ಪಾಲಿಬೆಟ್ಟ ಅ.೧೪: ಕಾಫಿ ತೋಟದ ಕೆಲಸಗಳಿಗೆ ಅನಿವಾರ್ಯ ವಾಗಿರುವ ಕಾರ್ಮಿಕರಿಂದಾಗಿ ಭವಿಷ್ಯದಲ್ಲಿ ವಿದೇಶಗಳಿಂದಲೂ ಕಾರ್ಮಿಕರನ್ನು ಕರೆತರುವ ಪರಿಸ್ಥಿತಿ ಬಂದೊದಗುವ ಸಾಧ್ಯತೆ ನಿರ್ಮಾಣವಾದರೂ ಅಚ್ಚರಿ ಇಲ್ಲ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ವಕ್ತಾರ ಕೆ.ಕೆ.ವಿಶ್ವನಾಥ್ ಅಭಿಪ್ರಾಯಪಟ್ಟರು.
ಪಾಲಿಬೆಟ್ಟದಲ್ಲಿ ಆಯೋಜಿತ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೆ.ಕೆ.ವಿಶ್ವನಾಥ್ ಮೊದಲಿನ ಕಾಲದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಶ್ರೀಲಂಕಾದ ವಲಸಿಗರನ್ನು ಕೊಡಗಿನ ಕಾಫಿ ತೋಟಗಳಿಗೆ ಕಾರ್ಮಿಕರಾಗಿ ಕರೆತರಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಒರಿಸ್ಸಾ, ಬಿಹಾರದ ಕಾರ್ಮಿಕರು ಕೊಡಗಿಗೆ ಬಂದರು. ಇದೀಗ ಕೊಡಗಿನಲ್ಲಿ ಅಸ್ಸಾಂ ಮೂಲದ ಕಾರ್ಮಿಕರೇ ಕಂಡುಬರುತ್ತಿದ್ದಾರೆ. ಕಾಫಿ ತೋಟಗಳಿಗೆ ಅತ್ಯಗತ್ಯವಾಗಿ ಬೇಕಾಗಿರುವ ಕಾರ್ಮಿಕರನ್ನು ಇದೇ ಪರಿಸ್ಥಿತಿ ಮುಂದುವರೆದರೆ ವಿದೇಶಗಳಿಂದಲೂ ಕಾರ್ಮಿಕರನ್ನು ಕರೆತರುವ ಪರಿಸ್ಥಿತಿ ತಲೆದೋರುತ್ತದೆ. ಬೇರೆ ದೇಶಗಳಲ್ಲಿಯೂ ವಿದೇಶಗಳಿಂದ ಕಾರ್ಮಿಕರನ್ನು ಕರೆಸಿ ಕೆಲಸ ಮಾಡಿಸುವ ವ್ಯವಸ್ಥೆ ಈಗಾಗಲೇ ಪ್ರಾರಂಭವಾಗಿದೆ ಎಂದು ವಿಶ್ವನಾಥ್ ಹೇಳಿದರು.
ಮುಂದಿನ ಪೀಳಿಗೆಗೆ ಕಾಫಿ ಮೇಲೆ ಆಸಕ್ತಿ ಉಂಟಾಗುವAತೆ ಗಮನ ಹರಿಸಬೇಕಾಗಿದೆ. ಈ ಮೂಲಕ ಭಾರತೀಯ ಕಾಫಿಗೆ ಕಾಯಕಲ್ಪ ನೀಡಬೇಕಾಗಿದೆ ಎಂದು ವಿಶ್ವನಾಥ್ ಹೇಳಿದರಲ್ಲದೇ, ಕಾಫಿಗೆ ನವತಳಿಗಳ ಅಗತ್ಯ ಉಂಟಾಗಿದ್ದು ಈ ನಿಟ್ಟಿನಲ್ಲಿ ಕಾಫಿ ಮಂಡಳಿಯಿAದ ಹೊಸ ಕಾಫಿ ತಳಿಗಳನ್ನು ಸೃಷ್ಟಿಸುವ ಬಗ್ಗೆ ಚಿಂತನೆ ನಡೆದಿದೆ. ಮುಂದಿನ ದಿನಗಳಲ್ಲಿ ಕೃಷಿಕರು ಹೊಸ ಕಾಫಿ ತಳಿಗಳ ಬೆಳೆಯುವಿಕೆಗೆ ಆದ್ಯತೆ ನೀಡಬೇಕಾಗಿದೆ ಕೊಡಗಿನಲ್ಲಿ ಸಾವಿರಾರು ಎಕರೆ ಕೃಷಿ ಭೂಮಿ ತೆರಿಗೆಯಿಂದ ಹೊರತಾಗಿದೆ. ಇಂಥ ಜಮೀನನ್ನು ಕಂದಾಯ ತೆರಿಗೆ ವ್ಯಾಪ್ತಿಗೆ ತರಬೇಕಾಗಿದೆ. ಇಲ್ಲದೇ ಹೋದಲ್ಲಿ ಪ್ರಕೃತ್ತಿ ವಿಕೋಪದಂತಹ ಸಂದರ್ಭ ಸರ್ಕಾರದ ಪರಿಹಾರ ದೊರಕ ದಂತಾಗುವ ಸಾಧ್ಯತೆ ಇದೆ ಎಂದು ವಿಶ್ವನಾಥ್ ಹೇಳಿದರು. ಕೊಡಗಿನ ಖುಷ್ಕಿ ಜಮೀನಿಗೆ ಕಂದಾಯ ನಿಗದಿಪಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ವೂ ಶೀಘ್ರ ಸ್ಪಂದನೆ ನೀಡಿದ್ದು, ಕೃಷಿ ಭೂಮಿ ಮಾಲೀಕರಿಗೆ ಪ್ರಯೋಜನ ವಾಗಲಿದೆ ಎಂದು ಹೇಳಿದರು.
