ಸುಂಟಿಕೊಪ್ಪ, ಅ. ೧೩: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಹಿಳಾ ಸ್ವಸಹಾಯ ಸಂಘದ ಸಂಜೀವಿನಿ ಒಕ್ಕೂಟದ ವತಿಯಿಂದ ಸಂತೆ ಮೇಳವನ್ನು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಉದ್ಘಾಟಿಸಿದರು.
ಸಂಜೀವಿನಿ ಮಹಿಳಾ ಸ್ವಸಹಾಯ ಒಕ್ಕೂಟದ ೨೧ ಸಂಘಗಳ ಮಹಿಳೆಯರು ಈ ಸಂತೆ ಮೇಳದಲ್ಲಿ ಪಾಲ್ಗೊಂಡು ಮನೆಯಲ್ಲಿ ತಯಾರಿಸಿದ ತಿಂಡಿ-ತಿನಿಸುಗಳು, ಅಕ್ಕಿ, ಗೋಧಿ ಪುಡಿ, ಮೆಣಸು, ಸಂಬಾರ, ಮನೆಯಲ್ಲಿ ಬೆಳೆಸಿದ ತರಕಾರಿಗಳನ್ನು ಮಾರಾಟ ಮಾಡಿದರು.
ಮಹಿಳಾ ಸ್ವಸಹಾಯ ಸಂಘದ ಕಾರ್ಯಕ್ರಮದ ಜಿಲ್ಲಾ ವ್ಯವಸ್ಥಾಪಕ ಕುಮಾರ್ ಮಾತನಾಡಿ, ಮಹಿಳೆಯರು ಸ್ವಾವಲಂಬಿಗಳಾಗಿ ಬದುಕಲು ಸರಕಾರ ಪ್ರೋತ್ಸಾಹ ನೀಡುತ್ತಿದೆ. ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ, ಗ್ರಾ.ಪಂ. ಉಪಾಧ್ಯಕ್ಷೆ ಜಾನಕಿ ಮೇದಪ್ಪ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಾಲಕೃಷ್ಣ ರೈ, ಮಹಿಳಾ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಜಾತಾ ಬಾಲಕೃಷ್ಣ, ಗ್ರಾ.ಪಂ. ಸದಸ್ಯರುಗಳು, ಸ್ವಸಹಾಯ ಸಂಘದ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಸಂದೀಪ್ ಉಪಸ್ಥಿತರಿದ್ದರು.