ಗೋಣಿಕೊಪ್ಪ ವರದಿ, ಅ. ೯: ಸಮ್ಮಂದ ಅಡ್‌ಕ್‌ವೊ ಪದ್ಧತಿಯು ಮದುವೆಯಲ್ಲಿ ಹೆಣ್ಣಿಗೆ ನೀಡುವ ಸುಪ್ರೀಂ ತೀರ್ಪಿನಷ್ಟು ಮಹತ್ವ ಹೊಂದಿದೆ ಎಂದು ಹಿರಿಯ ಸಾಹಿತಿ, ಜಾನಪದ ತಜ್ಞ ಬಾಚರಣಿಯಂಡ ಪಿ. ಅಪ್ಪಣ್ಣ ಪ್ರತಿಪಾದಿಸಿದರು.
ಹುದಿಕೇರಿ ಕೊಡವ ಸಮಾಜದಲ್ಲಿ ಕೊಡವ ಕೂಟಾಳಿಯಡ ಕೂಟ ಭಾನುವಾರ ಆಯೋಜಿಸಿದ್ದ ‘ಪದ್ಧತಿ ಪಡಿಕನ, ಸಮ್ಮಂದ ಅಡ್‌ಕ್‌ವೊ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇದು ಹೆಣ್ಣು-ಗಂಡಿನ ಮನೆಯ ಪ್ರತೀ ಹಕ್ಕು ಪಡೆಯಲು ಮದುವೆ ಸಂದರ್ಭ ಎರಡು ಕಡೆಯ ಮನೆಯವರು ಪರಸ್ಪರ ಹಕ್ಕು ನೀಡುವ ಪದ್ಧತಿಯಾಗಿದೆ. ಕೊಡವ ಮದುವೆಯಲ್ಲಿನ ಈ ಪದ್ಧತಿ ಸುಪ್ರೀಂ ತೀರ್ಪು ಇದ್ದಂತೆ. ಮದುವೆ ಹೆಣ್ಣನ್ನು ಗಂಡಿನ ಮನೆಗೆ ಒಪ್ಪಿಸುವುದು ಜವಾಬ್ದಾರಿಯ ಕಾರ್ಯವಾಗಿದೆ. ಪರಸ್ಪರ ಎರಡು ಕಡೆಗಳಲ್ಲಿ ಮದುವೆಯಾದ ಹೆಣ್ಣಿಗೆ ನೀಡುವ ಜವಾಬ್ದಾರಿ, ಸ್ಥಾನ-ಮಾನ, ಹಕ್ಕಿನ ಪ್ರತೀಕವಾಗಿದೆ. ಇಂತಹ ಪದ್ಧತಿ ಪೋಷಣೆಗೆ ಮುಂದಾಗಬೇಕಿದೆ.
ಈ ಸಂದರ್ಭ ನೀಡುವ ೧೨ ಹಚ್ಚಿ ಹಣವು ಇದಕ್ಕೆ ಸಾಕ್ಷಿ ಎಂಬುವುದನ್ನು ಬಿಂಬಿಸಿದರು. ಕೊಡವ ಭಾಷೆ ಉಳಿಸಿಕೊಳ್ಳಲು ಎಲ್ಲರ ಪ್ರಯತ್ನ ಅಗತ್ಯ ಎಂದು ಮನವಿ ಮಾಡಿದರು.
ಭಾಷೆಯ ಉಳಿವು ಅಗತ್ಯ
ಪದ್ಧತಿ ಪಡಿಕನ ಸಮ್ಮಂದ ಅಡ್‌ಕನ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಹಿರಿಯ ವಕೀಲ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ತಜ್ಞರ ವರದಿಯಲ್ಲಿ ೨೧೦೦ನೇ ಇಸವಿಯ ವೇಳೆಗೆ ಕನ್ನಡ ಸೇರಿದಂತೆ ಕೊಡವ ಇನ್ನಿತರ ಭಾಷೆಗಳು ಅಂತ್ಯಗೊಳ್ಳುವ ಸಾಧ್ಯತೆಗಳನ್ನು ವ್ಯಕ್ತಪಡಿಸಿದ್ದು ಈ ನಿಟ್ಟಿನಲ್ಲಿ ಕೊಡವ ಭಾಷೆಯ ಉಳಿವಿಗೆ ಸಂಘಟನೆಗಳು ಎಚ್ಚರದಿಂದ ಹೆಜ್ಜೆ ಇಡುವಂತೆ ಕರೆ ನೀಡಿದರು.
