ಸೋಮವಾರಪೇಟೆ, ಅ. ೧೦: ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕು ಸಂಪರ್ಕಿಸುವ ಮಸಗೋಡು-ಕಣಿವೆ ಮುಖ್ಯರಸ್ತೆಯ ಅವ್ಯವಸ್ಥೆ ಖಂಡಿಸಿ ಆ ಭಾಗದ ಗ್ರಾಮಸ್ಥರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ಸೋಮವಾರಪೇಟೆ ಹಾಗೂ ಕುಶಾಲನಗರ ತಾಲೂಕು ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಆಯೋಜಿಸಿದ್ದ ಪ್ರತಿಭಟನೆಗೆ ಎತ್ತಿನಗಾಡಿಯೊಂದಿಗೆ ಆಗಮಿಸಿದ ಪ್ರತಿಭಟನಾಕಾರರು, ಅಂಬೇಡ್ಕರ್ ಪ್ರತಿಮೆಯಿಂದ ಮೆರವಣಿಗೆ ಹೊರಟು ಪಟ್ಟಣದ ಮೂಲಕ ಸಾಗಿ ಲೋಕೋಪಯೋಗಿ ಇಲಾಖಾ ಕಚೇರಿ ಎದುರು ಜಮಾವಣೆಗೊಂಡರು.
ಪ್ರತಿಭಟನೆಯುದ್ದಕ್ಕೂ ಜನಪ್ರತಿನಿಧಿಗಳು, ಸರ್ಕಾರ, ಗಣಿಗಾರಿಕೆ ಹಾಗೂ ಲೋಕೋಪಯೋಗಿ ಇಲಾಖೆಯ ಅಭಿಯಂತರರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು. ರಸ್ತೆಯ ಅವ್ಯವಸ್ಥೆಯಿಂದಾಗಿ ಜನಜೀವನ ಕಷ್ಟಕರವಾಗಿದ್ದರೂ ಸರ್ಕಾರ ಇತ್ತ ಗಮನಹರಿಸುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನೇಗಳ್ಳೆ, ಅರೆಯೂರು, ಹೊಸಳ್ಳಿ, ಯಲಕನೂರು, ಕಾಟಿಕೊಪ್ಪಲು, ಸೀಗೇಹೊಸೂರು, ಭುವನಗಿರಿ, ಜೇನುಕಲ್ಲುಬೆಟ್ಟ, ಗಂಗಾ ಕಲ್ಯಾಣ, ಕಣಿವೆ, ಹಳೆ ಮದಲಾಪುರ, ಆಡಿನಾಡೂರು, ನೇರುಗಳಲೆ, ಮೋರಿಕಲ್ಲು ಸೇರಿದಂತೆ ಸುತ್ತಮುತ್ತಲಿಂದ ಮಹಿಳೆಯರಾದಿಯಾಗಿ ಮಕ್ಕಳೂ ಸಹ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಮಸಗೋಡು ಗ್ರಾಮದಿಂದ ಕಣಿವೆ ಸಂಪರ್ಕಿಸುವ ಸುಮಾರು ೧೮ ಕಿ.ಮೀ. ರಸ್ತೆಯ ಪೈಕಿ ೧೬ ಕಿ.ಮೀ. ರಸ್ತೆ ಇನ್ನಿಲ್ಲದಂತೆ ಹಾಳಾಗಿದೆ. ಕಳೆದ ೧೦ ವರ್ಷಗಳಿಂದ ದುರಸ್ತಿ ಮಾಡಿಲ್ಲ. ರಸ್ತೆಯ ತುಂಬೆಲ್ಲಾ ಹೊಂಡಾ ಗುಂಡಿಗಳು ನಿರ್ಮಾಣವಾಗಿದ್ದು, ನಡೆದಾಡಲೂ ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿದ್ದರೂ ರಸ್ತೆ ನಿರ್ವಹಣೆಯನ್ನು ಇಲಾಖಾಧಿಕಾರಿಗಳು ಮಾಡುತ್ತಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
