ಸೋಮವಾರಪೇಟೆ, ಅ.೯: ಮಸಗೋಡು-ಕಣಿವೆ ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ತಾ. ೧೦ರಂದು (ಇಂದು) ಪ್ರತಿಭಟನೆ ನಡೆಸಲು ರಸ್ತೆ ಅಭಿವೃದ್ಧಿ ಹೋರಾಟ ಸಮಿತಿ ಮುಂದಾಗಿದ್ದು, ಬೆಳಿಗ್ಗೆ ೧೦ ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ಹೊರಟು ಲೋಕೋಪಯೋಗಿ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದೆ. ಮಸಗೋಡು, ನೇಗಳ್ಳೆ, ಅರೆಯೂರು, ಯಲಕನೂರು, ಹೊಸಳ್ಳಿ, ಹಳೆ ಮದಲಾಪುರ, ಆಡಿನಾಡೂರು, ಕಣಿವೆ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯ ಗ್ರಾಮಸ್ಥರನ್ನು ಒಳಗೊಂಡAತೆ ಸಮಿತಿ ರಚಿಸಲಾಗಿದ್ದು, ಇದರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.

ಮಸಗೋಡು ಗ್ರಾಮದಿಂದ ಕಣಿವೆ ಸಂಪರ್ಕಿಸುವ ೧೮ ಕಿ.ಮೀ. ರಸ್ತೆಯ ಪೈಕಿ ೨ ಕಿ.ಮೀ. ರಸ್ತೆ ಮಾತ್ರ ಸಂಚಾರಕ್ಕೆ ಯೋಗ್ಯವಿದ್ದು, ಉಳಿದಂತೆ ರಸ್ತೆಯಲ್ಲಿ ಹೊಂಡಾಗುAಡಿಗಳು ನಿರ್ಮಾಣವಾಗಿವೆ. ಸಂಚಾರಕ್ಕೆ ಅಯೋಗ್ಯವಾಗಿದೆ. ಹಲವು ವರ್ಷಗಳಿಂದ ಈ ಬಗ್ಗೆ ಬೇಡಿಕೆ ಮುಂದಿಟ್ಟಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಸಮಿತಿಯ ಸದಸ್ಯರುಗಳು ಆರೋಪಿಸಿದ್ದಾರೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗಕ್ಕೆ ಮನವಿ ಸಲ್ಲಿಸಿದ್ದರೂ ಸ್ಪಂದನೆಯಿಲ್ಲ ಎಂದು ಆರೋಪಿಸಿ ತಾ. ೧೦ರಂದು (ಇಂದು) ಪ್ರತಿಭಟನೆ ನಡೆಸಲು ಮುಂದಾಗಿರುವ ನಡುವೆಯೇ ಈ ಭಾಗದ ಗ್ರಾಮಸ್ಥರಲ್ಲಿ ಪರ ವಿರೋಧ ಅಭಿಪ್ರಾಯ ವ್ಯಕ್ತವಾಗಿದೆ. ಈ ಪ್ರತಿಭಟನೆ ರಾಜಕೀಯ ಪ್ರೇರಿತ ಎಂದು ಕೆಲವರು ಅಭಿಪ್ರಾಯಿಸಿದ್ದರೆ, ಇದು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವವರು ಪ್ರತಿಪಾದಿಸುತ್ತಿದ್ದಾರೆ.

ಈ ನಡುವೆ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಉದ್ದೇಶಿತ ರಸ್ತೆ ಅಭಿವೃದ್ಧಿಗೆ ರೂ. ೧೫ ಕೋಟಿ ಅನುದಾನ ಬಿಡುಗಡೆ ಮಾಡುವಂತೆ ರಾಜ್ಯ ಲೋಕೋಪಯೋಗಿ ಇಲಾಖಾ ಸಚಿವ ಸಿ.ಸಿ. ಪಾಟೀಲ್ ಅವರಿಗೆ ಪತ್ರ ಬರೆದಿದ್ದು, ಇದಕ್ಕೆ ಸಕಾರಾತ್ಮಕ ಸ್ಪಂದನೆ ನೀಡಿರುವ ಸಚಿವರು, ಈ ರಸ್ತೆ ಅಭಿವೃದ್ಧಿಗೆ ಸಂಬAಧಿಸಿದAತೆ ಅನುದಾನ ನೀಡಲು ಅಗತ್ಯ ಪ್ರಸ್ತಾವನೆ ಸಲ್ಲಿಸುವಂತೆ ಇಲಾಖೆಯ ಕಾರ್ಯದರ್ಶಿಗೆ ಲಿಖಿತ ಸೂಚನೆ ನೀಡಿದ್ದಾರೆ.

ಅನುದಾನ ಬಿಡುಗಡೆಯ ಪ್ರಕ್ರಿಯೆ ಪ್ರಗತಿಯಲ್ಲಿರುವ ಸಮಯದಲ್ಲಿ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ಕೂಡಿಗೆ ಗ್ರಾ.ಪಂ. ಮಾಜಿ ಸದಸ್ಯ ಧನಂಜಯ್, ನೇಗಳ್ಳೆ ಕರ್ಕಳ್ಳಿ ದೇವಾಲಯ ಸಮಿತಿ ಉಪಾಧ್ಯಕ್ಷ ಎನ್. ಬಿ. ಧರ್ಮಪ್ಪ, ನೇಗಳ್ಳೆ ಜೀವನ್ ಸೇರಿದಂತೆ ಇತರರು ಅಭಿಪ್ರಾಯಿಸಿದ್ದಾರೆ.

ಕಳೆದ ಒಂದು ತಿಂಗಳ ಹಿಂದೆಯೇ ರಸ್ತೆ ಬಗ್ಗೆ ಶಾಸಕರು, ಅಧಿಕಾರಿಗಳಿಗೆ ಮನವಿ ನೀಡಿದ್ದೆವು. ೧೫ ದಿನಗಳ ಗಡುವನ್ನು ನೀಡಲಾಗಿತ್ತು. ಆದರೆ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ಇಂಜಿನಿಯರ್ ಬಂದು ಸರ್ವೆ ಮಾಡಿ ಹೋಗಿದ್ದಾರೆ. ಕ್ರಿಯಾಯೋಜನೆ, ಅನುದಾನ ಬಿಡುಗಡೆಯ ಬಗ್ಗೆ ಯಾವ ಭರವಸೆಯನ್ನೂ ನೀಡಿಲ್ಲ. ಈ ಹಿನ್ನೆಲೆ ಪ್ರತಿಭಟನೆ ನಡೆಸಲಾಗುತ್ತಿದ್ದು, ಸಮಿತಿಗೆ ಲಿಖಿತ ಭರವಸೆ ನೀಡಿ ಅದನ್ನು ಕಾರ್ಯರೂಪಕ್ಕೆ ತರಬೇಕು. ಅಲ್ಲಿಯವರೆಗೂ ನಿರಂತರ ಹೋರಾಟ ನಡೆಸುತ್ತೇವೆ ಎಂದು ರಸ್ತೆ ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರು ತಿಳಿಸಿದ್ದಾರೆ.