( ಹೆಚ್.ಕೆ. ಜಗದೀಶ್)
ಗೋಣಿಕೊಪ್ಪ, ಅ. ೮: ದ.ಕೊಡಗಿನಲ್ಲಿ ನಿರಂತರ ಹುಲಿ ದಾಳಿ ಮುಂದುವರೆಯುತ್ತಿದ್ದು ರೈತರ ಜಾನುವಾರುಗಳು ದಿನಕ್ಕೊಂದರAತೆ ಹುಲಿಗಳ ಬಾಯಿಗೆ ಆಹಾರವಾಗುತ್ತಿವೆ. ಬಹುತೇಕ ರೈತರ ಕಾಫಿ ತೋಟದಲ್ಲಿ ಹುಲಿಗಳು ಕಾಣಿಸಿಕೊಳ್ಳುತ್ತಿದ್ದು ಭಯದ ವಾತಾವರಣದ ನಡುವೆ ಕಾಫಿ ತೋಟಗಳಿಗೆ ಕಾರ್ಮಿಕರು ಹಾಗೂ ಬೆಳೆಗಾರರು ತೆರಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ೧೫ ದಿನಗಳ ಹಿಂದೆ ಬಾಳೆಲೆ ಹೋಬಳಿಯ ಬೊಮ್ಮಾಡು ಗಿರಿಜನ ಕಾಲೋನಿಯಲ್ಲಿ ಕೂಲಿ ಕಾರ್ಮಿಕನನ್ನು ಬಲಿ ತೆಗೆದುಕೊಂಡಿದ್ದ ಹುಲಿಯು ನಂತರದ ದಿನಗಳಲ್ಲಿ ಜಾನುವಾರುಗಳನ್ನು ತಿಂದು ಹಾಕುತ್ತಿವೆ. ಇದೀಗ ಅರಣ್ಯ ಇಲಾಖೆಯ ಮಾಹಿತಿ ಪ್ರಕಾರ ಶ್ರೀಮಂಗಲ, ಹುದಿಕೇರಿ, ಬಾಳೆಲೆ ವ್ಯಾಪ್ತಿಯ ರೈತರ ಕಾಫಿ ತೋಟದಲ್ಲಿ ಮೂರು ಹುಲಿಗಳು ಕಾಣಿಸಿಕೊಂಡಿದ್ದು ಇವುಗಳನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ
(ಮೊದಲ ಪುಟದಿಂದ) ಅರಣ್ಯ ಇಲಾಖೆಯು ಕ್ರಮ ವಹಿಸಿದೆ.
ರೈತರ ತೋಟ ಹಾಗೂ ಮನೆಯ ಸಮೀಪ ಕಟ್ಟಿ ಹಾಕಲಾಗುತ್ತಿರುವ, ಕೊಟ್ಟಿಗೆ ಯಲ್ಲಿರುವ ಜಾನುವಾರುಗಳನ್ನು ಬೇಟೆಯಾಡುತ್ತಿರುವ ಹುಲಿಗಳು ಒಂದು ತೋಟದಿಂದ ಮತ್ತೊಂದು ತೋಟಕ್ಕೆ ತೆರಳುತ್ತಿವೆ. ಸಮೀಪದ ಅರಣ್ಯ ವ್ಯಾಪ್ತಿಯಿಂದ ಆಗಮಿಸಿರುವ ಹುಲಿಗಳು ತನ್ನ ದಿನನಿತ್ಯದ ಆಹಾರಕ್ಕಾಗಿ ಸುಲಭವಾಗಿ ಸಿಗುವ ಜಾನುವಾರುಗಳ ಮೇಲೆ ಎರಗುತ್ತಿವೆ.
ಹುಲಿಗಳ ಸಂಚಾರ ಅಧಿಕವಾಗಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಗೆ ಕಾರ್ಯಾಚರಣೆಗೆ ಸಮಸ್ಯೆಯಾಗಿದೆ. ಕೆಲಸದ ಒತ್ತಡದ ನಡುವೆ ಹುಲಿಯನ್ನು ಸೆರೆ ಹಿಡಿಯುವ ನಿಟ್ಟಿನಲ್ಲಿ ಮಡಿಕೇರಿಯ ಸಿಸಿಎಫ್ ಹೆಚ್.ಆರ್.ಎನ್. ಮೂರ್ತಿ ಹಾಗೂ ವೀರಾಜಪೇಟೆಯ ಡಿಎಫ್ಓ ಚಕ್ರಪಾಣಿ ಅಗತ್ಯ ಕ್ರಮ ಕೈಗೊಂಡಿದ್ದು ಜಾನುವಾರು ದಾಳಿ ನಡೆದ ಸ್ಥಳದಲ್ಲಿ ಹುಲಿಯ ಸೆರೆಗೆ ಬೇಕಾದ ಬೋನ್ಗಳನ್ನು ಅಳವಡಿಸಿದ್ದಾರೆ.
