾರತ ಸನ್ಯಾಸಿಗಳ ಸಂಘ ಆಶ್ರಯದಲ್ಲಿ ನಡೆಯುವ ಯಾತ್ರೆ ತಲಕಾವೇರಿಯಲ್ಲಿ ಜರುಗಲಿರುವ ಕಾವೇರಿ ನದಿ ಉತ್ಸವ ಸಮಾರಂಭದಲ್ಲಿ ಚಾಲನೆಗೊಳ್ಳಲಿದ್ದು, ನಂತರ ನದಿ ತಟದ ಪ್ರದೇಶಗಳಲ್ಲಿ ಸಾಗಿ ಜನರಿಗೆ ನದಿ ಮಹತ್ವ ಮತ್ತು ನೀರಿನ ಸ್ವಚ್ಛತೆ ಬಗ್ಗೆ ಅರಿವು ಜಾಗೃತಿ ಮೂಡಿಸಲಿದೆ. ತಾ. ೨೨ ರಂದು ರಾಮನಾಥಪುರ, ಕೃಷ್ಣರಾಜಸಾಗರ, ಶ್ರೀರಂಗಪಟ್ಟಣ, ರಾಮನಗರ, ಕನಕ ಪುರ ಮಾರ್ಗವಾಗಿ ತಮಿಳುನಾಡಿನ ಕಡೆಗೆ ಸಾಗಲಿದೆ. ಮೂಲ ಕಾವೇರಿ ಯಿಂದ ಪವಿತ್ರ ಕಾವೇರಿ ತೀರ್ಥವನ್ನು ಪೂಜೆ ಸಲ್ಲಿಸಿ ಯಾತ್ರೆಯಲ್ಲಿ ಒಯ್ದು ನವೆಂಬರ್ ೧೩ ರಂದು ಪೂಂಪ್ ಹಾರ್ ಸಮುದ್ರ ಸಂಗಮದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ದೊಂದಿಗೆ ವಿಸರ್ಜನೆ ನಡೆಯಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದ್ದಾರೆ.
ಯಾತ್ರೆ ಯಲ್ಲಿ ತಮಿಳುನಾಡು, ಕರ್ನಾಟಕ, ಆಂಧ್ರ, ಕೇರಳ ರಾಜ್ಯಗಳ ಸುಮಾರು ೧೫೦ಕ್ಕೂ ಅಧಿಕ ಸಾಧು ಸಂತರು ಕಾವೇರಿ ರಥದೊಂದಿಗೆ ತಾ. ೨೦ ರಂದು ಜಿಲ್ಲೆಗೆ ಆಗಮಿಸಲಿದ್ದು, ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.