ಮಡಿಕೇರಿ, ಅ. ೧೨ : ಕೊಡವ ಜನಾಂಗದವರಲ್ಲಿ ಹಾಕಿ ಆಟದ ಕೌಶಲ್ಯ ರಕ್ತಗತವಾಗಿ ಬಂದಿದೆ. ಹಾಕಿ ಕ್ರೀಡೆಯ ಮೂಲಕ ಬದುಕು ಕಂಡುಕೊಳ್ಳಲು ಕೂಡ ಯುವ ಜನಾಂಗದವರಿಗೆ ಸಾಕಷ್ಟು ಅವಕಾಶಗಳು ಪ್ರಸ್ತುತ ಇವೆ. ಈ ನಿಟ್ಟಿನಲ್ಲಿ ಇದಕ್ಕೆ ಪೂರಕವೆಂಬAತಿರುವ ಕೊಡವ ಕೌಟುಂಬಿಕ ಹಾಕಿ ಉತ್ಸವದ ನಿರಂತರತೆಯನ್ನು ಕಾಪಾಡಲು ಅಗತ್ಯ ಪ್ರಯತ್ನ ನಡೆಸುವುದಾಗಿ ಕೊಡವ ಹಾಕಿ ಅಕಾಡೆಮಿಯ ನೂತನ ಅಧ್ಯಕ್ಷರಾಗಿರುವ ಪಾಂಡAಡ ಕೆ. ಬೋಪಣ್ಣ ಅವರು ಮನದಿಂಗಿತ ವ್ಯಕ್ತಪಡಿಸಿದ್ದಾರೆ.
‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಕೌಟುಂಬಿಕ ಹಾಕಿ ಉತ್ಸವದ ಜನಕ ಪಾಂಡAಡ ಎಂ. ಕುಟ್ಟಪ್ಪ (ಕುಟ್ಟಣಿ) ಅವರ ಪುತ್ರರೂ ಆಗಿರುವ ಬೋಪಣ್ಣ ಅವರು ಹಾಕಿಯ ಉತ್ತೇಜನಕ್ಕೆ ಅಕಾಡೆಮಿಯ ಮೂಲಕ ಕೆಲವಾರು ಚಿಂತನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕೊಡವ ಕೌಟುಂಬಿಕ ಹಾಕಿ ಉತ್ಸವ ಕೇವಲ ಒಂದು ಉತ್ಸವವಾಗಿ ಮಾತ್ರ ನಡೆಯದೆ ವೃತ್ತಿಪರ ಪಂದ್ಯಾವಳಿಯ ಮಟ್ಟದಲ್ಲೇ ನಡೆಯುವ ಮೂಲಕ ಎಲ್ಲೆಡೆ ಹೆಸರು ಮಾಡಿದೆ. ಆದರೆ ಕಳೆದ ಕೆಲವು ವರ್ಷಗಳಿಂದ ಕೊಡಗಿನಲ್ಲಿ ಪ್ರಾಕೃತಿಕ ದುರಂತ ಹಾಗೂ ಕೊರೊನಾ ಪರಿಸ್ಥಿತಿಯಿಂದಾಗಿ ಈ ಪಂದ್ಯಾವಳಿ ನಡೆಸಲು ಸಾಧ್ಯವಾಗಿರಲಿಲ್ಲ. ಇದೀಗ ಇದನ್ನು ಮತ್ತೆ ಈ ಹಿಂದಿನ ವೈಭವಕ್ಕೆ ತರುವ ನಿಟ್ಟಿನಲ್ಲಿ ಒಂದು ಪ್ರಯತ್ನವೆಂಬAತೆ ೫ಂ ಸೈಡ್ ಕೌಟುಂಬಿಕ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಇದಲ್ಲದೆ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಪ್ರಾರಂಭಿಸಿದ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷರೂ ಆಗಿದ್ದ ಪಾಂಡAಡ ಕುಟ್ಟಪ್ಪ ಅವರು ೨೦೨೦ರ ಮೇ ೭ ರಂದು ಸ್ವರ್ಗೀಯರಾಗಿದ್ದಾರೆ. ಆದರೆ ಆ ಸಂದರ್ಭದಲ್ಲಿನ ವಿಭಿನ್ನ ಪರಿಸ್ಥಿತಿಯಿಂದಾಗಿ ಅವರ ಸ್ಮರಣಾರ್ಥವಾಗಿ ಯಾವುದೇ ಕಾರ್ಯಕ್ರಮಗಳನ್ನು ನಡೆಸಲೂ ಸಾಧ್ಯವಾಗಿರಲಿಲ್ಲ. ಇದೀಗ ಹಲವರ ಅಭಿಲಾಷೆಯಂತೆ ಅವರ ಸ್ಮರಣಾರ್ಥವಾಗಿ ಕೂಡ ೫ಂ ಸೈಡ್ ಹಾಕಿಯ ಮೂಲಕ ಮುಂದಿನ ವರ್ಷದ ಕೌಟುಂಬಿಕ ಹಾಕಿಯ ವೈಭವ ಮರುಕಳಿಸುವಂತೆ ಮಾಡುವ ಪ್ರಯತ್ನವೂ ಇದಾಗಿದೆ ಎಂದು ಬೋಪಣ್ಣ ಹೇಳಿದರು.
