*ಸಿದ್ದಾಪುರ, ಅ. ೧೦ : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದ ಗ್ರಾಮ ಪಂಚಾಯಿತಿ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದು ಕಸ ತೆರವುಗೊಳಿಸಿದ ಪ್ರಸಂಗ ನೆಲ್ಯಹುದಿಕೇರಿಯಲ್ಲಿ ನಡೆದಿದೆ.

ನೆಲ್ಯಹುದಿಕೇರಿ ಹಸಿಮೀನು ಮಾರುಕಟ್ಟೆಯ ಸಮೀಪದಲ್ಲಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿಯು ತ್ಯಾಜ್ಯಗಳನ್ನು ವಾಹನದ ಮೂಲಕ ತಂದು ಮುಖ್ಯ ರಸ್ತೆಯ ಬದಿಯಲ್ಲಿ ಸುರಿದು ಬೇಜವಾಬ್ದಾರಿ ತೋರಿದೆ.ಈ ವಿಷಯವನ್ನು ಅರಿತ ನೆಲ್ಯಹುದಿಕೇರಿ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಸ್ಥಳಕ್ಕೆ ಭೇಟಿ ನೀಡಿ ಗ್ರಾ.ಪಂ. ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರಲ್ಲದೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪಿಡಿಓ ಅನಿಲ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡರಲ್ಲದೆ ಕೂಡಲೇ ತ್ಯಾಜ್ಯವನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿದರು. ತ್ಯಾಜ್ಯ ಸುರಿದ ಗ್ರಾಮ ಪಂಚಾಯಿತಿಯ ವಿರುದ್ಧ ಐದು ಸಾವಿರ ರೂ. ದಂಡ ವಿಧಿಸಬೇಕೆಂದು ಪಟ್ಟು ಹಿಡಿದರು. ತ್ಯಾಜ್ಯವನ್ನು ತೆರವುಗೊಳಿಸದಿದ್ದಲ್ಲಿ ಇಲ್ಲಿನ ಸಂಪೂರ್ಣ ತ್ಯಾಜ್ಯಗಳನ್ನು ತೆಗೆದು ಗ್ರಾಮ ಪಂಚಾಯಿತಿ ಎದುರು ಸುರಿಯಲಾಗುವುದೆಂದು ಎಚ್ಚರಿಸಿದರು. ಕಾರ್ಯಕರ್ತರ ಒತ್ತಾಯಕ್ಕೆ ಮಣಿದ ಗ್ರಾಮ ಪಂಚಾಯಿತಿಯು ಸಿಬ್ಬಂದಿಗಳ ಸಹಾಯದಿಂದ ತ್ಯಾಜ್ಯಗಳನ್ನು ತೆಗೆದು ಸ್ಥಳಾಂತರಿಸಿದರು.