ಮಡಿಕೇರಿ, ಅ. ೧೦: ಹೋಂಸ್ಟೇಗಳು ಐದು ಕೋಣೆಗಳನ್ನು ಮಾತ್ರ ಹೊಂದಿರಬೇಕು ಎಂದು ಇದ್ದ ನಿಯಮ ಬದಲಿಸಿ, ಕರ್ನಾಟಕ ಸರಕಾರವು ಅದನ್ನು ಗರಿಷ್ಠ ಆರು ಕೋಣೆಗೆ ಹೆಚ್ಚಿಸಿದೆ. ಇತ್ತೀಚೆಗೆ ನಡೆದ ಅಸೋಸಿಯೇಷನ್ ಮಹಾಸಭೆಯಲ್ಲಿ ಈ ಕುರಿತು ಅಧ್ಯಕ್ಷ ಕ. ಭರತ್ ತಿಳಿಸಿದರು.
ಜಿಲ್ಲೆಯಲ್ಲಿ ಹೆಚ್ಚಿನ ಹೋಂಸ್ಟೇ ಮಾಲೀಕರುಗಳು ನಿಯಮ ಪಾಲಿಸುತ್ತಿದ್ದು, ಕೆಲವರು ಹೋಂಸ್ಟೇಗೆ ಅನುಮತಿ ಪಡೆದು ರೆಸಾರ್ಟ್ಗಳನ್ನು ನಡೆಸುತ್ತಿರುವುದನ್ನು ಭರತ್ ಖಂಡಿಸಿದರು. ಅಂತಹವರಿಗೆ ಅಸೋಸಿಯೇಷನ್ ಸದಸ್ಯತ್ವ ನೀಡುವುದಿಲ್ಲ ಎಂದು ಹೇಳಿದರು.
ವಿದ್ಯುತ್ ಇಲಾಖೆಯು ಕೆಲವು ಹೋಂಸ್ಟೇಗಳಿಗೆ ದಾಳಿ ಮಾಡಿ, ವಾಣಿಜ್ಯ ಶುಲ್ಕ ಪಾವತಿಸಬೇಕು ಎಂದು ಒತ್ತಾಯಿಸುತ್ತಿರುವ ದೂರುಗಳಿದ್ದು, ಈ ಕುರಿತು ಅಧಿಕಾರಿಗಳೊಂದಿಗೆ ವ್ಯವಹರಿಸುವು ದಾಗಿ ಹೇಳಿದರು. ಮಾಲೀಕ ವಾಸವಿರುವ ಮನೆಯ ಜೊತೆ ಇರುವ ಕೋಣೆಗಳಿಗೆ ಗೃಹಬಳಕೆ ಶುಲ್ಕ ಅನ್ವಯ ಆಗಲಿದ್ದು, ಕಟ್ಟಡದಿಂದ ಬೇರ್ಪಟ್ಟ ಕೋಣೆಗಳು ವಾಣಿಜ್ಯ ಎಂದು ಪರಿಗಣಿಸಲ್ಪಡುತ್ತದೆ ಎಂದರು.
ಆದರೆ ಇಂತಹ ಕೋಣೆಗಳನ್ನೂ ಗೃಹಬಳಕೆ ಶುಲ್ಕಕ್ಕೆ ಅಳವಡಿಸಲು ಇಲಾಖೆಯೊಡನೆ ವ್ಯವಹರಿಸುವುದಾಗಿ ಹೇಳಿದರು.
ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ವರದಿ ಓದಿದರು. ಖಜಾಂಚಿ ಸವಿತ ಲೆಕ್ಕಪತ್ರ ಮಂಡಿಸಿದರು. ಉಪಾಧ್ಯಕ್ಷ ಹೇಮ್ ಮಾದಪ್ಪ ಮತ್ತು ಸಹ ಕಾರ್ಯದರ್ಶಿ ಬೆನ್ ಗಣಪತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಶ್ರೀ ಅನಂತಶಯನ ಅವರು ಪ್ರಾರ್ಥಿಸಿದರು.