ಕೂಡಿಗೆ, ಅ. ೧೪: ಸಮೀಪದ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿರುಪಾಕ್ಷ ಪುರದ ಸಮುದಾಯ ಭವನದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ರಸಲ್‌ಪುರ, ನಂಜರಾಪಟ್ಟಣ, ಹೊಸ ಪಟ್ಟಣ ವ್ಯಾಪ್ತಿಯ ೧೬ ಫಲಾನು ಭವಿಗಳಿಗೆ ಹಕ್ಕುಪತ್ರವನ್ನು ವಿತರಣೆ ಮಾಡಿದರು. ನಂತರ ಮಾತನಾಡಿದ ಅವರು, ಹಕ್ಕುಪತ್ರದ ಆಧಾರದ ಮೇಲೆ ಸಾಲ ಸೌಲಭ್ಯಗಳನ್ನು ಪಡೆದು ಆರ್ಥಿಕವಾಗಿ ಮುಂದುವರಿಯಲು ಅವಕಾಶವಿದ್ದು, ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಅಲ್ಲದೆ ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೬೦ ಅರ್ಜಿಗಳು ಬಾಕಿ ಇದ್ದು, ಇವುಗಳ ದಾಖಲೆಯಲ್ಲಿ ಅರಣ್ಯ ಪ್ರದೇಶ ಎಂದು ಇರುವುದರಿಂದ ಹಾಲಿ ಮನೆ ಕಟ್ಟಿಕೊಂಡಿರುವ ಗ್ರಾಮಸ್ಥರಿಗೆ ಅರಣ್ಯ ಹಕ್ಕು ಸಮಿತಿಯ ವತಿಯಿಂದ ಹಕ್ಕು ಪತ್ರವನ್ನು ನೀಡಲು ಅವಕಾಶವಿದೆ. ಈ ಸಂಬAಧ ಮುಂದಿನ ವಾರದಲ್ಲಿ ಇದೇ ಸಮುದಾಯ ಭವನದಲ್ಲಿ ಸಭೆ ಸೇರಿ ಚರ್ಚಿಸಿ ಹಕ್ಕುಪತ್ರ ವಿತರಣೆಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಸವನಹಳ್ಳಿ ಲ್ಯಾಂಪ್ ಸಹಕಾರ ಸಂಘದ ಅಧ್ಯಕ್ಷ ಚಂದ್ರು ವಹಿಸಿದ್ದರು. ಮುಖ್ಯ ಅತಿಥಿಯಾಗಿ ನಂಜರಾಯ ಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯ ರಾದ ರಕ್ಷಿತ್, ಗಿರಿಜಮ್ಮ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಚೆಂಗಪ್ಪ, ವಲಯ ಅರಣ್ಯ ಅಧಿಕಾರಿ ಕೆ.ವಿ. ಶಿವರಾಮ್, ಜಿಲ್ಲೆಯ ಯೋಜನಾ ಸಮನ್ವಯಾಧಿಕಾರಿ ಎಸ್. ಹೊನ್ನೇಗೌಡ, ಕುಶಾಲನಗರ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಧುಸೂದನ್, ಕಂದಾಯ ಪರಿವೀಕ್ಷಕ ಸಂತೋಷ್, ಲೆಕ್ಕಾಧಿಕಾರಿ ಸಚಿನ್, ಅಭಿವೃದ್ಧಿ ಅಧಿಕಾರಿ ರಾಕೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.