ಮಡಿಕೇರಿ, ಅ. ೧೦: ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪ ನಿರ್ದೇಶಕರ ಕಚೇರಿ ಮಡಿಕೇರಿ ಇವರ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕ ಕ್ರೀಡಾ ಕೂಟದಲ್ಲಿ ಅರುವತ್ತೊಕ್ಲುವಿನ ಸರ್ವದೈವತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರುವ ಮೂಲಕ ವಿವಿಧ ಕ್ರೀಡೆಗಳಲ್ಲಿ ಜಯಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರಾಥಮಿಕ ಶಾಲಾ ಬಾಲಕರ ವಿಭಾಗದ ಥ್ರೋಬಾಲ್, ಟೇಬಲ್ ಟೆನ್ನಿಸ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಾಲಿಬಾಲ್‌ನಲ್ಲಿ ದ್ವಿತೀಯ ಸ್ಥಾನಗಳಿಸಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಮತ್ತು ವಾಲಿಬಾಲ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.

ಪ್ರೌಢಶಾಲಾ ಬಾಲಕರ ವಿಭಾಗದ ಥ್ರೋಬಾಲ್, ವಾಲಿಬಾಲ್ ಮತ್ತು ಟೇಬಲ್ ಟೆನ್ನಿಸ್‌ನಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕಿಯರ ವಿಭಾಗದಲ್ಲಿ ಥ್ರೋಬಾಲ್ ಮತ್ತು ಟೇಬಲ್ ಟೆನ್ನಿಸ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿರುತ್ತಾರೆ.

ಇವರ ಈ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಮುಖ್ಯ ಶಿಕ್ಷಕರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯವರು ಹಾಗೂ ಪೋಷಕರುಗಳು ಅಭಿನಂದನೆಯನ್ನು ಸಲ್ಲಿಸಿರುತ್ತಾರೆ. ತರಬೇತುದಾರಾಗಿ ದೈಹಿಕ ಶಿಕ್ಷಕರುಗಳಾದ ಪ್ರಮೋದ್ ವಿ.ಎನ್. ಹಾಗೂ ರವಿಚಂದ್ರ ಹೆಚ್.ಹೆಚ್. ತರಬೇತಿ ನೀಡಿರುತ್ತಾರೆ.