ಮಡಿಕೇರಿ, ಅ. ೧೫: ಮೈಕ್ರೋ ಫೈನಾನ್ಸ್ನಲ್ಲಿ ಸಾಲ ಕೊಡಿಸುವ ನೆಪದಲ್ಲಿ ಮಹಿಳೆಯರಿಬ್ಬರ ದಾಖಲೆ ಪಡೆದು ಮತ್ತೊಂದು ಫೈನಾನ್ಸ್ನಿಂದ ಸಾಲ ಪಡೆದು ವಂಚನೆ ಮಾಡಿರುವ ಘಟನೆ ನಡೆದಿದೆ. ಕ್ರಮಕ್ಕೆ ನೊಂದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಯಾವುದೇ ನ್ಯಾಯ ದೊರಕದೆ ಅತಂತ್ರರಾಗಿದ್ದಾರೆ.

ಮೂಲತಃ ಮಡಿಕೇರಿಯ ಪ್ರಸ್ತುತ ಕುಶಾಲನಗರದಲ್ಲಿ ನೆಲೆಸಿರುವ ನಸೀರ ಎಂಬಾಕೆ ಮೇಕೇರಿಯ ಮಿಷ್ರಿಯಾ ಹಾಗೂ ಆಯಿಷಾ ಎಂಬವರಿAದ ದಾಖಲೆ ಪಡೆದು ವಂಚನೆ ಮಾಡಿದ ಮಹಿಳೆ.

ಏನಿದು ಘಟನೆ: ಕಳೆದ ಕೆಲವು ತಿಂಗಳ ಹಿಂದೆ ನಸೀರ ಎಂಬಾಕೆ ಮೇಕೇರಿಯ ಆಯಿಷಾ ಮತ್ತು ಮಿಷ್ರಿಯಾ ಅವರುಗಳಿಗೆ ಮೈಕ್ರೋ ಫೈನಾನ್ಸ್ನಿಂದ ಸಾಲ ಕೊಡಿಸುವುದಾಗಿ ನಂಬಿಸಿ ಬಳಿಕ ಅವರಿಂದ ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿಯನ್ನು ಪಡೆದುಕೊಂಡಿದ್ದಾಳೆ. ದಿನ ಕಳೆದರು ಸಾಲ ಮಂಜೂರಾಗದಿರುವುದರಿAದ ಈರ್ವರು ಸುಮ್ಮನಾಗಿದ್ದಾರೆ.

ಹಣದ ಅವಶ್ಯಕತೆ ಹಿನ್ನೆಲೆ ಮಡಿಕೇರಿಯ ಫೈನಾನ್ಸ್ವೊಂದರಲ್ಲಿ ಆಯಿಷಾ ಸಾಲ ಪಡೆಯಲು ಅರ್ಜಿ ಸಲ್ಲಿಸಿದ ಸಂದರ್ಭ ಪರಿಶೀಲನೆ ನಡೆಸುವಾಗ ಕುಶಾಲನಗರದಲ್ಲಿ ಸಾಲ ಪಡೆಯಲಾಗಿದೆ ಎಂದು ಫೈನಾನ್ಸ್ ಸಿಬ್ಬಂದಿ ತಿಳಿಸಿ ನಿಮಗೆ ಬೇರೆಡೆ ಸಾಲ ಇರುವುದರಿಂದ ಸಾಲ ನೀಡಲಾಗುವುದಿಲ್ಲ ಎಂದು ಉತ್ತರಿಸಿದ್ದಾರೆ. ಇದರಿಂದ ಆತಂಕಗೊAಡು ವಿಚಾರಣೆ ನಡೆಸಿದಾಗ ಇಬ್ಬರ ಹೆಸರಿನ ದಾಖಲೆ ನೀಡಿ ನಸೀರ ಕುಶಾಲನಗರದ ಬೇರೆ ಬೇರೆ ಫೈನಾನ್ಸ್ಗಳಲ್ಲಿ ತಲಾ ರೂ. ೪೦ ಸಾವಿರದಂತೆ ಒಟ್ಟು ರೂ. ೮೦ ಸಾವಿರ ಸಾಲ ಪಡೆದಿರುವುದು ಬೆಳಕಿಗೆ ಬಂದಿದೆ.

