ಸೋಮವಾರಪೇಟೆ, ಅ. ೧೪: ತಾ. ೧೧ರಂದು ಉತ್ತರಾಖಂಡ್ನ ಜೋಷಿಮಟ್ನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಇಹಲೋಕ ತ್ಯಜಿಸಿದ ಸಮೀಪದ ತಾಕೇರಿ ಗ್ರಾಮ ನಿವಾಸಿ ನಾಪಂಡ ಸಿ. ಮಹೇಶ್ ಅವರ ಅಂತ್ಯಕ್ರಿಯೆಯನ್ನು ಇಂದು ಸಕಲ ಸರ್ಕಾರಿ ಗೌರವಗಳೊಂದಿಗೆ ಹುಟ್ಟೂರು ತಾಕೇರಿ ಗ್ರಾಮದಲ್ಲಿ ನೆರವೇರಿಸಲಾಯಿತು.
ಕರ್ತವ್ಯದಲ್ಲಿದ್ದ ಸಂದರ್ಭವೇ ಹೃದಯಾಘಾತಕ್ಕೀಡಾಗಿ ವಿಧಿವಶರಾಗಿದ್ದ ತಾಕೇರಿ ಗ್ರಾಮದ ನಾಪಂಡ ದಿ. ಚಂಗಪ್ಪ ಅವರ ಪುತ್ರ ಎನ್.ಸಿ. ಮಹೇಶ್ (೪೬) ಅವರ ಮೃತದೇಹವನ್ನು ಇಂದು ಕಿರಗಂದೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಟ್ಟು ಸಕಲ ಸರ್ಕಾರಿ ಗೌರವಗಳನ್ನು ಸಲ್ಲಿಸಲಾಯಿತು. ನಂತರ ಮೆರವಣಿಗೆ ಮೂಲಕ ಸ್ವಗ್ರಾಮಕ್ಕೆ ಕೊಂಡೊಯ್ದು, ಅಂತ್ಯಕ್ರಿಯೆ ನೆರವೇರಿಸಲಾಯಿತು.
ಸರ್ಕಾರಿ ಶಾಲಾ ಆವರಣದಲ್ಲಿ ಕುಟುಂಬಸ್ಥರು, ಸುತ್ತಮುತ್ತಲ ಗ್ರಾಮಸ್ಥರು, ಮಾಜಿ ಸೈನಿಕರು, ಹಿತೈಷಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಉತ್ತರಾಖಂಡ್ನ ಜೋಷಿಮಟ್ನಲ್ಲಿ ಸಹಪಾಠಿಗಳಾಗಿದ್ದ ಸುಬೇದಾರ್ ವಿ. ಮಣಿ, ಹವಾಲ್ದಾರ್ ಪ್ರಸಾದ್, ನಾಯಕ್ ಟಿ.ಆರ್. ರಾಹುಲ್ ಅವರುಗಳು ರಾಷ್ಟçಧ್ವಜವನ್ನು ಶವಪೆಟ್ಟಿಗೆಯ ಮೇಲಿರಿಸಿ ನಮನ ಸಲ್ಲಿಸಿದರು.
ಕೊಡಗು ಪೊಲೀಸ್ ಇಲಾಖೆಯ ವತಿಯಿಂದ ಎಸ್.ಪಿ. ಕಚೇರಿ ಮೂಲಕ ನೀಡಿದ್ದ ಪುಷ್ಪಗುಚ್ಚವನ್ನು ಡಿವೈಎಸ್ಪಿ ಗಂಗಾಧರಪ್ಪ, ಸೋಮವಾರಪೇಟೆ ವಿಭಾಗದ ಪುಷ್ಪಗುಚ್ಚವನ್ನು ಪೊಲೀಸ್ ಇನ್ಸ್ಪೆಕ್ಟರ್ ರಾಮಚಂದ್ರ ನಾಯಕ್ ಅವರುಗಳು ಅರ್ಪಿಸಿ ಗೌರವ ವಂದನೆ ಸಲ್ಲಿಸಿದರು.
ಮಡಿಕೇರಿ ಡಿಎಆರ್ ಘಟಕದ ಸಿಬ್ಬಂದಿಗಳು ಆರಕ್ಷಕ ಉಪನಿರೀಕ್ಷಕ ಡಿ. ಬಸವರಾಜ ಅವರ ನೇತೃತ್ವದಲ್ಲಿ ೩ ಸುತ್ತು ಕುಶಾಲತೋಪು ಸಿಡಿಸಿದರು. ಎಎಸ್ಐ ಸಿದ್ದೇಶ್ ಅವರ ನೇತೃತ್ವದಲ್ಲಿ ಪೊಲೀಸರ
(ಮೊದಲ ಪುಟದಿಂದ) ತಂಡ ಬ್ಯಾಂಡ್ ಬಾರಿಸಿ ನಮನ ಸಲ್ಲಿಸಿತು.
