ಸೋಮವಾರಪೇಟೆ, ಅ. ೧೧: ಕರ್ತವ್ಯದಲ್ಲಿದ್ದ ಜಿಲ್ಲೆಯ ಯೋಧ ರೋರ್ವರು ಹೃದಯಾಘಾತಕ್ಕೀಡಾಗಿ ವಿಧಿವಶರಾಗಿರುವ ಘಟನೆ ಉತ್ತರಾಖಂಡ್‌ನಲ್ಲಿ ಸಂಭವಿಸಿದೆ.

ಸೋಮವಾರಪೇಟೆ ತಾಲೂಕಿನ ತಾಕೇರಿ ಗ್ರಾಮದ ನಾಪಂಡ ದಿ. ಚಂಗಪ್ಪ ಅವರ ಪುತ್ರ ಎನ್.ಸಿ. ಮಹೇಶ್ (೪೬) ಎಂಬವರೇ ದೇಶ ಸೇವೆಯಲ್ಲಿದ್ದ ಸಂದರ್ಭ ವಿಧಿಯ ಕೂಗಿಗೆ ಓಗೊಟ್ಟವರು.

ಉತ್ತರಾಖಂಡ್‌ನ ಜೋಷಿ ಮತ್ತ್ ಎಂಬಲ್ಲಿ ಭಾರತೀಯ ಭೂ ಸೇನೆಯ ಇಎಂಇ (ಇಲೆಕ್ಟಾçನಿಕ್ಸ್ ಆ್ಯಂಡ್ ಮೆಕಾನಿಕಲ್ ಇಂಜಿನಿಯರ್) ವಿಭಾಗದಲ್ಲಿ ಜೆಸಿಒ ಹುದ್ದೆಯಲ್ಲಿದ್ದ ಮಹೇಶ್ ಅವರು ಸೇವೆಯಲ್ಲಿದ್ದಾಗಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಅಸುನೀಗಿದ್ದಾರೆ. ಕಳೆದ ತಿಂಗಳು ಊರಿಗೆ ಬಂದು ತಾ. ೧೦ ರಂದು ಮತ್ತೆ ಸೇವೆಗೆ ವಾಪಸ್ಸಾಗಿದ್ದರು.

ಮುಂದಿನ ನಾಲ್ಕು ವರ್ಷದಲ್ಲಿ ನಿವೃತ್ತಿ ಹೊಂದಲಿದ್ದ ಮಹೇಶ್ ಅವರು, ಕರ್ತವ್ಯಕ್ಕೆ ತೆರಳಿದ ಎರಡು ದಿನದಲ್ಲೇ ಇಹಲೋಕ ತ್ಯಜಿಸಿದ್ದಾರೆ.

ಮೃತರು ತಾಯಿ ಮಲ್ಲಿಗೆ, ಪತ್ನಿ ವಿನಂತಿ, ಮಕ್ಕಳಾದ ೧೦ ವರ್ಷ ಪ್ರಾಯದ ತೀಶ್ಮ ಹಾಗೂ ೬ ವರ್ಷದ ಕವನ್ ಅವರುಗಳನ್ನು ಅಗಲಿದ್ದಾರೆ.

೧೯೯೯ರಲ್ಲಿ ಸೇನೆಗೆ ಸೇರ್ಪಡೆಗೊಂಡ ಅವರು, ಹೈದರಾಬಾದ್, ಬೆಂಗಳೂರು, ಜಮ್ಮು ಕಾಶ್ಮೀರದಲ್ಲಿ ಸೇವೆ ಸಲ್ಲಿಸಿ, ಇದೀಗ ಉತ್ತರಾಖಂಡ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಇತ್ತ ಸ್ವಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಮೃತರ ಪಾರ್ಥೀವ ಶರೀರ ತಾ. ೧೨ ರಂದು (ಇಂದು) ಸಂಜೆ ಅಥವಾ ತಾ. ೧೩ರ ಗುರುವಾರ (ನಾಳೆ) ಗ್ರಾಮಕ್ಕೆ ತಲುಪಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.