ಮುಖ್ಯ ನ್ಯಾಯಮೂರ್ತಿಯಾಗಿ
ನ್ಯಾ. ಡಿ.ವೈ. ಚಂದ್ರಚೂಡ್ ಹೆಸರು ಶಿಫಾರಸು
ನವದೆಹಲಿ, ಅ. ೧೧: ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರು ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಶಿಫಾರಸು ಮಾಡಿದ್ದು, ಉನ್ನತ ನ್ಯಾಯಾಲಯದ ನ್ಯಾಯಾಧೀಶರು ನಡೆಸಿದ ಪೂರ್ಣ ನ್ಯಾಯಾಲಯದ ಸಭೆಯಲ್ಲಿ ಈ ಶಿಫಾರಸು ಮಾಡಲಾಗಿದೆ. ಸಿಜೆಐ ಉದಯ್ ಉಮೇಶ್ ಲಲಿತ್ ಅವರು ಇಂದು ಬೆಳಿಗ್ಗೆ ೧೦.೧೫ಕ್ಕೆ ತಮ್ಮ ಉತ್ತರಾಧಿಕಾರಿ ಹೆಸರಿನಲ್ಲಿ ಸರ್ಕಾರಕ್ಕೆ ಪತ್ರ ಕಳುಹಿಸಿದ್ದಾರೆ. ಇದರೊಂದಿಗೆ ನ್ಯಾಯಮೂರ್ತಿ ಚಂದ್ರಚೂಡ್ ಅವರು ನವೆಂಬರ್ ೯ ರಂದು ಭಾರತದ ೫೦ನೇ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮತ್ತು ಎರಡು ವರ್ಷಗಳ ಅಧಿಕಾರಾ ವಧಿಯನ್ನು ಹೊಂದಿರುತ್ತಾರೆ. ಈ ಹಿಂದೆ ಕಾನೂನು ಮತ್ತು ನ್ಯಾಯ ಸಚಿವಾಲಯವು ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರಿಗೆ ಪತ್ರ ಬರೆದು ಹೊಸ ಸಿಜೆಐ ಹೆಸರನ್ನು ಶಿಫಾರಸು ಮಾಡಿ ನೇಮಕಾತಿಗೆ ಸಂಬAಧಿಸಿದ ಜ್ಞಾಪಕ ಪತ್ರ ಪ್ರಕ್ರಿಯೆಯನ್ನು ಪ್ರಾರಂಭಿಸುವAತೆ ಮನವಿ ಮಾಡಿತ್ತು. ನ್ಯಾಯಮೂರ್ತಿ ಚಂದ್ರಚೂಡ್ ಅವರು ಮುಂದಿನ ಸಿಜೆಐ ಆಗಲಿದ್ದು, ಅವರ ಅಧಿಕಾರಾವಧಿ ಎರಡು ವರ್ಷಗಳವರೆಗೆ ಇರುತ್ತದೆ. ಅವರು ೧೦ ನವೆಂಬರ್ ೨೦೨೪ ರಂದು ನಿವೃತ್ತರಾಗಲಿದ್ದಾರೆ. ಸುಪ್ರೀಂ ಕೋರ್ಟ್ನ ನ್ಯಾಯಾಧೀಶರು ೬೫ ನೇ ವಯಸ್ಸಿನಲ್ಲಿ ಮತ್ತು ಹೈಕೋರ್ಟ್ನ ನ್ಯಾಯಾಧೀಶರು ೬೨ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ.
ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಿಸಲು ಕಾಂಗ್ರೆಸ್‌ಗೆ ಸಾಧ್ಯವಾಗಲಿಲ್ಲ
ರಾಯಚೂರು, ಅ. ೧೧: ಜನಸಂಕಲ್ಪ ಯಾತ್ರೆ ಪ್ರಾರಂಭಿಸಿರುವ ಭಾರತೀಯ ಜನತಾ ಪಕ್ಷದ ನಾಯಕರು ತಮ್ಮ ಸರ್ಕಾರದ ಎಸ್‌ಸಿ-ಎಸ್‌ಟಿ ಮೀಸಲಾತಿ ಹೆಚ್ಚಳ ವಿಷಯವನ್ನು ತನ್ನ ಟ್ರಂಪ್ ಕಾರ್ಡ್ ಮಾಡಿಕೊಂಡಿದ್ದಾರೆ. ರಾಯಚೂರು ತಾಲೂಕಿನ ಗಿಲ್ಲೇಸೂಗೂರು ಗ್ರಾಮದಿಂದ ಆರಂಭವಾಗಿರುವ ಜನಸಂಕಲ್ಪ ಯಾತ್ರೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ಮಾತನಾಡಿದ ಸಿಎಂ ಬೊಮ್ಮಾಯಿ, ವಿವಿಧ ವಿಷಯಗಳಲ್ಲಿ ತಮ್ಮ ಸರ್ಕಾರದ ಕಾರ್ಯಗಳನ್ನು ಸಮರ್ಥಿಸಿಕೊಂಡರು. ಇನ್ನೊಂದೆಡೆ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಪಕ್ಷ ದಲಿತರ ಮತ್ತು ತುಳಿತಕ್ಕೊಳಗಾದವರ ಚಾಂಪಿಯನ್ ಎಂದು ಹೇಳಿಕೊಳ್ಳುತ್ತದೆ. ಹಾಗಿದ್ದಲ್ಲಿ ಅಧಿಕಾರದಲ್ಲಿದ್ದಾಗ ಎಸ್‌ಸಿ-ಎಸ್‌ಟಿ ಸಮುದಾಯದ ಬೇಡಿಕೆಗೆ ಏಕೆ ಸ್ಪಂದಿಸಿಲ್ಲ. ಆದರೆ ನಾವು ಮೀಸಲಾತಿ ಹೆಚ್ಚಿಸುವ ಅಗತ್ಯವನ್ನು ಪರಿಗಣಿಸಿ ನಾವು ಅದನ್ನು ಅತ್ಯಂತ ನಮ್ರತೆಯಿಂದ ಮಾಡಿದ್ದೇವೆ. ಇದಕ್ಕೆ ವಿರೋಧ ಪಕ್ಷಗಳು ಸೇರಿದಂತೆ ಎಲ್ಲರೂ ಸಂತಸ ವ್ಯಕ್ತಪಡಿಸಿದ್ದಾರೆ ಎಂದರು. ಸಿದ್ದರಾಮಯ್ಯ ಅವರು ಸಮಾಜದ ಕಟ್ಟಕಡೆಯ ವರ್ಗದವರಿಗೂ ಭಾಗ್ಯಗಳ ಸರಮಾಲೆ ನೀಡಿದ್ದೇನೆ ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದನ್ನು ಮಾಡದಿದ್ದುದು ದೌರ್ಭಾಗ್ಯ ಎಂದು ಬೊಮ್ಮಾಯಿ ಹೇಳಿದರು. ಮಾಜಿ ಸಿಎಂನ ಕೆಲವು ಅನುಯಾಯಿಗಳು ಸಿದ್ದರಾಮಯ್ಯ ಅವರನ್ನು ಸಮಾಜವಾದಿ ಎಂದು ಕರೆಯುತ್ತಾರೆ. ಆದರೆ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ನಂತರ ಜಾತ್ಯತೀತತೆಯನ್ನು ಕಳೆದುಕೊಂಡರು ಎಂದರು.
ಬಿಸಿಸಿಐ ನೂತನ ಅಧ್ಯಕ್ಷರಾಗಿ ಕರ್ನಾಟಕದ ರೋಜರ್ ಬಿನ್ನಿ ಆಯ್ಕೆ
ನವದೆಹಲಿ, ಅ. ೧೧: ೧೯೮೩ರ ವಿಶ್ವ ಕಪ್ ವಿಜೇತ ಟೀಂ ಇಂಡಿಯಾ ಹೀರೋ, ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಸಜ್ಜಾಗಿದ್ದಾರೆ. ಹಾಲಿ ಅಧ್ಯಕ್ಷ ಸೌರವ್ ಗಂಗೂಲಿ ಅವರ ಅಧಿಕಾರವಧಿ ಅಕ್ಟೋಬರ್ ೧೮ ರಂದು ಅಂತ್ಯಗೊಳ್ಳಲಿದೆ. ಕಳೆದ ಒಂದು ವಾರದಿಂದ ಹಲವು ಸುತ್ತಿನ ಚರ್ಚೆಯ ನಂತರ ೬೭ ವರ್ಷದ ಬೆಂಗಳೂರಿನ ರೋಜರ್ ಬಿನ್ನಿ ಬಿಸಿಸಿಐನ ೩೬ನೇ ಅಧ್ಯಕ್ಷರಾಗಲು ನಿರ್ಧರಿಸಲಾಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಶಾ ಬಿಸಿಸಿಐ ಕಾರ್ಯದರ್ಶಿಯಾಗಿ ಎರಡನೇ ಅವಧಿಗೆ ಮುಂದುವರೆಯಲಿದ್ದಾರೆ. ಐಸಿಸಿ ಮಂಡಳಿಯಲ್ಲಿ ಗಂಗೂಲಿ ಬದಲಿಗೆ ಜಯ್ ಶಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ರಾಜೀವ್ ಶುಕ್ಲಾ ಉಪಾಧ್ಯಕ್ಷರಾಗಿ ಮುಂದುವರೆಯಲಿದ್ದಾರೆ. ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರ ಸಹೋದರ ಅರುಣ್ ಸಿಂದ್ ಧುಮಲ್ ಇದೀಗ ಐಪಿಎಲ್ ಮುಖ್ಯಸ್ಥರಾಗಲಿದ್ದಾರೆ. ಬ್ರಿಜೇಶ್ ಪಾಟೇಲ್ ಜಾಗಕ್ಕೆ ಧುಮಲ್ ಬರಲಿದ್ದಾರೆ. ಮಹಾರಾಷ್ಟ್ರ ಬಿಜೆಪಿ ಮುಖಂಡ ಅಶಿಶ್ ಶೆಲರ್ ನೂತನ ಖಜಾಂಚಿಯಾಗಿದ್ದು, ಅಸ್ಸಾಂ ಮುಖ್ಯಮಂತ್ರಿ ಹಿಮಂತಾ ಬಿಸ್ವಾ ಶರ್ಮಾ ಆಪ್ತ ದೇವಜಿತ್ ಸೈಕಿಯಾ ನೂತನ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ರೋಜರ್ ಬಿನ್ನಿ ಅಕ್ಟೋಬರ್ ೧೮ ರಂದು ಮುಂಬೈನ ಎಜಿಎಂನಲ್ಲಿ ಅಧಿಕಾರ ವಹಿಸಿಕೊಳ್ಳುವರು.
ಉಕ್ರೇನ್ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನ
ನವದೆಹಲಿ, ಅ. ೧೧: ಉಕ್ರೇನ್ ಮೇಲಿನ ಯುದ್ಧದ ಕುರಿತು ವಿಶ್ವಸಂಸ್ಥೆಯಲ್ಲಿ ರಹಸ್ಯ ಮತದಾನಕ್ಕೆ ರಷ್ಯಾ ಮಾಡಿದ್ದ ಮನವಿಯನ್ನು ಭಾರತ ತಿರಸ್ಕರಿಸಿದ್ದು, ರಷ್ಯಾ ಮಾಡಿದ ಬೇಡಿಕೆಯ ವಿರುದ್ಧವಾಗಿ ಭಾರತ ಮತ ಚಲಾಯಿಸಿದೆ. ಉಕ್ರೇನ್‌ನ ನಾಲ್ಕು ಪ್ರದೇಶಗಳನ್ನು ಮಾಸ್ಕೋ ಅಕ್ರಮ ಸ್ವಾಧೀನವನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಹಸ್ಯ ಮತದಾನವನ್ನು ಕೈಗೊಳ್ಳಲು ರಷ್ಯಾ ಬೇಡಿಕೆ ಇಟ್ಟಿತ್ತು. ಅಲ್ಲದೆ ಈ ಕುರಿತ ತನ್ನ ಬೇಡಿಕೆಗೆ ಭಾರತ ಸ್ಪಂದಿಸುವ ಆಶಯ ಹೊಂದಿತ್ತು. ಆದರೆ ಸಭೆಯಲ್ಲಿ ರಷ್ಯಾ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ರಷ್ಯಾ ಮಾಡಿದ ಬೇಡಿಕೆಯ ವಿರುದ್ಧವಾಗಿ ಭಾರತ ಮತ ಚಲಾಯಿಸಿದೆ. ಭಾರತವು ಇತರ ೧೦೬ ದೇಶಗಳೊಂದಿಗೆ ಗುಪ್ತ ಮತದಾನ ನಡೆಸಬೇಕೆಂಬ ರಷ್ಯಾದ ಬೇಡಿಕೆಯನ್ನು ವಿರೋಧಿಸಿ ಮತದಾನ ಮಾಡಿದೆ. ರಹಸ್ಯ ಮತದಾನವನ್ನು ನಡೆಸಲು ರಷ್ಯಾ ನೀಡಿದ ಕರೆಯ ಪರವಾಗಿ ಹದಿಮೂರು ದೇಶಗಳು ಮತ ಚಲಾಯಿಸಿದವು. ರಷ್ಯಾ ಹಾಗೂ ಚೀನಾ ಸೇರಿದಂತೆ ಇನ್ನೂ ೩೯ ದೇಶಗಳು ಮತದಾನದಿಂದ ದೂರ ಉಳಿದಿವೆ. ಉಕ್ರೇನ್‌ನ ನಾಲ್ಕು ಪ್ರದೇಶಗಳ ಅಕ್ರಮ ಸ್ವಾಧೀನವನ್ನು ಖಂಡಿಸುವ ಕರಡು ನಿರ್ಣಯದ ಮೇಲೆ ಮಾಸ್ಕೋ ರಹಸ್ಯ ಮತದಾನವನ್ನು ಕೋರಿತ್ತು. ಉಕ್ರೇನಿಯನ್ ಪ್ರಾಂತ್ಯಗಳಲ್ಲಿ ಜನಾಭಿಪ್ರಾಯ ಸಂಗ್ರಹಣೆಯ ನಂತರ ರಷ್ಯಾದಲ್ಲಿ ಈ ವಾರದ ನಂತರ ಯುಎನ್‌ಜಿಎಯಲ್ಲಿ ಸಾರ್ವಜನಿಕ ಮತವನ್ನು ನಡೆಸಲಾಗುವುದು ವಿಶ್ವಸಂಸ್ಥೆ ಮೂಲಗಳು ತಿಳಿಸಿವೆ. ಇನ್ನು ವಿಶ್ವಸಂಸ್ಥೆ ಸಾಮಾನ್ಯಸಭೆಯಲ್ಲಿ ರಷ್ಯಾದ ಬೇಡಿಕೆಯ ಕ್ರಮದ ಮೇಲೆ ಕಾರ್ಯವಿಧಾನದ ಮತದೊಂದಿಗೆ ಸಭೆ ಪ್ರಾರಂಭವಾಯಿತು. ಚರ್ಚೆಯಾಗುತ್ತಿರುವ ಉಕ್ರೇನಿಯನ್ ಕರಡು ನಿರ್ಣಯವನ್ನು ಸಾರ್ವಜನಿಕ ಮತದಾನದ ಮೂಲಕ ಅಲ್ಲ ಬದಲಿಗೆ ರಹಸ್ಯ ಮತದಾನದ ಮೂಲಕ ಮತ ಚಲಾಯಿಸಬೇಕು ಎಂದು ರಷ್ಯಾ ಪ್ರತಿನಿಧಿಗಳು ಪ್ರಸ್ತಾಪಿಸಿದರು. ಉಕ್ರೇನ್ ಮೇಲಿನ ನಿರ್ಣಯದ ಮೇಲೆ ರಷ್ಯಾ ರಹಸ್ಯ ಮತದಾನವನ್ನು ಪ್ರಸ್ತಾಪಿಸಿದ ನಂತರ ಅಲ್ಬೇನಿಯಾ ಮುಕ್ತ-ಬಹಿರಂಗ ಮತದಾನ ಕೋರಿತು.
ಪಂಚಾಯಿತಿ ಅಧ್ಯಕ್ಷರ ಅಧಿಕಾರ ಮೊಟಕುಗೊಳಿಸುವ ಪ್ರಸ್ತಾಪಕ್ಕೆ ತಿರಸ್ಕಾರ
ಬೆಂಗಳೂರು, ಅ. ೧೧: ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಸ್ತುತ ಇರುವ ಯಾವುದೇ ಅಧಿಕಾರವನ್ನು ಕಡಿತಗೊಳಿಸುವ ವಿಚಾರ ಸರಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿಯಾಗಿ ಪಂಚಾಯಿತಿ ಜನಪ್ರತಿನಿಧಿಗಳ ಆತಂಕವನ್ನು ಗಮನಕ್ಕೆ ತಂದಿದ್ದು, ತಕ್ಷಣ ಸ್ಪಂದಿಸಿದ ಮುಖ್ಯಮಂತ್ರಿ, ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ್ ರಾಜ್ ಅಧಿನಿಯಮಗಳಿಗೆ ಯಾವುದೇ ತಿದ್ದುಪಡಿ ತರುವ ಪ್ರಸ್ತಾವನೆಯನ್ನು ತಿರಸ್ಕರಿಸಿರುವುದಾಗಿ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಗ್ರಾಮ ಪಂಚಾಯಿತಿ ಸಂಸ್ಥೆಗಳು, ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿಯಾಗಿದ್ದು, ಗ್ರಾಮೀಣ ಭಾಗದಲ್ಲಿ, ಭವಿಷ್ಯದ ನಾಯಕತ್ವ ರೂಪಿಸುವಲ್ಲಿ ಗಣನೀಯ ಕೊಡುಗೆ, ಸಲ್ಲಿಸುತ್ತಿದೆ. ಗ್ರಾಮ ಪಂಚಾಯಿತಿ ವ್ಯವಸ್ಥೆಯನ್ನು ಬಲಪಡಿಸುವ ಹಾಗೂ ಅಧಿಕಾರ ವಿಕೇಂದ್ರಿಕರಣಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಬದ್ಧವಾಗಿದೆ ಎಂದು ಸಚಿವರು ತಿಳಿಸಿದರು.