ಮಡಿಕೇರಿ, ಅ. ೧೪: ತೀರ್ಥೋದ್ಭವ ಮುಗಿದ ಬಳಿಕ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಸ ಶೇಖರಗೊಳ್ಳುವ ಹಿನ್ನೆಲೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ವತಿಯಿಂದ ಕುಶಾಲನಗರದಿಂದ ತಲಕಾವೇರಿಯ ತನಕ ಶ್ರಮದಾನ ನಡೆಯಲಿದೆ ಎಂದು ಒಕ್ಕೂಟ ತಿಳಿಸಿದೆ.
ನಗರದ ಕೊಡಗು ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಖಜಾಂಜಿ ಆನಂದ್ ಕರಂದ್ಲಾಜೆ, ತಾ. ೧೯ ರಂದು ಕುಶಾಲನಗರದ ಕಾವೇರಿ ಪ್ರತಿಮೆಯಿಂದ ಆರಂಭಗೊAಡು ತಲಕಾವೇರಿ ತನಕ ವಿವಿಧ ಗೌಡ ಸಮಾಜಗಳು ಸೇವಾ ಸಂಸ್ಥೆಗಳ, ಪಂಚಾಯಿತಿಗಳ ಸಹಕಾರ ಪಡೆದು ಶ್ರಮದಾನ ನಡೆಸಲಿವೆ. ಕುಶಾಲನಗರ, ಆಲೂರು-ಸಿದ್ದಾಪುರ, ಗುಡ್ಡೆಹೊಸೂರು, ಸುಂಟಿಕೊಪ್ಪ ಗೌಡ ಸಮಾಜಗಳು ಮಡಿಕೇರಿ ತನಕ ಶ್ರಮದಾನ ನಡೆಸಿದರೆ, ಮಡಿಕೇರಿ ಗೌಡ ಯುವ ವೇದಿಕೆ, ಚೇರಂಬಾಣೆ ಗೌಡ ಸಮಾಜ, ಗೌಡ ಮಹಿಳಾ ಒಕ್ಕೂಟ, ಕೊಡಗು ಗೌಡ ವಿದ್ಯಾಸಂಘ ತಲಕಾವೇರಿ ತನಕ ಶ್ರಮದಾನ ನಡೆಸಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಒಕ್ಕೂಟದ ನಿರ್ದೇಶಕ ಚಿಲ್ಲನ ಗಣಿಪ್ರಸಾದ್, ಕಾರ್ಯದರ್ಶಿ ಪೇರಿಯನ ಉದಯ, ಕುಶಾಲನಗರ ಗೌಡ ಸಮಾಜದ ಅಧ್ಯಕ್ಷ ಕೂರನ ಪ್ರಕಾಶ್, ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಹಾಜರಿದ್ದರು.