ಕೊಡವ ಭಾಷೆಯನ್ನಾಡುವ ಜನರು ವಿಶ್ವದಲ್ಲಿಯೇ ಎರಡು ಲಕ್ಷಕ್ಕಿಂತ ಕಡಿಮೆ ಇದ್ದು, ಅವರಲ್ಲಿ ಸುಮಾರು ಒಂದು ಲಕ್ಷದ ಐವತ್ತು ಸಾವಿರ ಮಂದಿ ಮಾತ್ರ ಕೊಡವ ಭಾಷೆಯನ್ನು ಮನೆಯಲ್ಲಿ ಆಡು ಭಾಷೆಯಾಗಿ ಬಳಕೆ ಮಾಡುತ್ತಿದ್ದಾರೆ. ಸುಮಾರು ನಾಲ್ಕು ಕೋಟಿ ಜನರು ಕನ್ನಡ ಭಾಷೆಯನ್ನು ಮನೆಯಲ್ಲಿ ಆಡುಭಾಷೆಯಾಗಿ ಬಳಕೆ ಮಾಡುತ್ತಿದ್ದು, ಇದಕ್ಕೆ ಮುಂದಿನ ದಿನಗಳಲ್ಲಿ ಆತಂಕವಿರುವಾಗ ಕೊಡವ ಭಾಷೆಗೂ ಆ ಪರಿಸ್ಥಿತಿ ಬರುವ ಸಾಧ್ಯತೆ ಇರುವುದರಿಂದ ಪ್ರತಿಯೊಬ್ಬರೂ ಜಾಗೃತರಾಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾಷೆ ಕೇವಲ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಭಾಷೆ ಎಂಬುದು ಆಯಾ ಪ್ರದೇಶದ, ಆಯಾ ಜನಾಂಗದ ಸಂಸ್ಕೃತಿಗಳನ್ನು ಬಿಂಬಿಸುತ್ತದೆ ಎಂದು ಪೊನ್ನಣ್ಣನವರು ವಿವರಿಸಿದರು.
ಸಮಾಜ ಸೇವಕ ಕೊಲ್ಲೀರ ಯು. ಬೋಪಣ್ಣ ಮಾತನಾಡಿ, ಗ್ರಾಮ ಗ್ರಾಮಗಳಲ್ಲಿ ಸಾಂಸ್ಕೃತಿಕ ಕೂಟ ರಚಿಸಿಕೊಂಡು, ತರಬೇತಿ ಮೂಲಕ ಕೊಡವ ಪದ್ಧತಿ, ಪರಂಪರೆ ಪೋಷಣೆಗೆ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಕೊಡವ ಕೂಟಾಳಿಯಡ ಕೂಟದ ಅಧ್ಯಕ್ಷೆ ಚಿಮ್ಮಚೀರ ಪವಿತ ರಜನ್ ಮಾತನಾಡಿ, ಮದುವೆಯಲ್ಲಿನ ಸಮ್ಮಂದ ಅಡ್‌ಕ್‌ವೊ ಪದ್ಧತಿ ಪೋಷಣೆಗೆ ಒತ್ತು ನೀಡಲಾಗಿದೆ. ತರಬೇತಿ ನೀಡಿ, ಪುಸ್ತಕ ನೀಡಿ ಪದ್ಧತಿ ರಕ್ಷಣೆ ಕಾಳಜಿ ನಿರ್ವಹಿಸಲಾಗುತ್ತಿದೆ ಎಂದರು.
