ವಿವಿಧ ಗೌಡ ಸಮಾಜಗಳ ಆಗ್ರಹ
ಮಡಿಕೇರಿ, ಅ. ೧೫: ಕೊಡಗಿನ ಆರಾಧ್ಯ ದೇವತೆಯಾದ ಕಾವೇರಿ ಮಾತೆಯ ತೀರ್ಥೋದ್ಭವ ಆಚರಣೆ ಸಂಪ್ರದಾಯ ಬದ್ಧವಾಗಿ ನಡೆಯಬೇಕು ಹೊರತು ಹೊಸ ಕ್ರಮಗಳಿಗೆ ಅವಕಾಶ ನೀಡಬಾರದು ಎಂದು ವಿವಿಧ ಗೌಡ ಸಮಾಜಗಳು ಆಗ್ರಹಿಸಿವೆ. ನಗರದ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕುಶಾಲನಗರ ಗೌಡ ಸಮಾಜದ ಪ್ರಮುಖ ಆನಂದ್ ಕರಂದ್ಲಾಜೆ, ತೀರ್ಥೋದ್ಭವ ವ್ಯವಸ್ಥಿತವಾಗಿ ನಡೆಯಬೇಕು. ಯಾವುದೇ ಲೋಪದೋಷವಿಲ್ಲದೆ ಆಚರಣೆ ನಡೆಯಬೇಕಾದರೆ ಜಿಲ್ಲೆಯ ಎಲ್ಲಾ ವರ್ಗದ ಸಹಕಾರ ಬೇಕು. ಇದೀಗ ಕಾವೇರಿ ತುಲಾಸಂಕ್ರಮಣದAದು ಅನಗತ್ಯವಾಗಿ ಆಚರಣೆಯಲ್ಲಿ ಇಲ್ಲದ ಪದ್ಧತಿಗಳನ್ನು ನಡೆಸುವಂತೆ ಒತ್ತಾಯಗಳು ಕೇಳಿಬರುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಉಭಯ ಜನಾಂಗಗಳು ಪ್ರತಿಷ್ಠೆ ಬದಿಗೊತ್ತಿ ಒಂದುಗೂಡಿ ಕಾವೇರಿಯ ಆರಾಧನೆ ಮಾಡಬೇಕು ಎಂದು ಮನವಿ ಮಾಡಿದರು.
ತೀರ್ಥೋದ್ಭವ ಸಂದರ್ಭ ಕುಂಡಿಕೆ ಸುತ್ತ ಜವಾಬ್ದಾರಿ ನಿರ್ವಹಿಸುವ ಕುಟುಂಬಗಳ ತಕ್ಕಮುಖ್ಯಸ್ಥರಿಗೆ ಮಾತ್ರ ಅವಕಾಶ ನೀಡಬೇಕು. ಹೊಸ ವಿಧಿಗಳನ್ನು ತರಬಾರದು. ಬೇರೆಯವರಿಗೆ ಅವಕಾಶ ನೀಡಿದಲ್ಲಿ ಕಟ್ಟುಪಾಡು ಪಾಲಿಸುವ ಸುತ್ತಮುತ್ತಲಿನ ೫ ಗ್ರಾಮಗಳ ಜನರಿಗೂ ಅವಕಾಶ ನೀಡಬೇಕಾದ ಪರಿಸ್ಥಿತಿ ಉದ್ಭವಿಸುತ್ತದೆ. ಇದರಿಂದ ಆಚರಣೆಯಲ್ಲಿ ಯಥಾಸ್ಥಿತಿ ಕಾಯ್ದುಕೊಂಡು, ಯಾವುದೇ ಒತ್ತಡಕ್ಕೆ ಮಣಿಯದೆ ಜಿಲ್ಲಾಡಳಿತ ಹಾಗೂ ಶಾಸಕರು ಮುನ್ನಡೆಯಬೇಕೆಂದು ಆಗ್ರಹಿಸಿದರು.
ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ್ ಮಾತನಾಡಿ, ಈ ಹಿಂದೆ ಗೌಡ ಜನಾಂಗದವರು ತೀರ್ಥೋದ್ಭವ ಸಂದರ್ಭ ಕುಪ್ಪಸ ದಟ್ಟಿ ತೊಟ್ಟು ಮೆರವಣಿಗೆ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಶಾಸಕರು, ಜಿಲ್ಲಾಡಳಿತ ಮೆರವಣಿಗೆ ನಡೆಸದಂತೆ ಮನವಿ ಮಾಡಿದಾಗ ಅದನ್ನು ಪರಿಗಣಿಸಿ ಮೆರವಣಿಗೆ ನಡೆಸುವುದನ್ನು ಸ್ಥಗಿತಗೊಳಿಸಿದೆವು. ಜಿಲ್ಲೆಯಲ್ಲಿ ಶಾಂತಿ, ಸಮನ್ವಯತೆಯಿಂದ ಬದುಕಬೇಕು ಎಂದು ಹೇಳಿದರು.
ಗೋಷ್ಠಿಯಲ್ಲಿ ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್, ಪದಾಧಿಕಾರಿ ಚಿಲ್ಲನ ಗಣಿಪ್ರಸಾದ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ, ಚೆಟ್ಟಳ್ಳಿ ಚೇರಳ ಗೌಡ ಸಂಘದ ಪೇರಿಯನ ಉದಯ ಹಾಜರಿದ್ದರು.