‘ರಸ್ತೆ ಅವ್ಯವಸ್ಥೆಯಿಂದಾಗಿ ನಮಗೆ ಶಾಲೆಗೆ ಹೋಗಲು ಆಗುತ್ತಿಲ್ಲ. ನಡೆದುಕೊಂಡು ಹೋಗಲು ಕಾಡಾನೆಗಳ ಭಯವಿದೆ. ನಾವು ಓದೋದು ಬೇಡ್ವಾ?’ ಎಂದು ಮಕ್ಕಳು ಪ್ರಶ್ನಿಸಿದರೆ, ಈ ಭಾಗದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕಲ್ಲುಗಣಿಗಾರಿಕೆಯಿಂದ ರಸ್ತೆಯಲ್ಲಿ ಹೊಂಡ ನಿರ್ಮಾಣವಾಗಿದೆ. ನಮ್ಮ ಮನವಿಗೆ ಸ್ಪಂದನ ನೀಡುತ್ತಿಲ್ಲ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಮೆರವಣಿಗೆಯ ಮೂಲಕ ಇಲ್ಲಿನ ಲೋಕೋಪಯೋಗಿ ಇಲಾಖಾ ಕಚೇರಿಗೆ ಆಗಮಿಸಿದ ಸಂದರ್ಭ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಮುಖ್ಯ ದ್ವಾರದವರೆಗೆ ಹೋಗುವುದಕ್ಕೆ ತಡೆಯೊಡ್ಡಿದರು. ಈ ಕ್ರಮಕ್ಕೆ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಮಧ್ಯಾಹ್ನದ ವೇಳೆಗೆ ಮಳೆಯ ಆಗಮನವಾದರೂ ಪ್ರತಿಭಟನೆ ಮುಂದುವರೆಸಿದ ಪ್ರತಿಭಟನಾಕಾರರು, ಇಲಾಖೆಯ ಮೇಲಧಿಕಾರಿಗಳು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು.
ಅಪರಾಹ್ನ ೩ ಗಂಟೆ ಸುಮಾರಿಗೆ ಆಗಮಿಸಿದ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ನಾಗರಾಜ್ ಅವರು, ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಈ ಸಂದರ್ಭ ಅಭಿಯಂತರ ಹಾಗೂ ಗ್ರಾಮಸ್ಥರ ನಡುವೆ ಹಲವು ವಿಚಾರಗಳಿಗೆ ಸಂಬAಧಿಸಿದAತೆ ಮಾತಿನ ಚಕಮಕಿ ನಡೆಯಿತು. ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ತಡೆಯೊಡ್ಡಬೇಕು. ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡಬಾರದು. ರಸ್ತೆಮೇಲೆ ಹಾಗೂ ಬದಿಯಲ್ಲಿ ಬಿದ್ದಿರುವ ಕಲ್ಲುಗಳನ್ನು ತೆರವುಗೊಳಿಸಬೇಕು. ತಕ್ಷಣ ರಸ್ತೆ ಕಾಮಗಾರಿ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಅಂತಿಮವಾಗಿ ನವೆಂಬರ್ ೩೦ರ ಒಳಗೆ ರಸ್ತೆ ಕಾಮಗಾರಿ ಪ್ರಾರಂಭಿಸಲಾಗುವುದು. ಶಿಥಿಲಾವಸ್ಥೆಯಲ್ಲಿರುವ ಸೇತುವೆಯ ಬದಲಿಗೆ ನೂತನ ಸೇತುವೆ ನಿರ್ಮಿಸಲಾಗುವುದು ಎಂದು ಅಭಿಯಂತರ ನಾಗರಾಜು ಭರವಸೆ ನೀಡಿದರು. ಈ ಬಗ್ಗೆ ಲಿಖಿತ ಭರವಸೆ ದೊರೆತ ನಂತರ ಪ್ರತಿಭಟನೆಯನ್ನು ಹಿಂಪಡೆಯಲಾಯಿತು. ಪ್ರತಿಭಟನೆಯಲ್ಲಿ ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಎಸ್.ಎನ್. ಅನಂತ್, ಉಪಾಧ್ಯಕ್ಷ ಹೆಚ್.ಕೆ. ಲೋಕೇಶ್, ಗ್ರಾ.ಪಂ. ಮಾಜೀ ಅಧ್ಯಕ್ಷ ಎ.ಹೆಚ್. ತಿಮ್ಮಯ್ಯ, ಲೋಕಾನಂದ, ಸಮಿತಿಯ ಸದಸ್ಯ ಬೋಜೇಗೌಡ, ಅಜಿತ್ಕುಮಾರ್, ಪ್ರಮೋದ್, ಬಿ.ಪಿ. ಅನಿಲ್ಕುಮಾರ್ ಸೇರಿದಂತೆ ನೂರಾರು ಮಂದಿ ಗ್ರಾಮಸ್ಥರು ಭಾಗಿಯಾಗಿದ್ದರು.