ಮಡಿಕೇರಿ, ಅ. ೮: ಕುಶಾಲನಗರ ಸಮೀಪದ ಆನೆಕಾಡು ಬಳಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಈರ್ವರು ಆರೋಪಿಗಳನ್ನು ಮಾಲು ಸಹಿತ ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮೈಸೂರಿನ ಸುಂಟಿಕೊಪ್ಪದ ಮಹಮ್ಮದ್ ರಫೀಕ್ (೩೮), ಮೈಸೂರಿನ ಮುಜಾಹಿದ್ ಪಾಷ (೨೬) ಬಂಧಿತ ಆರೋಪಿಗಳು. ಕುಶಾಲನಗರ ವ್ಯಾಪ್ತಿಯಲ್ಲಿ ಗಾಂಜಾ ಮಾರಾಟ ಹೆಚ್ಚುತ್ತಿರುವ ಹಿನ್ನೆಲೆ ಪೊಲೀಸ್ ವಿಶೇಷ ತಂಡ ಇದಕ್ಕಾಗಿ ರಚನೆಗೊಂಡಿದೆ. ಖಚಿತ ಮಾಹಿತಿ ಆಧರಿಸಿ ಈ ತಂಡ ಆನೆಕಾಡಿನ ಅರಣ್ಯ ಇಲಾಖೆಯ ಸೌದೆ ಡಿಪೋ ಬಳಿ ದಾಳಿ ನಡೆಸಿ ೬೫ ಸಾವಿರ ಮೌಲ್ಯದ ೨ ಕೆಜಿ ೧೨೫ ಗ್ರಾಂ ತೂಕದ ಗಾಂಜಾ, ೨ ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಒಂದು ಮಾರುತಿ ೮೦೦ ಕಾರು, ಆಟೋ ರಿಕ್ಷಾವನ್ನು ವಶಪಡಿಸಿಕೊಂಡಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ ನಿರ್ದೇಶನ, ಸೋಮವಾರಪೇಟೆ ಡಿವೈಎಸ್‌ಪಿ ಗಂಗಾಧರಪ್ಪ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಬಿ.ಜಿ. ಮಹೇಶ್, ಉಪ ನಿರೀಕ್ಷಕರುಗಳಾದ ಚಂದ್ರಶೇಖರ್, ಭಾರತಿ, ಕಾಶಿನಾಥ್, ಸಹಾಯಕ ನಿರೀಕ್ಷಕರುಗಳಾದ ಎನ್.ಕುಮಾರಿ, ಬಿ.ಎಸ್. ವಿಠಲ, ಸಿಬ್ಬಂದಿಗಳಾದ ಲೋಕೇಶ್, ಶಿವಕುಮಾರ್, ಮಂಜುನಾಥ್, ಅಜಿತ್, ಸಜಿ, ಪ್ರಕಾಶ್, ಸಂದೇಶ್. ರಮೇಶ್. ದಿವೇಶ್, ಕಾಂತಿ, ಹರ್ಷಾವತಿ, ಸುಂಟಿಕೊಪ್ಪ ಠಾಣೆಯ ಉದಯ. ಪ್ರವೀಣ್, ಸಿಡಿಆರ್ ಘಟಕದ ರಾಜೇಶ್, ಗಿರೀಶ್, ಪ್ರವೀಣ್ ಪಾಲ್ಗೊಂಡಿದ್ದು, ಈ ತಂಡಕ್ಕೆ ಎಸ್.ಪಿ. ಅಯ್ಯಪ್ಪ ಅವರು ನಗದು ಬಹುಮಾನ ಘೋಷಿಸಿದ್ದಾರೆ.