ಮಡಿಕೇರಿ, ಅ. ೧೨: ದಕ್ಷಿಣ ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಕೂಟಿಯಾಲ ಹಾಗೂ ಕಡಮಕಲ್ಲು ರಸ್ತೆಯನ್ನು ಇನ್ನೂ ಕೂಡ ಕೈಗೆತ್ತಿಕೊಳ್ಳದಿರುವ ಬಗ್ಗೆ ಜಿಲ್ಲೆಯ ಶಾಸಕರುಗಳಾದ ಎಂ.ಪಿ. ಅಪ್ಪಚ್ಚು ರಂಜನ್ ಹಾಗೂ ಕೆ.ಜಿ. ಬೋಪಯ್ಯ ಅವರುಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಜಿ.ಪಂ. ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿದ ಶಾಸಕ ಎಂ.ಪಿ. ಅಪ್ಪಚ್ಚುರಂಜನ್, ಕಡಮಕಲ್ಲು-ಕೂಟಿಯಾಲ ರಸ್ತೆ ನಿರ್ಮಾಣಕ್ಕೆ ಕಳೆದ ೨೫ ವರ್ಷಗಳಿಂದ ಒತ್ತಾಯ ಮಾಡಿಕೊಂಡು ಬರಲಾಗಿದೆ. ಆದರೆ ಇದುವರೆಗೆ ಈ ಕಾರ್ಯ ಆಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಮ ಬಾಬು ಅವರು ಆನ್‌ಲೈನ್ ಮೂಲಕ ಇನ್ನೂ ಸಹ ಅರ್ಜಿ ಸ್ವೀಕಾರ ಆಗಿಲ್ಲ ಎಂದು ಮಾಹಿತಿ ನೀಡಿದರು.

ಇದಕ್ಕೆ ಆನ್‌ಲೈನ್ ಅರ್ಜಿ ಎಂದು ಹೇಳುವುದು ಸರಿಯಲ್ಲ. ಉದ್ದೇಶ ಪೂರ್ವಕವಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಸಮರ್ಪಕ ಮಾಹಿತಿ ಒದಗಿಸುತ್ತಿಲ್ಲ ಎಂದು ಕೆ.ಜಿ. ಬೋಪಯ್ಯ ಆರೋಪಿಸಿದರು.

ಕಡಮಕಲ್ಲು ರಸ್ತೆ ನಿರ್ಮಾಣವಾದರೆ ಮಳೆಗಾಲದಲ್ಲಿ ಮಂಗಳೂರು ರಸ್ತೆ ಕಡಿತಗೊಂಡಲ್ಲಿ ದಕ್ಷಿಣಕನ್ನಡಕ್ಕೆ ಸಂಪರ್ಕ ಕಲ್ಪಿಸಲು ಅನುಕೂಲವಾಗುತ್ತದೆ. ಸಾರ್ವಜನಿಕರಿಗೆ ಉಪಯುಕ್ತವಾಗುತ್ತದೆ; ಕಡಮಕಲ್ಲು, ಕೂಟಿಯಾಲ ರಸ್ತೆ ಸಂಬAಧ ಹೆಚ್ಚುವರಿ ಭೂಮಿಯನ್ನು ಸಹ ಅರಣ್ಯ ಇಲಾಖೆಗೆ ಒದಗಿಸಲಾಗಿದೆ. ಆದರೂ ಕಡಮಕಲ್ಲು-ಕೂಟಿಯಾಲ ರಸ್ತೆ ನಿರ್ಮಾಣ ಆಗುತ್ತಿಲ್ಲ ಎಂದು ತೀವ್ರ ಅತೃಪ್ತಿ ವ್ಯಕ್ತಪಡಿಸಿದರು.