ಮಹಿಳಾ ಕಾಫಿ ಜಾಗೃತಿ ಸಂಘದ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ಪ್ರಸ್ತುತ ಸಂಘದಲ್ಲಿ ೨೫೦ ರಷ್ಟು ಸದಸ್ಯೆಯರಿದ್ದು ಕಾಫಿ ಸೇವನೆಗೆ ಉತ್ತೇಜನ ನೀಡುವಂತ ಕಾರ್ಯಕ್ರಮ ರೂಪಿಸಲಾಗುತ್ತಿದೆ, ಆಧುನಿಕ ತಂತ್ರಜ್ಞಾನಗಳನ್ನೂ ಕಾಫಿ ಉತ್ಪಾದನೆಗೆ ಬಳಸುವ ಅಗತ್ಯವಿರುವ ಈ ಕಾಲಘಟ್ಟದಲ್ಲಿ ಮಹಿಳೆಯರೂ ಕೂಡ ನವನವೀನ ತಂತ್ರಜ್ಞಾನದ ಕುರಿತಂತೆ ತಿಳುವಳಿಕೆ ಹೊಂದಿರಬೇಕಾಗಿದೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಅನಿತಾ ಅಯ್ಯಣ್ಣ ಮಾತನಾಡಿ, ಕಾಫಿ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದ್ದ ಕೊಡಗು ಇತ್ತೀಚಿನ ವರ್ಷಗಳಲ್ಲಿ ಹಿರಿಯ ನಾಗರಿಕರ ಜಿಲ್ಲೆ ಎಂಬ ಹೆಸರಿಗೆ ಕಾರಣವಾಗುತ್ತಿದೆ. ಯುವಪೀಳಿಗೆ ಕಾಫಿ ತೋಟವನ್ನೇ ಮರೆತು ಮಹಾನಗರಗಳಿಗೆ ವಲಸೆ ಹೋಗುತ್ತಿರುವ ಉದಾಹರಣೆ ಹೆಚ್ಚಾಗುತ್ತಿದೆ ಎಂದು ವಿಷಾದಿಸಿದರು.
ವೇದಿಕೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ಸಂಘಟನಾ ಕಾರ್ಯದರ್ಶಿ ರೀಟಾ ದೇಚಮ್ಮ, ರಾಣಿ ನರೇಂದ್ರ, ಖಜಾಂಜಿ ಕುಮಾರಿ ಕುಂಜ್ಞಪ್ಪ ಹಾಜರಿದ್ದರು. ಶರಿನ್ ನಂಜಪ್ಪ ಪ್ರಾರ್ಥಿಸಿ, ಸುಮಾ ತಿಮ್ಮಯ್ಯ ವಂದಿಸಿದರು. ಜಿಲ್ಲೆಯ ವಿವಿಧೆಡೆ ಗಳಿಂದ ಬಂದಿದ್ದ ಸಂಘದ ಸದಸ್ಯೆಯರು ವಾರ್ಷಿಕ ಮಹಾಸಭೆ ಯಲ್ಲಿ ಪಾಲ್ಗೊಂಡಿದ್ದರು. ಸುಂಟಿಕೊಪ್ಪದ ಸ್ವಸ್ಥ ವಿಶೇಷ ಮಕ್ಕಳ ಶಾಲಾ ವಿದ್ಯಾರ್ಥಿಗಳು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಗಮನ ಸೆಳೆಯಿತು.