ಸೋಮವಾರಪೇಟೆ, ಅ. ೧೦: ವಿದ್ಯುತ್ ಕಂಬದಿAದ ತುಂಡಾಗಿ ಬಿದ್ದಿದ್ದ ತಂತಿಗಳನ್ನು ಸ್ಪರ್ಶಿಸಿ ಎರಡು ಜಾನುವಾರುಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಚಿಕ್ಕಾರ ಗ್ರಾಮದಲ್ಲಿ ನಡೆದಿದ್ದು, ಅದೃಷ್ಟವಶಾತ್ ಜಾನುವಾರುಗಳ ಮಾಲೀಕ ಅಪಾಯದಿಂದ ಪಾರಾಗಿದ್ದಾರೆ.

ಕೂಗೂರು ಗ್ರಾಮದ ಚಿಣ್ಣಪ್ಪ ಅವರಿಗೆ ಸೇರಿದ ಜಾನುವಾರುಗಳನ್ನು ಇಂದು ಚಿಕ್ಕಾರ ಗ್ರಾಮದ ದೇವಾಲಯ ಸಮೀಪವಿರುವ ಗದ್ದೆ ಬಯಲಿಗೆ ಮೇಯಿಸಲು ಹೊಡೆದುಕೊಂಡು ಹೋಗುತ್ತಿದ್ದ ಸಂದರ್ಭ ದುರ್ಘಟನೆ ನಡೆದಿದೆ.

ನಿನ್ನೆ ರಾತ್ರಿಯಿಂದ ಸುರಿದ ಮಳೆಗೆ ಮರದ ಕೊಂಬೆಯೊAದು ಮುರಿದು ವಿದ್ಯುತ್ ತಂತಿಯ ಮೇಲೆ ಬಿದ್ದಿದ್ದರಿಂದ, ತಂತಿಗಳು ತುಂಡಾಗಿ ನೆಲಕ್ಕೆ ಬಿದ್ದಿದ್ದವು. ಮುಂಬದಿ ಹೋಗುತ್ತಿದ್ದ ೨ ಜಾನುವಾರುಗಳು ಈ ತಂತಿಗಳನ್ನು ತುಳಿದಿದ್ದು, ಸ್ಥಳದಲ್ಲೇ ಮೃತಪಟ್ಟಿವೆ.

ಮಾಲೀಕನ ಕಣ್ಣೆದುರೇ ಘಟನೆ ನಡೆದಿದೆ. ಹಾಲು ನೀಡುತ್ತಿದ್ದ ೨ ಜಾನುವಾರುಗಳು ಸಾವನ್ನಪ್ಪಿದ್ದು, ಸುಮಾರು ೫೫ ಸಾವಿರ ನಷ್ಟವಾಗಿದೆ. ಆದರೆ, ಅದೃಷ್ಟವಶಾತ್ ಚಿಣ್ಣಪ್ಪ ಅವರು ಅಪಾಯದಿಂದ ಪಾರಾಗಿದ್ದಾರೆ. ಒಂದು ವೇಳೆ ಚಿಣ್ಣಪ್ಪ ಅವರು ವಿದ್ಯುತ್ ತಂತಿಯನ್ನು ಸ್ಪರ್ಶಿಸಿದ್ದರೆ ದುರಂತ ಸಂಭವಿಸುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಸೆಸ್ಕ್ ವಿಭಾಗದ ಅಭಿಯಂತರರು, ಪಶುವೈದ್ಯಕೀಯ ಇಲಾಖಾ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.