ಮಾವುತರಿಗೆ ನೀರೊದಗಿಸಿ

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ದುಬಾರೆಯ ಹಲವು ಮಾವುತ ಕುಟುಂಬಗಳು ಕುಡಿಯುವ ನೀರು ಸಂಪರ್ಕವಿಲ್ಲದೆ ಪರಿತಪಿಸುತ್ತಿದ್ದು, ಕೂಡಲೇ ಕುಡಿಯುವ ನೀರು ಸಂಪರ್ಕಕ್ಕೆ ಅವಕಾಶ

(ಮೊದಲ ಪುಟದಿಂದ) ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಇರುವ ಎರಡು ಬೋರ್‌ವೆಲ್‌ಗಳು ಕೆಟ್ಟಿದ್ದು, ಕುಡಿಯುವ ನೀರಿಗೆ ತೊಂದರೆಯಾಗಿದೆ. ಕೂಡಲೇ ಕುಡಿಯುವ ನೀರು ಒದಗಿಸಬೇಕು. ಜಲಜೀವನ್ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿ ನೀರು ಅಳವಡಿಸಬೇಕು; ಮೈಸೂರು ದಸರಾಗೆ ಅಭಿಮನ್ಯು ಸೇರಿದಂತೆ ಹಲವು ಸಾಕಾನೆಗಳು ತೆರಳುತ್ತವೆ. ಅಲ್ಲಿನ ಮಾವುತರಿಗೆ ಕನಿಷ್ಟ ಸೌಲಭ್ಯವಿಲ್ಲದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ಸಚಿವ ಬಿ.ಸಿ. ನಾಗೇಶ್ ಅವರು ಮೈಸೂರು ದಸರಾ ಸಂದರ್ಭದಲ್ಲಿ ಮಾವುತರಿಗೆ ರಾಜ ಆತಿಥ್ಯ ನೀಡುತ್ತಾರೆ. ಅವರ ಮಕ್ಕಳ ಶಿಕ್ಷಣಕ್ಕೂ ಒತ್ತು ನೀಡುತ್ತಾರೆ. ಆದರೆ ಅವರ ಸ್ವ ಸ್ಥಳಕ್ಕೆ ಹಿಂದಿರುಗಿದಾಗ ಯಥಾಸ್ಥಿತಿ ಮುಂದುವರಿಯುತ್ತಿರುವುದು ಬೇಸರದ ಸಂಗತಿ. ರಾಜ್ಯದ ಗೌರವ ಎಂಬುದನ್ನು ಪರಿಗಣಿಸಿ ಮಾವುತರ ಕುಟುಂಬದವರಿಗೆ ಕುಡಿಯುವ ನೀರು ಸಂಪರ್ಕ ಕಲ್ಪಿಸುವಂತೆ ಸಂಬAಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅವರು ಮಾತನಾಡಿ ಜೀವ ವೈವಿಧ್ಯ ಮಂಡಳಿ ವ್ಯಾಪ್ತಿಗೆ ಕೃಷಿ, ತೋಟಗಾರಿಕೆ, ಅರಣ್ಯ ಮತ್ತಿತರ ಇಲಾಖೆಗಳು ಬರಲಿದ್ದು, ಜೀವ ವೈವಿಧ್ಯ ಸಂರಕ್ಷಣೆಗೆ ಎಲ್ಲರೂ ಕೈಜೋಡಿಸುವಂತೆ ಮನವಿ ಮಾಡಿದರು.

ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ಅವರು ಕೃಷಿ, ತೋಟಗಾರಿಕೆ, ಕಾಫಿ ಮಂಡಳಿ ಹಾಗೆಯೇ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬAಧಿಸಿದAತೆ ಸಭೆ ನಡೆಸಿ ನಿಖರ ಮಾಹಿತಿ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತಂದರು.

ಸುಜಾ ಕುಶಾಲಪ್ಪ ಅವರು ಹಲವು ವಿಚಾರಗಳ ಕುರಿತು ಪ್ರಸ್ತಾಪಿಸಿದರು. ಜಿ.ಪಂ.ಸಿಇಒ ಭಂವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುAಡೇಗೌಡ, ಉಪ ವಿಭಾಗಾಧಿಕಾರಿ ಯತೀಶ್ ಉಲ್ಲಾಳ್, ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಶಬಾನಾ ಎಂ. ಶೇಖ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಆರ್. ವೆಂಕಟೇಶ್, ಬಿಸಿಎಂ ಇಲಾಖೆ ಅಧಿಕಾರಿ ಎನ್. ಮಂಜುನಾಥ್ ಇತರರು ಇದ್ದರು.