ಕೃಷಿಕರ ಅಳಲು

ಗುಡ್ಡೆಹೊಸೂರು, ಅ. ೧೨: ಹೈನುಗಾರಿಕೆಯನ್ನು ದಶಕಗಳಿಂದ ನಡೆಸಿಕೊಂಡು ಬಂದು ಬಂಡಿ ಸಾಗಿಸುತ್ತಿರುವ ಗ್ರಾಮಸ್ಥರಿಗೆ ಪಶುಪಾಲನಾ ಇಲಾಖೆಯ ಸ್ಪಂದನ ಲಭಿಸದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತಾಗಿದೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಡ್ಡೆಹೊಸೂರು, ಚಿಕ್ಕಬೆಟ್ಟಗೇರಿ, ದೊಡ್ಡಬೆಟ್ಟಗೇರಿ ಮಾದಾಪಟ್ಟಣ, ಬೊಳೂರು, ಅತ್ತೂರು, ಕಬ್ಬಿನಗದ್ದೆ, ಬಸವನಹಳ್ಳಿ, ಅತ್ತೂರು, ಆನೆಕಾಡು ವಿಭಾಗದ ಕೃಷಿಕರು ಜಾನುವಾರುಗಳನ್ನು ಸಾಕಿ ಬೆಳಸಿ ಅದರ ಹಾಲನ್ನು ಮಾರಿ ಆದಾಯದ ಮೂಲ ಕಂಡುಕೊAಡಿದ್ದಾರೆ. ಅಂದಾಜು ೧೦,೦೦೦ ಜನಸಂಖ್ಯೆ ಇರುವ ಇಲ್ಲಿನ ಗ್ರಾಮಸ್ಥರು ಹೈನುಗಾರಿಕೆಯನ್ನು ಅನೇಕ ದಶಕಗಳಿಂದ ರೂಢಿಸಿಕೊಂಡಿದ್ದಾರೆ. ಗುಡ್ಡೆಹೊಸೂರಿನಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘದ ಶಾಖೆಗೆ ೮೦೦ ರಿಂದ ೯೦೦ ಮಂದಿ ಕೃಷಿಕರು ಪ್ರತಿದಿನ ೨೦೦೦ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದಾರೆ. ಜಾನುವಾರುಗಳ ಸಂಖ್ಯೆ ಕ್ಷೀಣಿಸುವ ಇಂದಿನ ಕಾಲಘಟ್ಟದಲ್ಲಿ ರಾಸುಗಳನ್ನು ಸಾಕಿ ಬೆಳೆಸಲು ರೈತರಿಗೆ ಸರಕಾರ ಪ್ರೋತ್ಸಾಹ ನೀಡಬೇಕಾಗಿದೆ. ಆದರೆ ಹಸು, ದನ, ಕರುಗಳಿಗೆ ಏನಾದರೂ ಖಾಯಿಲೆ ಬಂದರೆ ಗುಡ್ಡೆಹೊಸೂರಿನಲ್ಲಿ ಪಶುವೈದ್ಯ ಇಲಾಖೆಯ ವೈದ್ಯರು, ಸಿಬ್ಬಂದಿಗಳು ಲಭಿಸುತ್ತಿಲ್ಲ. ಅಂದಾಜು ೨೦ ವರ್ಷಗಳ ಹಿಂದೆ ಗುಡ್ಡೆಹೊಸೂರಿನಲ್ಲಿ ಜಿಲ್ಲಾ ಪಂಚಾಯಿತಿಯಿAದ ೧ ಪಶುವೈದ್ಯ ಇಲಾಖೆಯ ಕಚೇರಿಯ ಕಟ್ಟಡ ನಿರ್ಮಿಸಲಾಗಿತ್ತು. ಈ ಕಟ್ಟಡ ಸಿಬ್ಬಂದಿ ವೈದ್ಯರು ಇಲ್ಲದೆ ಅನಾಥವಾಗಿ ಬಿದ್ದಿದೆ. ದೂರದ ಕುಶಾಲನಗರಕ್ಕೆ ಜಾನುವಾರುಗಳಿಗೆ ಖಾಯಿಲೆ ಬಂದಾಗ ಕರೆದೊಯ್ಯುವ ದುಃಸ್ಥಿತಿ ಬಂದಿದೆ ಎಂದು ಕೃಷಿಕರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಶಾಸಕರು ಜಿಲ್ಲಾಡಳಿತ ಗುಡ್ಡೆಹೊಸೂರಿನಲ್ಲಿ ಪಶು ವೈದ್ಯ ಇಲಾಖೆಯ ವೈದ್ಯಾಧಿಕಾರಿಗಳನ್ನು ಕೂಡಲೇ ನೇಮಿ ಸಬೇಕು, ಹೈನು ಉದ್ಯಮಕ್ಕೆ ಪ್ರೋತ್ಸಾಹ ನೀಡಬೇಕು. ಇಲ್ಲದಿದ್ದಲ್ಲಿ ಮುಂದೆ ಬರುವ ಎಲ್ಲಾ ಚುನಾವಣೆಗಳನ್ನು ಬಹಿಷ್ಕರಿಸುವುದಾಗಿ ಹೈನುಗಾರಿಕೆಯನ್ನು ನಂಬಿ ಜೀವನ ನಡೆಸುತ್ತಿರುವ ಕೃಷಿಕರು ಆಗ್ರಹಿಸಿದ್ದಾರೆ.

ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯೂ ಈ ಬಗ್ಗೆ ಕ್ರಮ ವಹಿಸಬೇಕೆಂದು ಹೈನುಗಾರಿಕ ಕೃಷಿಕರು ತಿಳಿಸಿದ್ದಾರೆ.

ಗುಡ್ಡೆಹೊಸೂರು ಪಶುವೈದ್ಯ ಇಲಾಖೆಯ ಕಚೇರಿ ಇದೆ. ಆದರೆ ವೈದ್ಯರು, ಸಿಬ್ಬಂದಿಗಳು ಇಲ್ಲದೆ ಹೈನುಗಾರಿಕೆ ತೊಡಗಿಸಿಕೊಂಡವರಿಗೆ ತೊಂದರೆಯಾಗಿದೆ. ಹಿಂದಿನ ಸರಕಾರಕ್ಕೆ ಈಗಿನ ಸರಕಾರಕ್ಕೂ ಮನವಿ ಸಲ್ಲಿಸಿದ್ದರೂ ನಮಗೆ ಸ್ಪಂದನ ಸಿಕ್ಕಿಲ್ಲ ಎಂದು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಧನುಪಾಲ ಅವರು ತಿಳಿಸಿದ್ದಾರೆ.

-ವಿಶ್ವಾಸ್