ಪದ್ಧತಿ ಅನಾವರಣ: ಸಮ್ಮಂದ ಅಡ್‌ಕ್‌ವೊ ಪದ್ಧತಿಯನ್ನು ಅನ್ನಾಡಿಯಂಡ ಪೊನ್ನಣ್ಣ, ಕಾಳಮಂಡ ರಾಬಿನ್ ಗಂಡು ಮತ್ತು ಹೆಣ್ಣಿನ ಕಡೆಯವರ ಸ್ಥಾನದಲ್ಲಿ ನಿಂತು ನಡೆಸಿಕೊಟ್ಟರು. ಹಿರಿಯರಾದ ಬಾಚರಣಿಯಂಡ ಅಪ್ಪಣ್ಣ ಪದ್ಧತಿಯ ಅರ್ಥವನ್ನು ಸರಳ ಭಾಷೆ ಮೂಲಕ ವಿವರಿಸಿ ಪಾಲನೆಗೆ ಒತ್ತು ನೀಡಿದರು. ಒಂದು ಹೆಣ್ಣಿಗೆ ಗಂಡನ ಮನೆಯಲ್ಲಿ ದೊರೆಯುವ ಹಕ್ಕಿನ ಅರ್ಥ ಮೂಡಿಸುವ ಕಾರ್ಯಕ್ಕೆ ಬೆಳಕು ಚೆಲ್ಲಲಾಯಿತು. ಸಾಂಪ್ರದಾಯಿಕ ಕುಪ್ಯಚೇಲೆ, ಮಂಡೆತುಣಿ, ವಸ್ತç ಧರಿಸಿ ಕಾರ್ಯಕ್ಕೆ ಗೌರವ ನೀಡಿದರು.
ಸನ್ಮಾನ: ಸಮ್ಮಂದ ಅಡ್‌ಕ್‌ವೊ ಪದ್ಧತಿಯನ್ನು ಮದುವೆಗಳಲ್ಲಿ ಜವಾಬ್ದಾರಿಯುತವಾಗಿ ನಿರ್ವ ಹಿಸುತ್ತಿರುವ ಯುವಕರಾದ ಅನ್ನಡಿಯಂಡ ಪೊನ್ನಣ್ಣ, ಕಾಳಮಂಡ ರಾಬಿನ್ ಅವರುಗಳನ್ನು ಸನ್ಮಾನಿಸಲಾಯಿತು. ಕೂಟದಿಂದ ಇತ್ತೀಚೆಗೆ ನಡೆಸಿದ್ದ ಚುಪ್ಪಿ ಕೋಗಿಲೆ ಪೈಪೋಟಿಯ ಪ್ರಥಮ ಸ್ಥಾನ ಪಡೆದ ಬೊಳ್ಳಚೆಟ್ಟೀರ ಶರಿನ್ ಚಂಗಪ್ಪ, ದ್ವಿತೀಯ ಸ್ಥಾನ ಪಡೆದ ಕಾಂಡAಡ ಪರಿಧಿ ಪೂವಮ್ಮ, ತೃತೀಯ ಸ್ಥಾನ ವಿಜೇತೆ ಚೈಯಂಡ ದೇಶಿಕಾ ನವೀನ್ ಅವರುಗಳಿಗೆ ಬಹುಮಾನ ವಿತರಿಸಲಾಯಿತು. ಬೊಳ್ಳಚೆಟ್ಟೀರ ಶರಿನ್ ಚಂಗಪ್ಪ, ಹಂಚೇಟೀರ ದಿಷಾ, ಚೈಯಂಡ ದೇಶಿಕಾ ನವೀನ್ ಕೊಡವ ಹಾಡು ಹಾಡಿದರು. ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ದುಡಿಕೊಟ್ಟ್ ಮೂಲಕ ಕಾರ್ಯಕ್ರಮ ಉದ್ಘಾಟಿಸಲಾಯಿತು.
ಹುದಿಕೇರಿ ಕೊಡವ ಸಮಾಜ ಅಧ್ಯಕ್ಷ ಮೀದೇರಿರ ನವೀನ್, ಕಾಫಿ ಬೆಳೆಗಾರ ಕೊಕ್ಕಲೆಮಾಡ ತನು ತಿಮ್ಮಯ್ಯ, ಪೆಮ್ಮಂಡ ಬೋಪಣ್ಣ, ಕಾರ್ಯದರ್ಶಿ ಚೆಟ್ಟೋಳೀರ ಶರತ್ ಸೋಮಣ್ಣ ಇದ್ದರು. ಕಬ್ಬಚ್ಚೀರ ರಶ್ಮಿ ಕಾರ್ಯಪ್ಪ ಪ್ರಾರ್ಥಿಸಿದರು. ಮಂದೆಯAಡ ವನೀತ್‌ಕುಮಾರ್ ಸ್ವಾಗತಿಸಿದರು. ಬಾಳೆಯಡ ದಿವ್ಯ ಮಂದಪ್ಪ ನಿರೂಪಿಸಿದರು. ಚೆಟ್ಟೋಳೀರ ಶರತ್ ಸೋಮಣ್ಣ ವಂದಿಸಿದರು.