ಚಿತ್ರ, ವರದಿ: ವಾಸು ಎ.ಎನ್.

ಸಿದ್ದಾಪುರ, ಅ. ೮: ಹಾಡಹಗಲೇ ಒಂಟಿ ಸಲಗವೊಂದು ದಾಳಿ ನಡೆಸಿದ ಪರಿಣಾಮ ಈರ್ವರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಬಾಡಗಬಾಣಂಗಾಲ ಗ್ರಾಮದ ತೂಪನಕೊಲ್ಲಿ ಕಾಫಿ ತೋಟದಲ್ಲಿ ನಡೆದಿದೆ.

ಸಿದ್ದಾಪುರದ ಬಾಡಗಬಾಣಂಗಾಲ ಗ್ರಾಮದ ಬಿ.ಬಿ.ಟಿ.ಸಿ. ಸಂಸ್ಥೆಗೆ ಸೇರಿದ ತೂಪನಕೊಲ್ಲಿ ಕಾಫಿ ತೋಟದೊಳಗೆ ಕಾರ್ಮಿಕ ಮಹಿಳೆಯರಾದ, ಸರಿತಾ, ಲಲಿತಾ, ವಲ್ಲಿ, ಕಲ್ಯಾಣಿ ಈ ನಾಲ್ವರು ಅಪರಾಹ್ನ ೧.೪೫ರ ಸಮಯಕ್ಕೆ ಕಾಫಿ ತೋಟದೊಳಗೆ ಕೆಲಸ ಮಾಡುತ್ತಿದ್ದರು. ಕೆಲಸದಲ್ಲಿ ಮಗ್ನರಾಗಿರುವ ಸಂದರ್ಭದಲ್ಲಿ ಒಂಟಿಸಲಗವೊAದು ಹಠಾತ್ತನೆ ಬಂದು ಸರಿತಾ (೩೦) ಹಾಗೂ ಲಲಿತಾ (೪೦) ಎಂಬಿಬ್ಬರು ಮಹಿಳೆಯರ ಮೇಲೆ ಏಕಾಏಕಿ ದಾಳಿ ನಡೆಸಿತು. ಅಲ್ಲದೇ ಮೊದಲಿಗೆ ಸರಿತಾಳನ್ನು ಸೊಂಡಿಲಿನಿAದ ಗುದ್ದಿ ಎತ್ತಿ ಎಸೆದಿದೆ. ನಂತರ ಲಲಿತಾಳ ಮೇಲೆ ದಾಳಿ ನಡೆಸಿ ಸೊಂಡಿಲಿನಿAದ ಎತ್ತಿ ಎಸೆದಿರುತ್ತದೆ. ಕಾಡಾನೆ ದಾಳಿಗೆ ಸಿಲುಕಿ ಸರಿತಾಳ ಕಾಲಿನ ಭಾಗಕ್ಕೆ ಗಂಭೀರವಾದ ಗಾಯವಾಗಿದೆ. ಅಲ್ಲದೇ ಲಲಿತಾಳ ಸೊಂಟಕ್ಕೆ ಗಂಭೀರ ಗಾಯವಾಗಿದೆ.

ಈ ಸಂದರ್ಭದಲ್ಲಿ ಕಿರುಚಾಡಿಕೊಂಡ ಜೊತೆಯಲ್ಲಿ ಕೆಲಸ ಮಾಡುತ್ತಿದ್ದ ವಲ್ಲಿ ಹಾಗೂ ಕಲ್ಯಾಣಿ ಕಾಫಿ ತೋಟದೊಳಗೆ ಓಡಿ ಹೋಗಿ ದೊಡ್ಡ ಮರಗಳ ಬದಿಯಲ್ಲಿ ಅವಿತು ಕುಳಿತುಕೊಂಡರು. ತಪ್ಪಿದ್ದಲ್ಲಿ ಇವರ ಮೇಲೂ ಕಾಡಾನೆ ದಾಳಿ ನಡೆಸುವ ಸಾಧ್ಯತೆ ಇತ್ತು ಎಂದು ಕಾರ್ಮಿಕರು ತಿಳಿಸಿದ್ದಾರೆ. ಕಾಡಾನೆ ದಾಳಿಗೆ ಸಿಲುಕಿ ಗಂಭೀರವಾದ ಗಾಯಗೊಂಡಿರುವ ಸರಿತಾ ಹಾಗೂ ಲಲಿತಾರವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಿದ್ದಾಪುರದ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದ ನಂತರ ಹೆಚ್ಚಿನ ಚಿಕಿತ್ಸೆಗೆ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಖಾಸಗಿ ಸಂಸ್ಥೆಯ ಕಾಫಿ ತೋಟಗಳಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಕಾರ್ಮಿಕರಿಗೆ ಭದ್ರತೆಯನ್ನು ಒದಗಿಸುವ ನಿಟ್ಟಿನಲ್ಲಿ ಗನ್‌ಮ್ಯಾನ್‌ಗಳನ್ನು ಸಂಸ್ಥೆಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಸಿ.ಐ.ಟಿ.ಯು ಸಂಘಟನೆಯ ಜಿಲ್ಲಾಧ್ಯಕ್ಷ ಮಹದೇವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿ ಇರುವ ವಿಚಾರ ಸಂಸ್ಥೆಗೆ ಗೊತ್ತಿದ್ದರೂ ಕೂಡ ಸಂಸ್ಥೆ ಈ ಬಗ್ಗೆ ಗಂಭೀರವಾಗಿ ಪರಿಗಣಿಸುತ್ತಿಲ್ಲವೆಂದು ದೂರಿದರು.

ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ

ಕಾಡಾನೆ ದಾಳಿಗೆ ಸಿಲುಕಿ ಗಾಯಗೊಂಡಿ ರುವ ಗಾಯಾಳುಗಳನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಲು ಆಗಮಿಸಿದ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ಹೆಚ್.ಬಿ. ರಮೇಶ್ ಅವರು ಅರಣ್ಯ ಇಲಾಖಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಾಫಿ ತೋಟದೊಳಗೆ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಬದಲು ಅವುಗಳನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕೆಂದು ಒತ್ತಾಯಿಸಿದರು. ಆಗಿಂದಾಗ್ಗೆ ಕಾರ್ಮಿಕರ ಮೇಲೆ ಕಾಡಾನೆಗಳು ದಾಳಿ ನಡೆಸುತ್ತಿದ್ದು, ಕಾರ್ಮಿಕರು ತೋಟದೊಳಗೆ ಕೆಲಸಕ್ಕೆ ತೆರಳದಂತೆ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕಾಡಾನೆ ದಾಳಿ ನಡೆಸಿದ ವಿಚಾರ ತಿಳಿದು ಕಾರ್ಮಿಕರು ಧಾವಿಸಿ ಬಂದರು. ಜನಜಂಗುಳಿ ಸೇರಿದರು. ಘಟನೆಯ ಬಗ್ಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್, ಉಪವಲಯ ಅರಣ್ಯಾಧಿಕಾರಿ ಶ್ರೀನಿವಾಸ್ ಭೇಟಿ ನೀಡಿ, ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಸಂಜೆ ಸಮಯದಲ್ಲಿ ಮತ್ತೆ ತೋಟದಲ್ಲಿ ಆನೆ ಪ್ರತ್ಯಕ್ಷಗೊಂಡಿದ್ದು, ಆತಂಕ ಸೃಷ್ಟಿಯಾಗಿದೆ.