ಕುಶಾಲನಗರ, ಅ. ೯: ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ವತಿಯಿಂದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕರಾಟೆ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು. ಪಂದ್ಯಾವಳಿಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯರೂ ಆದ ಅಖಿಲ ಕರ್ನಾಟಕ ರಾಟೆ ಫೆಡರೇಷನ್ ಮತ್ತು ಸ್ಪೋರ್ಟ್ಸ್ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಅರುಣ್ ಮಾಚಯ್ಯ ಮಾತನಾಡಿ, ವಿದ್ಯಾರ್ಥಿಗಳು ಕರಾಟೆ ಸೇರಿದಂತೆಇನ್ನಿತರ ಕ್ರೀಡೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರೀಡಾ ಸ್ಪೂರ್ತಿ ಬೆಳೆಸಿಕೊಳ್ಳಬೇಕು ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಉಪನಿರ್ದೇಶಕ ವೇದಮೂರ್ತಿ ಮಾತನಾಡಿ, ಕರಾಟೆಯು ವಿದ್ಯಾರ್ಥಿಗಳ ಪ್ರತಿಭೆಗೆ ಸೂಕ್ತ ಅವಕಾಶ ಕಲ್ಪಿಸುವಂತಹ ಪಂದ್ಯಾವಳಿ ಇದಾಗಿದೆ ಎಂದರು. ಜಿ.ಪಂ.ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಕರಾಟೆಗೆ ಹೆಚ್ಚಿನ ಮಹತ್ವವಿದೆ. ವಿದ್ಯಾರ್ಥಿಗಳು ಇಂತಹ ಕ್ರೀಡೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು. ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾ ಶಿವಯ್ಯ ಎಸ್ ಪಲ್ಲೆದ್ ಬಹುಮಾನ ವಿತರಿಸಿದರು.

ಈ ಪಂದ್ಯಾವಳಿಯ ಸಂಘಟನೆಗೆ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಕರಾಟೆ ಮತ್ತು ಯೋಗ ಸಂಸ್ಥೆಯ ಅಧ್ಯಕ್ಷ ಎನ್.ಎಸ್. ಅರುಣ್, ಪ್ರಮೋದ್ ಮತ್ತು ಸಂಕೇತ್ ಇದ್ದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎನ್. ಮಂಜುನಾಥ್, ತಾಲೂಕು ಘಟಕದ ಅಧ್ಯಕ್ಷ ಟಿ.ಕೆ. ಬಸವರಾಜು ಮೊರಾರ್ಜಿ ದೇಸಾಯಿ ವಸತಿ ಶಾಲಾ ಪ್ರಾಂಶುಪಾಲೆ ಎಸ್.ಎಸ್. ಶ್ರೀ ದೇವಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಕಾರ್ಯದರ್ಶಿ ರತ್ನಕುಮಾರ್ ಹಾಗೂ ಮೈಸೂರಿನಿಂದ ಆಗಮಿಸಿದ ತೀರ್ಪುಗಾರರು ಪಾಲ್ಗೊಂಡಿದ್ದರು. ಪಂದ್ಯಾವಳಿಯಲ್ಲಿ ಒಟ್ಟು ೨೫೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ ಶಾಲಾ ವಿಭಾಗದ ೫ ಬಾಲಕರು ಮತ್ತು ೫ ಬಾಲಕಿಯರು ಹಾಗೂ ಪ್ರೌಢಶಾಲಾ ವಿಭಾಗದ ೧೨ ಬಾಲಕರು ಮತ್ತು ೧೧ ಬಾಲಕಿಯರು ಒಟ್ಟು ೩೩ ವಿದ್ಯಾರ್ಥಿಗಳು ದಕ್ಷಿಣಕನ್ನಡ ಜಿಲ್ಲೆಯ ಕಟೀಲ್‌ನಲ್ಲಿ ನಡೆಯುವ ರಾಜ್ಯಮಟ್ಟದ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿದ್ದಾರೆ.