‘ತ್ರಿಬಲ್ ಆ್ಯಕ್ಟಿಂಗ್’: ವಂಚನೆ ಆರೋಪ ಹೊತ್ತಿರುವ ನಸೀರ, ಆಯಿಷಾ ಹಾಗೂ ಮಿಶ್ರಿಯಾ ಹೆಸರಿನಲ್ಲಿ ಮೋಸ ಮಾಡಿದ್ದಾಳೆ ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಫೈನಾನ್ಸ್ ಸಂಸ್ಥೆಗಳಿಗೆ ಸಲ್ಲಿಸಿರುವ ದಾಖಲೆಗಳು ಕೂಡ ನಕಲಿ ಎಂದು ನೊಂದವರು ದೂರಿದ್ದಾರೆ.

ಆಯಿಷಾ ಹಾಗೂ ಮಿಶ್ರಿಯಾ ಅವರ ದಾಖಲೆಗಳಿಗೆ ನಸೀರ ತನ್ನ ಫೋಟೋ ಅಂಟಿಸಿದ್ದಲ್ಲದೆ ಮಿಷ್ರಿಯಾ ಹೆಸರಿನ ಮತ್ತೋರ್ವಳ ಬ್ಯಾಂಕ್ ಖಾತೆಯ ವಿವರ ಹಾಗೂ ಪಾಸ್ ಬುಕ್ ಜೆರಾಕ್ಸ್ ಪ್ರತಿಯನ್ನು ಸಂಸ್ಥೆಗೆ ನೀಡಿ ಸಾಲ ಪಡೆದುಕೊಳ್ಳುವುದರ ಜೊತೆಗೆ ಸಾಲದ ಕಂತನ್ನು ಕಳೆದ ಕೆಲವು ತಿಂಗಳುಗಳಿAದ ಪಾವತಿಸುತ್ತಿದ್ದಾಳೆ ಎಂದು ತಿಳಿದು ಬಂದಿದೆ.

ಓರ್ವ ಮಹಿಳೆ ಎರಡು ಹೆಸರಿನಲ್ಲಿ ಅವರಿಗೆ ತಿಳಿಯದಂತೆ ‘ತ್ರಿಬಲ್ ಆ್ಯಕ್ಟಿಂಗ್’ ಮಾಡುತ್ತಿದ್ದು, ಈಕೆಯ ವಿರುದ್ಧ ಸೂಕ್ತ ಕ್ರಮಕ್ಕೆ ನೊಂದವರು ಒತ್ತಾಯಿಸಿದ್ದಾರೆ.

ದೊರೆಯದ ನ್ಯಾಯ: ಕೆಲ ಸಮಸ್ಯೆಗಳಿಂದ ಹಣದ ಅವಶ್ಯಕತೆ ಇರುವ ಕಾರಣ ಸಾಲಕ್ಕಾಗಿ ಅರ್ಜಿ ಸಲ್ಲಿಸಿದರೆ ಯಾವುದೇ ರೀತಿಯ ಸಾಲ ಇದೀಗ ಲಭ್ಯವಾಗುತ್ತಿಲ್ಲ. ಇದರಿಂದ ನೊಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಲಾಗಿದೆ. ಅವರು ಕುಶಾಲನಗರ ಠಾಣೆಗೆ ದೂರು ನೀಡಲು ಸೂಚಿಸಿದ ಹಿನ್ನೆಲೆ ಅಲ್ಲಿಗೂ ದೂರನ್ನು ನೀಡಲಾಗಿದೆ. ಆದರೆ, ಯಾವುದೇ ಕ್ರಮವಾಗಿಲ್ಲ ಎಂದು ವಂಚನೆಗೊಳಗಾದವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ಉಭಯ ಕಡೆಯವರನ್ನು ಕರೆಸಿ ಕೇವಲ ಮಾತುಕತೆ ನಡೆಸಿದ್ದಾರೆ. ಇದರಿಂದ ನ್ಯಾಯ ದೊರಕುತ್ತಿಲ್ಲ. ತಪ್ಪಿತಸ್ಥೆಗೆ ಸೂಕ್ತ ಕ್ರಮವಾಗಬೇಕೆಂದು ಆಗ್ರಹಿಸಿದ್ದಾರೆ. ಅಲ್ಲದೆ ಈಕೆ ಹಲವರಿಗೆ ಈ ರೀತಿ ವಂಚನೆ ಮಾಡಿರುವ ಆರೋಪಗಳು ಕೇಳಿ ಬರುತ್ತಿವೆ. ತನಿಖೆಯಿಂದಷ್ಟೆ ನೈಜಾಂಶ ಬಯಲಾಗಲಿದೆ.