ಸೋಮವಾರಪೇಟೆ, ಅ. ೯: ‘ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಹೋಗಲಾಡಿಸಿ ತಳಮಟ್ಟದ ಸಮುದಾಯಗಳು ಸ್ವಾಭಿಮಾನದಿಂದ ಬದುಕಲು ಭದ್ರ ಬುನಾದಿ ಹಾಕಿದವರು ಶ್ರೀ ನಾರಾಯಣ ಗುರುಗಳು’ ಎಂದು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಸೋಮವಾರಪೇಟೆ ತಾಲೂಕು ಹಿಂದೂ ಮಲಯಾಳಿ ಸಮಾಜದ ವತಿಯಿಂದ ಇಲ್ಲಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಓಣಂ ಉತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ರಾಷ್ಟçಪಿತ ಮಹಾತ್ಮಾ ಗಾಂಧೀಜಿ ಅವರೂ ಸಹ ಬ್ರಹ್ಮಶ್ರೀ ನಾರಾಯಣ ಗುರುಗಳಿಂದ ಪ್ರಭಾವಿತರಾಗಿದ್ದರು. ಆಧುನಿಕ ಸಮಾಜದ ಬ್ರಹ್ಮ ಎಂದು ನಾರಾಯಣ ಗುರುಗಳನ್ನು ಬಣ್ಣಿಸಿದ್ದರು. ಇಂತಹ ಮಹಾನ್ ವ್ಯಕ್ತಿಯ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಾರಾಯಣ ಗುರುಗಳ ಮಂದಿರ ನಿರ್ಮಾಣಕ್ಕೆ ೭೦ ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.

ರಾಜ್ಯ ಸರ್ಕಾರದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಸಹ ರಾಜ್ಯದಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ತಲಾ ೨೫ ಕೋಟಿ ಅನುದಾನ ಒದಗಿಸಿ ನಾಲ್ಕು ಶಾಲೆಗಳನ್ನು ತೆರೆಯಲು ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ. ಸರ್ಕಾರ ಎಲ್ಲಾ ಸಮುದಾಯಕ್ಕೆ ತಾಯಿಯ ಸ್ಥಾನದಲ್ಲಿದ್ದು, ಎಲ್ಲಾ ಸಮುದಾಯಗಳ ಅಭ್ಯುದಯಕ್ಕೆ ಕಾರ್ಯಕ್ರಮ ಅನುಷ್ಠಾನಗೊಳಿಸುತ್ತಿದೆ ಎಂದು ಹೇಳಿದರು.

ಪೋಷಕರು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ಇಂದು ಭಾರತ ಎಲ್ಲಾ ರಂಗಗಳಲ್ಲೂ ಬಲಿಷ್ಠವಾಗುತ್ತಿದೆ. ವಿಶ್ವವೇ ನಮ್ಮ ದೇಶವನ್ನು ಗಮನಿಸುತ್ತಿದೆ. ಭಾರತದ ಪ್ರಜೆಗಳಾಗಿ ನಾವುಗಳು ನಮ್ಮ ಕರ್ತವ್ಯವನ್ನು ನಿರ್ವಹಿಸಬೇಕು ಎಂದು ಕರೆ ನೀಡಿದರು.

೫೦ ಲಕ್ಷ ಅನುದಾನ: ಹಿಂದೂ ಮಲಯಾಳ ಸಮಾಜದಿಂದ ಸೋಮವಾರಪೇಟೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನಕ್ಕೆ ಅನುದಾನ ನೀಡುವಂತೆ ಜಿಲ್ಲೆಯ ಶಾಸಕರುಗಳ ಮೂಲಕ ಸಮಿತಿ ಯವರು ಮನವಿ ಸಲ್ಲಿಸಿದ್ದು, ಭವನ ನಿರ್ಮಾಣಕ್ಕೆ ಸರ್ಕಾರದಿಂದ ೫೦ ಲಕ್ಷ ಅನುದಾನ ಒದಗಿಸಲಾಗುವುದು ಎಂದು ಇದೇ ಸಂದರ್ಭ ಸಚಿವ ಶ್ರೀನಿವಾಸ ಪೂಜಾರಿ ಅವರು ಘೋಷಿಸಿದರು.

ಮುಖ್ಯ ಅತಿಥಿಯಾಗಿದ್ದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಮಾತನಾಡಿ, ಮಲಯಾಳಿ ಸಮುದಾಯದವರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕವಾಗಿ ಸ್ವಾವಲಂಭಿಗಳಾಗಬೇಕು. ಸಮುದಾಯ ಭವನಕ್ಕೆ ಈಗಾಗಲೇ ಶಾಸಕರ ನಿಧಿಯಿಂದ ರೂ. ೫ ಲಕ್ಷ ಅನುದಾನ ನೀಡಲಾಗಿದೆ. ಮುಂದಿನ ದಿನಗಳಲ್ಲೂ ಸಹ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದರು.

ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಇವುಗಳನ್ನು ಸದುಪಯೋಗಪಡಿಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಸಾಮೂಹಿಕವಾಗಿ ಆಚರಿಸಲ್ಪಡುವ ಹಬ್ಬಗಳು ಸಮು ದಾಯ ಬಾಂಧವರನ್ನು ಒಂದೆಡೆ ಸೇರಿಸಲು ಸಹಕಾರಿಯಾಗುತ್ತದೆ. ಸ್ವಾಭಿಮಾನಿ ಸಮಾಜಕ್ಕೆ ಶಿಕ್ಷಣವೇ ಬುನಾದಿಯಾಗಿದ್ದು, ಪೋಷಕರು ತಮ್ಮ ಮಕ್ಕಳು ಶಿಕ್ಷಣದಿಂದ ವಂಚಿತ ರಾಗದಂತೆ ಜಾಗ್ರತೆ ವಹಿಸಬೇಕು ಎಂದರು.

ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವನ್ನು ವಹಿಸಿದ್ದ ಸೋಲೂರು ಆರ್ಯ ಈಡಿಗ ಮಹಾ ಸಂಸ್ಥಾನದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಕೇರಳದ ಗೃಹಸ್ಥಾಶ್ರಮದ ಶ್ರೀ ಗಂಗಾಜೀ ನಾಯರ್ ಅವರುಗಳು ಆಶೀರ್ವಚನ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿಂದೂ ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯ ವಹಿಸಿದ್ದರು. ವೇದಿಕೆಯಲ್ಲಿ ಸಮಾಜದ ಸ್ಥಾಪಕಾಧ್ಯಕ್ಷ ಪಿ.ಡಿ. ಪ್ರಕಾಶ್, ಮಾಜಿ ಸಚಿವ ಬಿ.ಎ. ಜೀವಿಜಯ, ಹೈಕೋರ್ಟ್ನ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ, ಕಾಂಗ್ರೆಸ್ ಮುಖಂಡ ಡಾ. ಮಂಥರ್‌ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಭರತ್‌ಕುಮಾರ್, ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಎಸ್‌ಎನ್‌ಡಿಪಿ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಹಿಂದೂ ಮಲಯಾಳಿ ಸಮಾಜದ ವಿವಿಧ ಘಟಕಗಳ ಪ್ರಮುಖರಾದ ಲೀಲಾದಾಸ್, ಕೆ.ಎಸ್. ರಮೇಶ್, ಉದಯ್‌ಕುಮಾರ್, ಸಾಯಿಕುಮಾರ್, ಗಂಗಾಧರ್, ಎಸ್.ಎನ್. ದಯಾ ನಂದ್, ಎಸ್. ಅಯ್ಯಪ್ಪ, ಶ್ವೇತಾ ಪ್ರದೀಪ್, ಟಿ.ಕೆ. ಸುಧೀರ್, ಅಜೀಶ್ ಕುಮಾರ್, ಶಶಿಧರ್, ಕೆ. ಬಾಬು ಸೇರಿದಂತೆ ಇತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪಟ್ಟಣದ ಶ್ರೀಮುತ್ತಪ್ಪ ದೇವಾಲಯದಿಂದ ಮುಖ್ಯ ರಸ್ತೆಗಳ ಮೂಲಕ ಗೌಡ ಸಮಾಜದವರೆಗೆ ಓಣಾಘೋಷ ಹಾಗೂ ಸಿಂಗಾರಿ ಮೇಳದೊಂದಿಗೆ ಮೆರವಣಿಗೆ ನಡೆಯಿತು. ಸಮಾಜ ಬಾಂಧವರಿಗೆ ಪೂಕಳಂ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸ ಲಾಯಿತು.ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈದ್ಯ ಪುಟ್ಟರಾಜು, ಪ್ರಗತಿಪರ ಕೃಷಿಕ ಎ.ಡಿ. ಮೋಹನ್‌ಕುಮಾರ್, ಶಿಲ್ಪಿ ಅನೀಶ್, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ವೈಶಾಖ್, ಯಕ್ಷಿತ್, ಅಥ್ಲೆಟಿಕ್ ಕ್ರೀಡಾಪಟು ಸ್ನೇಹಾ, ಹ್ಯಾಂಡ್‌ಬಾಲ್ ಕ್ರೀಡಾಪಟು ಜೀವನ್ ಅವರುಗಳನ್ನು ಸನ್ಮಾನಿಸ ಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆ ಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು, ಸಮಾಜದ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಓಣಂ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.