ಸೋಮವಾರಪೇಟೆ, ಅ. ೧೪: ದೃಢಮನಸ್ಸಿನಿಂದ ಮಾತ್ರ ದುಶ್ಚಟಗಳಿಂದ ದೂರವಿದ್ದು, ಸ್ವಸ್ಥ ಸಮಾಜ ಹಾಗೂ ನೆಮ್ಮದಿಯ ಕೌಟುಂಬಿಕ ಜೀವನ ನಡೆಸಲು ಸಾಧ್ಯವೆಂದು ಕೊಡ್ಲಿಪೇಟೆ ಕಲ್ಲುಮಠದ ಶ್ರಿ. ಮಹಾಂತ ಸ್ವಾಮಿಜಿ ತಿಳಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ನವಜೀವನ ಸಮಿತಿ ಸದಸ್ಯರ ಸಮಾವೇಶ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನಸ್ಸಿನ ಹಿಡಿತದ ಮುಂದೆ ಯಾವುದೂ ಇಲ್ಲ. ದುಶ್ಚಟಗಳಿಂದ ದೂರವಿದ್ದರೆ ಮಾತ್ರ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಇಂದು ಬಹುತೇಕ ಯುವಜನಾಂಗ ಹಾದಿತಪ್ಪಿದೆ. ದುಶ್ಚಟಗಳಿಗೆ ಬಲಿಬಿದ್ದು ಅನಾವಶ್ಯಕವಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ವಿಷಾದಿಸಿದರು.

ಇವುಗಳನ್ನು ಗಮನಿಸಿ ವೀರೇಂದ್ರ ಹೆಗ್ಗಡೆಯವರು ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಮದ್ಯವರ್ಜನ ಶಿಬಿರದಲ್ಲಿ ವ್ಯಸನ ಮುಕ್ತರನ್ನಾಗಿಸುತ್ತಿರುವುದು ಶ್ಲಾಘನೀಯ. ಇದರೊಂದಿಗೆ ಹಲವಷ್ಟು ಸಮಾಜ ಸುಧಾರಣೆಯ ಕಾರ್ಯಗಳನ್ನು ಕೈಗೊಂಡು ಸುಭೀಕ್ಷ ಸಮಾಜ ನಿರ್ಮಿಸಲು ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಮಾವೇಶವನ್ನು ಉದ್ಘಾಟಿಸಿದ ಶಾಸಕ ಅಪ್ಪಚ್ಚು ರಂಜನ್ ಮಾತನಾಡಿ, ರಾಜ್ಯದ ಜನತೆಯ ಅಭ್ಯುದಯಕ್ಕಾಗಿ ಸರ್ಕಾರ ಮಾಡುತ್ತಿರುವ ಹಲವು ಪ್ರಗತಿಪರ ಕಾರ್ಯಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯೂ ಸಹ ಅನುಷ್ಠಾನಕ್ಕೆ ತರುತ್ತಿರುವುದು ಶ್ಲಾಘನೀಯವೆಂದರು.

ಹಲವು ಮಂದಿ ಕುಡಿತದ ಚಟಕ್ಕೆ ಬಿದ್ದು ಮನೆ, ಸಂಸಾರವನ್ನು ಕಳೆದುಕೊಡಿದ್ದಾರೆ. ಹಲವು ಸಂಸಾರಗಳು ಸಮಸ್ಯೆಯ ಸುಳಿಯಲ್ಲಿ ಸಿಲುಕಿವೆ. ಅಂತಹ ಸಂಸಾರಗಳನ್ನು ಸರಿಪಡಿಸಲು, ಯುವಕರನ್ನು ಸರಿದಾರಿಗೆ ತರಲು ಇಂತಹ ಮದ್ಯವರ್ಜನ ಶಿಬಿರ ಸಹಕಾರಿಯಾಗಿದೆ ಎಂದರು.

ಇAದು ಸರ್ಕಾರದೊಂದಿಗೆ ಕೈಜೋಡಿಸಿ ಮಧ್ಯಮ ವರ್ಗ, ಕೂಲಿ ಕಾರ್ಮಿಕರ ಶ್ರೇಯೋಭಿವೃದ್ಧಿಗೆ ರೂಪಿಸಿರುವ ಯೋಜನೆಗಳನ್ನು ಜಾರಿಗೆ ತರುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಶ್ರಮಿಸುತ್ತಿದೆ ಎಂದರು.

ಈ ಸಂದರ್ಭ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜನ ಜಾಗೃತಿ ಸಮಿತಿಯ ಮಾಜಿ ಅಧ್ಯಕ್ಷ ಅಭಿಮನ್ಯುಕುಮಾರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಚೌಡ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಅಬಕಾರಿ ನಿರೀಕ್ಷಕ ಲೋಕೇಶ್, ಜಿಲ್ಲಾ ಜನ ಜಾಗೃತಿ ಸಮಿತಿ ಅಧ್ಯಕ್ಷ ಸತೀಶ್ ಹೊನ್ನವಳ್ಳಿ, ಯೋಜನೆಯ ಜಿಲ್ಲಾ ನಿರ್ದೇಶಕಿ ಲೀಲಾವತಿ, ಕೊಡಗು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯ ಎಸ್. ಮಹೇಶ್, ತಾಲೂಕು ಯೋಜನಾಧಿಕಾರಿ ರೋಹಿತ್, ಜನಜಾಗೃತಿ ಸಮಿತಿ ಸದಸ್ಯರುಗಳಾದ ಸೋಮೇಶ್, ಸುರೇಶ್, ಭಗವಾನ್, ಗಿರೀಶ್, ಲೀಲಾ ನಿರ್ವಾಣಿ ಸೇರಿದಂತೆ ಇತರರು ಉಪಸ್ಥಿತರಿದ್ದರು.