ಗೋಣಿಕೊಪ್ಪಲು, ಅ. ೮: ಕಿರುಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನದ ವಿರುದ್ಧ ಸದಸ್ಯರು ನಡೆಸಿದ ಅವಿಶ್ವಾಸ ಹಿನ್ನಡೆ ಪಡೆದು ಅಧ್ಯಕ್ಷರಾಗಿ ಪುತ್ತಾಮನೆ ಜೀವನ್ ಮುಂದುವರೆದಿದ್ದಾರೆ,

ಗ್ರಾ.ಪಂ. ಅಧ್ಯಕ್ಷರು ಕೆಲವು ಸದಸ್ಯರುಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ, ಗ್ರಾಮದ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿಲ್ಲ ಎಂದು ಆರೋಪಿಸಿ ೭ ಸದಸ್ಯರು ಅವಿಶ್ವಾಸ ನಿರ್ಣಯ ಮಂಡಿಸಲು ಕೋರಿ ಉಪ ವಿಭಾಗಾಧಿಕಾರಿಗಳ ಕಚೇರಿಗೆ ಪತ್ರ ಬರೆದಿದ್ದರು. ಅದರಂತೆ ಈ ಪ್ರಕ್ರಿಯೆ ಯಲ್ಲಿ ಹಿನ್ನಡೆಯಾಗಿ ಅಧ್ಯಕ್ಷ ಸ್ಥಾನವನ್ನು ಜೀವನ್ ಉಳಿಸಿಕೊಂಡಿದ್ದಾರೆ.

ಕಿರುಗೂರು ಗ್ರಾಮ ಪಂಚಾಯಿತಿ ಯಲ್ಲಿ ೧೦ ಸದಸ್ಯರ ಸಂಖ್ಯಾ ಬಲವಿದ್ದು ಈ ಪೈಕಿ ಬಿಜೆಪಿ ಬೆಂಬಲಿತ ೮ ಸದಸ್ಯರು ಆಯ್ಕೆಯಾಗಿದ್ದರು. ಉಳಿದ ೨ ಸದಸ್ಯರು ಇತರ ಪಕ್ಷದ ಬೆಂಬಲಿತರಾಗಿ ಜಯಗಳಿಸಿದ್ದರು.

ಅವಿಶ್ವಾಸ ನಿರ್ಣಯ ಕೈಗೊಳ್ಳಲು ರಾಕೇಶ್ ಅವರ ಬಣ ಮುಂದಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಅವಿಶ್ವಾಸ ಮಂಡಿಸಲು ಬೇಕಾದ ಸಂಖ್ಯಾ ಬಲದಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಜಿಲ್ಲಾ ಉಪವಿಭಾಗಾಧಿಕಾರಿಗಳು ಅವಿಶ್ವಾಸ ನಿಲುವಳಿ ಬಿದ್ದು ಹೋಗಿದೆ ಎಂದು ಘೋಷಿಸಿ ಪ್ರಕ್ರಿಯೆ ಪೂರ್ಣಗೊಳಿಸಿದರು.

ಇದರಿಂದ ಬಹಿರಂಗವಾಗಿಯೇ ೨ ಬಣಗಳ ನಡುವೆ ಅಸಮಾಧಾನ ಕಂಡು ಬಂದಿದೆ. ಪ್ರಸ್ತುತ ಅಧ್ಯಕ್ಷರಾಗಿರುವ ಪುತ್ತಾಮನೆ ಜೀವನ್ ಇನ್ನೂ ೭ ತಿಂಗಳು ಮುಂದುವರೆಯಲಿದ್ದಾರೆ.

ಪಂಚಾಯಿತಿ ಸದಸ್ಯರನ್ನು ವಿಶ್ವಾಸಕ್ಕೆ ಪಡೆದು ಸರ್ಕಾರದಿಂದ ಬರುವ ಅನುದಾನವನ್ನು ಸಮಾನವಾಗಿ ಸದಸ್ಯರಿಗೆ ಹಂಚಿಕೆ ಮಾಡುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಉತ್ತೇಜನ ನೀಡಲಾಗುತ್ತಿದೆ. ಆದರೆ ಕೆಲ ಸದಸ್ಯರು ಆಧಾರ ರಹಿತವಾಗಿ ಆರೋಪ ಮಾಡುತ್ತಿದ್ದಾರೆ. ಪಂಚಾಯಿತಿ ಅಭಿವೃದ್ಧಿಗೆ ಪೂರಕವಾಗಿ ಕೆಲಸ ನಿರ್ವಹಿಸುತ್ತಿರುವೆ. ಸದಸ್ಯರ ವಿಶ್ವಾಸ ಪಡೆದು ಮುಂದೆಯೂ ಪಾರದರ್ಶಕತೆ ಯಿಂದ ಕೆಲಸ ನಿರ್ವಹಿಸುವೆ ಎಂದು ಪುತ್ತಾಮನೆ ಜೀವನ್ ತಿಳಿಸಿದ್ದಾರೆ.