ಆಯಾ ಕಟ್ಟಿನ ಪ್ರದೇಶದಲ್ಲಿ ಹುಲಿಗಳ ಬರುವಿಕೆಗಾಗಿ ಹಾಗೂ ಗುರುತುವಿಕೆಗಾಗಿ ಕ್ಯಾಮರಾಗಳನ್ನು ಅಳವಡಿಸಿದ್ದು ಸಿಬ್ಬಂದಿಗಳು ಆ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಇತ್ತೀಚೆಗೆ ಶ್ರೀಮಂಗಲ ಹೋಬಳಿಯ ಹರಿಹರ ಗ್ರಾಮದ ತೀತಿರ ಸದಾ ಎಂಬವರ ಎರಡು ಎಮ್ಮೆಗಳನ್ನು ಮುಂಜಾನೆಯ ವೇಳೆ ಹುಲಿಯು ದಾಳಿ ನಡೆಸಿ ಕೊಂದು ಹಾಕಿತ್ತು. ಇದರಿಂದ ಗ್ರಾಮಸ್ಥರು ಆತಂಕಕ್ಕೊಳಗಾಗಿ ಅರಣ್ಯ ಇಲಾಖೆಯ ವಿರುದ್ಧ ರೈತ ಸಂಘದ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಿ, ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಆಗ್ರಹಿಸಿದ್ದರು. ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಹುಲಿಯ ಸೆರೆಗೆ ಬೇಕಾದ ಅವಶ್ಯಕತೆಗಳನ್ನು ಗ್ರಾಮಸ್ಥರ ಮುಂದೆಯೇ ಅಳವಡಿಸುವ ಪ್ರಕ್ರಿಯೆ ಕೈಗೊಂಡಿದ್ದರು.
ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಿಂದ ಕೆಲವು ಹುಲಿಗಳು ಸಂತಾನ ಅಭಿವೃದ್ಧಿಗಾಗಿ ರೈತರ ತೋಟಗಳತ್ತ ಹೆಜ್ಜೆ ಹಾಕಿದ್ದು ಈ ವೇಳೆ ತನ್ನ ಆಹಾರಕ್ಕಾಗಿ ಜಾನುವಾರುಗಳ ಮೇಲೆ ಎರಗುತ್ತಿರುವುದಾಗಿ ತಿಳಿದು ಬಂದಿದೆ. ೭ ರಿಂದ ೧೦ ವರ್ಷದ ಒಳಗಿನ ಹುಲಿಗಳು ಸಂಚರಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ದೊರಕಿದೆ. ಈ ನಿಟ್ಟಿನಲ್ಲಿ ಹುಲಿಯನ್ನು ಸೆರೆ ಹಿಡಿಯಲು ಹಿರಿಯ ಅಧಿಕಾರಿಗಳಿಂದ ಅನುಮತಿ ಪಡೆದಿದ್ದಾರೆ. ಈಗಾಗಲೇ ಹುಲಿಯ ಸೆರೆಗೆ ಹರಿಹರ ಗ್ರಾಮದ ಕಾಫಿ ತೋಟದಲ್ಲಿ ಎರಡು ಬೋನನ್ನು ವಿವಿಧ ದಿಕ್ಕಿನಲ್ಲಿ ಅಳವಡಿಸಲಾಗಿದ್ದು ಬೋನಿನ ಒಳಗೆ ಹುಲಿಯನ್ನು ಆಕರ್ಷಿಸಲು ಹಂದಿ ಮರಿಯನ್ನು ಕಟ್ಟಲಾಗಿದೆ. ಹುಲಿಯನ್ನು ಸೆರೆ ಹಿಡಿದೆ ತೀರುವ ನಿಟ್ಟಿನಲ್ಲಿ ಅಗತ್ಯ ಸಿಬ್ಬಂದಿಗಳನ್ನು ನಿಯೋಜಿಸ ಲಾಗಿದ್ದು ಈ ಭಾಗದ ಜನರು ಎಚ್ಚರಿಕೆಯಿಂದ ಓಡಾಟ ನಡೆಸುವಂತೆ ಹಾಗೂ ಜಾನುವಾರುಗಳ ಮೇಲೆ ದಾಳಿ ನಡೆಸಿದ ಪ್ರದೇಶದಲ್ಲಿ ಕೆಲವು ದಿನ ಕಾಫಿ ತೋಟದಲ್ಲಿ ಕಾರ್ಮಿಕರಾಗಲಿ, ರೈತರಾಗಲಿ ತೆರಳದಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.