ಹಾಕಿಯ ಬೆಳವಣಿಗೆಯ ನಿಟ್ಟಿನಲ್ಲಿ ಅಕಾಡೆಮಿಗೆ ಗುರುತರವಾದ ಜವಾಬ್ದಾರಿ ಇದೆ. ಈ ನಿಟ್ಟಿನಲ್ಲಿ ಪ್ರಸ್ತುತದ ಪಂದ್ಯಾವಳಿಯ ಮೂಲಕ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅಗತ್ಯ ಸಹಕಾರ ನೀಡುವ ಚಿಂತನೆಯನ್ನೂ ಮಾಡಲಾಗಿದೆ. ಇದಲ್ಲದೆ ಹಾಕಿ ಆಟದಲ್ಲಿ ಸಣ್ಣಮಟ್ಟದಿಂದ ದೊಡ್ಡ ಮಟ್ಟದವರೆಗೆ ಸಾಧನೆ ಮಾಡಿರುವ ವಿವಿಧ ಕುಟುಂಬಗಳ ಹಾಕಿ ಆಟಗಾರರ ಮಾಹಿತಿಯನ್ನು ಒಳಗೊಂಡ ‘ಡೈರಕ್ಟರಿ’ ಹೊರತರುವ ಯೋಜನೆ ಇದೆ. ಇದಲ್ಲದೆ ಈತನಕದ ಕೌಟುಂಬಿಕ ಹಾಕಿ ಉತ್ಸವ ನಡೆದುಬಂದ ಹಾದಿ, ಒಲಂಪಿಯನ್‌ಗಳು, ಇನ್ನಿತರ ಪ್ರತಿಷ್ಠಿತ ಆಟಗಾರರ ವಿವರಗಳ ಸಹಿತವಾಗಿ ವೆಬ್‌ಸೈಟ್ ರೂಪಿಸುವುದು ಸೇರಿದಂತೆ ಇನ್ನೂ ಹಲವಷ್ಟು ಪ್ರಯೋಜನಕಾರಿಯಾಗುವ ಚಟುವಟಿಕೆಗಳನ್ನು ಅಕಾಡೆಮಿ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದರು.
ವಾರ್ಷಿಕವಾದ ಕೌಟುಂಬಿಕ ಹಾಕಿ ಪಂದ್ಯಾವಳಿಯೊAದಿಗೆ ೫ಂ ಸೈಡ್ ಹಾಕಿಯನ್ನೂ ವರ್ಷಂಪ್ರತಿ ಅಕಾಡೆಮಿ ಮೂಲಕ ನಡೆಸುವ ಬಗ್ಗೆಯೂ ಚಿಂತನೆಯಿದೆ.
(ಮೊದಲ ಪುಟದಿಂದ) ಇದಕ್ಕೆ ಸಿಗುವ ಪ್ರೋತ್ಸಾಹದ ಮೇಲೆ ಈ ನಿರ್ಧಾರ ಕೈಗೊಳ್ಳಲಿರುವುದಾಗಿ ಹೇಳಿದ ಬೋಪಣ್ಣ ಅವರು, ೨೦೨೩ರಲ್ಲಿ ನಡೆಯಲಿರುವ ಅಪ್ಪಚೆಟ್ಟೋಳಂಡ ಕಪ್ ಹಾಕಿಗೆ ಅಕಾಡೆಮಿ ಎಲ್ಲಾ ರೀತಿಯ ಸಹಕಾರ ನೀಡಲಿದೆ.
ಇದರೊಂದಿಗೆ ಮುಂದಿನ ವರ್ಷಗಳ ಉತ್ಸವ ನಡೆಸಲು ಹಲವು ಕುಟುಂಬಗಳು ಈಗಾಗಲೇ ಹೆಸರು ನೋಂದಾಯಿಸಿಕೊAಡಿವೆ. ಒಂದು ವೇಳೆ ಕಾರಣಾಂತರಗಳಿAದ ಯಾವುದಾದರು ವರ್ಷ ಉತ್ಸವ ನಡೆಸಲು ಯಾವುದೇ ಕುಟುಂಬ ಮುಂದೆ ಬಾರದಿದಲ್ಲಿ ಆ ವರ್ಷ ಅಕಾಡೆಮಿಯ ಮೂಲಕವೇ ಉತ್ಸವ ಆಯೋಜಿಸಿ ನಿರಂತರತೆ ಕಾಯ್ದುಕೊಳ್ಳಲು ಅಕಾಡೆಮಿ ಸಿದ್ಧವಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಮುಂದಿನ ದಿನದಲ್ಲಿ ಸೂಕ್ತ ಪ್ರದೇಶದಲ್ಲಿ ಸುಸಜ್ಜಿತ ಕ್ರೀಡಾಂಗಣ, ವಸತಿ ನಿಲಯವನ್ನು ಪ್ರಾರಂಭಿಸುವ ಚಿಂತನೆಯೂ ಇದೆ. ಈ ಎಲ್ಲಾ ಚಟುವಟಿಕೆಗಳಿಗೆ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಸರಕಾರ, ಜನಪ್ರತಿನಿಧಿಗಳ ಹಾಗೂ ಸರ್ವರ ಸಹಕಾರವನ್ನು ಬಯಸುವುದಾಗಿಯೂ ಅವರು ಅಭಿಲಾಷೆ ವ್ಯಕ್ತಪಡಿಸಿದರು. -ಶಶಿ ಸೋಮಯ್ಯ