ಸಾರ್ವಜನಿಕ ದರ್ಶನದ ನಂತರ ಶವಪೆಟ್ಟಿಗೆಯ ಮೇಲಿದ್ದ ರಾಷ್ಟçಧ್ವಜವನ್ನು ತೆಗೆದು ಮಹೇಶ್ ಅವರ ಪತ್ನಿ ವಿನಂತಿ ಅವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು. ರಾಷ್ಟçಧ್ವಜದ ಮೇಲಿದ್ದ ಮಹೇಶ್ ಅವರ ಭಾವಚಿತ್ರವನ್ನು ಸವರುತ್ತಾ ಪತ್ನಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು. ಮಗನನ್ನು ಕಳೆದುಕೊಂಡ ತಾಯಿ ಮಲ್ಲಿಗೆ ಅವರ ಗೋಳಾಟ ನಿರಂತರವಾಗಿತ್ತು.
ನAತರ ಮೆರವಣಿಗೆ ಮೂಲಕ ಮಹೇಶ್ ಅವರ ಮೃತದೇಹವನ್ನು ಹುಟ್ಟೂರಿಗೆ ಕೊಂಡೊಯ್ದು ಮಧ್ಯಾಹ್ನ ೨ ಗಂಟೆ ಸುಮಾರಿಗೆ ಅಂತ್ಯಸAಸ್ಕಾರ ಮಾಡಲಾಯಿತು.
ಕುಟುಂಬಸ್ಥರು, ಗ್ರಾಮಸ್ಥರು, ಸಾರ್ವಜನಿಕರು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಉತ್ತರಾಖಂಡ್ನಲ್ಲಿ ಜೊತೆಗಾರರಾಗಿದ್ದ ಮೂವರು ಸೈನಿಕರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿ, ‘ಸುಬೇದಾರ್ ಮಹೇಶ್ ಅಮರ್ ರಹೆ, ಭಾರತ್ ಮಾತಾ ಕೀ ಜೈ, ವಂದೇ ಮಾತರಂ’ ಘೋಷಣೆಗಳನ್ನು ಕೂಗಿದರು.
ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್, ತಹಶೀಲ್ದಾರ್ ನರಗುಂದ್ ಸೇರಿದಂತೆ ಕಂದಾಯ ಇಲಾಖಾ ಅಧಿಕಾರಿಗಳು, ಕಿರಗಂದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ರಘು ಸೇರಿದಂತೆ ಸದಸ್ಯರುಗಳು, ಗ್ರಾಮಾಭಿವೃದ್ಧಿ ಸಮಿತಿ ಪ್ರಮುಖರು, ಗ್ರಾಮದ ಹಿರಿಯರು ಅಂತ್ಯಕ್ರಿಯೆ ಸಂದರ್ಭ ಭಾಗಿಯಾಗಿ ನಮನ ಸಲ್ಲಿಸಿದರು.ಸೈನಿಕ ಮಹೇಶ್ ಅವರ ಮೃತದೇಹವನ್ನು ಸಾರ್ವಜನಿಕ ದರ್ಶನಕ್ಕೆ ಇಟ್ಟಿದ್ದ ಸಂದರ್ಭ ಸುಬೇದಾರ್ ವಿ. ಮಣಿ ಅವರು ರಾಷ್ಟçಧ್ವಜವನ್ನು ಶವಪೆಟ್ಟಿಗೆಯ ಮೇಲಿಂದ ತೆಗೆದು ಮಹೇಶ್ ಅವರ ಪತ್ನಿ ವಿನಂತಿ ಅವರಿಗೆ ನೀಡಿ ಸೆಲ್ಯೂಟ್ ಮಾಡಿದರು. ಈ ಸಂದರ್ಭ ಇಡೀ ಆವರಣದಲ್ಲಿ ನಿಶ್ಯಬ್ಧ ಮನೆ ಮಾಡಿತ್ತು. ಇದೇ ಸಂದರ್ಭ ಪಕ್ಕದಲ್ಲೇ ಇದ್ದ ಮಹೇಶ್ ಅವರ ಪುತ್ರಿ ೧೦ರ ಪ್ರಾಯದ ತೀಶ್ಮಾ ‘ಅಮರ್ ರಹೇ ಡ್ಯಾಡಿ- ಜೈ ಹಿಂದ್’ ಎಂದು ಘೋಷಣೆ ಮೊಳಗಿಸಿ ಸೆಲ್ಯೂಟ್ ಮಾಡಿದಳು. ಇದನ್ನು ಕಂಡ ಎಲ್ಲರ ಕಣ್ಣಾಲಿಗಳಲ್ಲಿ ನೀರು ಹರಿದಾಡಿತು. ತೀಶ್ಮಾಳ ಕಣ್ಣಂಚು ಒದ್ದೆಯಾಗಿತ್ತು!