(ಹೆಚ್.ಕೆ. ಜಗದೀಶ್)
ಗೋಣಿಕೊಪ್ಪಲು, ಅ. ೧೧: ದಕ್ಷಿಣ ಕೊಡಗಿನಲ್ಲಿ ಹುಲಿಯ ಹಾವಳಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯು ಹಗಲು - ರಾತ್ರಿ ಎನ್ನದೆ ಹುಲಿಯ ಸೆರೆಗೆ ವಿಭಿನ್ನ ಪ್ರಯತ್ನ ಮುಂದುವರಿಸಿದೆ. ಜಾನುವಾರು ಗಳನ್ನು ದಾಳಿ ಮಾಡಿದ ಸ್ಥಳಗಳಲ್ಲಿ ಹುಲಿಯ ಆಗಮನದ ನಿರೀಕ್ಷೆಯಿಂದ ಮೂರು ಬೋನುಗಳನ್ನು ಹಾಗೂ ೧೦ ಕ್ಯಾಮರಾ ಟ್ರಾö್ಯಪ್ಗಳನ್ನು ಅಳವಡಿಸಿ ಹುಲಿಯ ಬರುವಿಕೆಗಾಗಿ ಇಲಾಖೆಯ ಸಿಬ್ಬಂದಿಗಳು ಕಾದು ಕುಳಿತ್ತಿದ್ದಾರೆ. ಹರಿಹರ ಗ್ರಾಮದಲ್ಲಿ ಅಳವಡಿಸಿರುವ ಕ್ಯಾಮರಾಗಳಿಗೆ ಹುಲಿಯು ಆಗಮಿಸುವ ಚಿತ್ರ ಸೆರೆಯಾಗಿದೆ. ಆದರೆ ಹುಲಿಯು ಬೋನಿನ ಸಮೀಪ ತೆರಳದೆ ತೋಟದಲ್ಲಿ ಸಂಚರಿಸುತ್ತಿದೆ. ವಿವಿಧ ಭಾಗದಲ್ಲಿ ಕ್ಯಾಮರಾ ಟ್ರಾö್ಯಪ್ಗಳಿಗೆ ಹುಲಿಯ ಸಂಚಾರದ ಚಿತ್ರಗಳು ಸೆರೆಯಾಗಿವೆ.
ಹುಲಿಯ ಸೆರೆಗೆ ಕೇರಳದಿಂದ ಅತ್ಯಾಧುನಿಕ ಮಾದರಿಯ ಬೃಹತ್ ಪ್ರಮಾಣದ ಹುಲಿ ಬೋನನ್ನು ತರಿಸಿರುವ ಕೊಡಗಿನ ಅರಣ್ಯ ಇಲಾಖಾ ಅಧಿಕಾರಿಗಳು ಇದನ್ನು ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ತೀತಿರ ಸದಾ ಎಂಬವರ ಕಾಫಿ ತೋಟದಲ್ಲಿ ಅಳವಡಿಸಿದ್ದಾರೆ. ಇದರೊಂದಿಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಹುಲಿಯು ಬರುವ ಸಾಧ್ಯತೆ ಇರುವ ಸ್ಥಳದಲ್ಲಿ ಎರಡು ಬೋನುಗಳನ್ನು ಇಟ್ಟು ಹುಲಿಯ ಕಾರ್ಯಾಚರಣೆಗೆ ಇಲಾಖೆಯು ಕೆಲಸ ನಿರ್ವಹಿಸುತ್ತಿದೆ. ಕೇರಳದಿಂದ ತರಿಸಿರುವ ಹುಲಿ ಬೋನಿಗೆ ಈ ಹಿಂದೆ ೩ ಹುಲಿಗಳು ಬಿದ್ದಿದ್ದವು. ಆದ್ದರಿಂದ ಈ ಭಾಗದಲ್ಲಿರುವ ಹುಲಿಯು ಬಾರಿ ಗಾತ್ರದ ಹುಲಿಯಾಗಿರುವುದರಿಂದ ದೊಡ್ಡ ಗಾತ್ರದ ಬೋನನ್ನು ಕೇರಳದಿಂದ ಹೆಚ್ಚುವರಿಯಾಗಿ ತರಿಸಲಾಗಿದೆ.
ಈ ಭಾಗದಲ್ಲಿ ಮಳೆ ಬೀಳುತ್ತಿರುವುದರಿಂದ ಹುಲಿಯ ಆಗಮನದ ಹಾಗೂ ಸಂಚಾರದ ಮಾರ್ಗಗಳನ್ನು ಹೆಜ್ಜೆ ಗುರುತುಗಳ ಮೂಲಕ ಪತ್ತೆಹಚ್ಚಲು ಇಲಾಖಾಧಿ ಕಾರಿಗಳಿಗೆ ಕಷ್ಟವಾಗುತ್ತಿದೆ. ರಾತ್ರಿಯ ವೇಳೆ ಕೆಲವರು ಪಟಾಕಿಗಳನ್ನು ಸಿಡಿಸುವುದರಿಂದ ಹುಲಿಗಳ ಆಗಮನಕ್ಕೆ ಹಿನ್ನಡೆಯಾಗುತ್ತಿದೆ.
ಎಸಿಎಫ್ ನೆಹರು, ಆರ್ಎಫ್ಒ ಶಂಕರ್, ದಿವಾಕರ್ ಹಾಗೂ ಸಿಬ್ಬಂದಿಗಳು ಹರಿಹರ ಭಾಗದಲ್ಲಿ ಹುಲಿ
(ಮೊದಲ ಪುಟದಿಂದ) ಕಾರ್ಯಾಚರಣೆಗೆ ಕೂಂಬಿAಗ್ ಕಾರ್ಯ ಮುಂದುವರೆಸಿದ್ದು ಹುಲಿ ಹೆಜ್ಜೆಯ ಜಾಡನ್ನು ಹಿಡಿದು ತೆರಳುತ್ತಿದ್ದಾರೆ. ಮಳೆ ಬಿದ್ದ ಹಿನ್ನಲೆಯಲ್ಲಿ ಹುಲಿಯ ಹೆಜ್ಜೆಗಳು ಸ್ಪಷ್ಟವಾಗಿ ಗೋಚರಿಸುತ್ತಿಲ್ಲ. ಇದರಿಂದ ಸಹಜವಾಗಿಯೇ ಕಾರ್ಯಾಚರಣೆಗೆ ಹಿನ್ನಡೆಯಾಗಿದೆ.
ಹುಲಿಯನ್ನು ಹಿಡಿದೇ ತೀರುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದು ಪ್ರತಿದಿನ ಹಿರಿಯ ಅಧಿಕಾರಿಗಳು ಈ ಬಗ್ಗೆ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಸುತ್ತಮುತ್ತಲಿನ ಪ್ರದೇಶದಲ್ಲಿ ರೈತರ ಜಾನುವಾರುಗಳ ಮೇಲೆ ಹುಲಿ ದಾಳಿ ನಡೆಸಿರುವ ಬಗ್ಗೆ ವರದಿಯಾಗಿಲ್ಲ. ಇದರಿಂದ ಈ ಭಾಗದಲ್ಲಿರುವ ಹುಲಿಯು ತೋಟದಲ್ಲಿ ಅಡ್ಡಾಡುವ ಕಾಡು ಹಂದಿಗಳನ್ನು ಬೇಟೆಯಾಡಿ ತನ್ನ ಹೊಟ್ಟೆ ತುಂಬಿಸಿ ಕೊಳ್ಳುತ್ತಿರಬಹುದು ಎಂದು ಊಹಿಸಲಾಗಿದೆ.