ಸೋಮವಾರಪೇಟೆ, ಅ. ೭: ತಾಲೂಕಿನ ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೂರ್ಲಬ್ಬಿ, ಮಂಕ್ಯ, ಕಿಕ್ಕರಳ್ಳಿ, ಕುಂಬಾರಗಡಿಗೆ ವ್ಯಾಪ್ತಿಯಲ್ಲಿ ವನ್ಯ ಪ್ರಾಣಿಗಳ ಹಾವಳಿ ಮಿತಿಮೀರಿದ್ದು, ಕೃಷಿ ಫಸಲು ನಷ್ಟವಾಗುತ್ತಿದೆ. ಆದರೂ ಅರಣ್ಯ ಇಲಾಖೆ ಯಾವುದೇ ಪರಿಹಾರ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಭಾಗದಲ್ಲಿ ನಿರಂತರವಾಗಿ ಕೃಷಿ ಪ್ರದೇಶಕ್ಕೆ ಲಗ್ಗೆಯಿಡುತ್ತಿರುವ ವನ್ಯಪ್ರಾಣಿಗಳು ಧಾಳಿ ನಡೆಸುತ್ತಿದ್ದು, ರೈತರು ಕೃಷಿಯಿಂದ ಹಿಂದೆ ಸರಿಯುವಂತೆ ಮಾಡಿದೆ.
ಗ್ರಾಮದ ಚಾಮೇರ ಪಳಂಗಪ್ಪ ಅವರಿಗೆ ಸೇರಿದ ಮುಕ್ಕಾಲು ಎಕರೆ ಗದ್ದೆಯಲ್ಲಿ ಬೆಳೆದಿದ್ದ ಭತ್ತದ ಪೈರು, ಗರ್ವಾಲೆ ಗ್ರಾ.ಪಂ. ಅಧ್ಯಕ್ಷ ನಂಜುAಡ ಅವರಿಗೆ ಸೇರಿದ ೧ ಎಕರೆ ಭತ್ತದ ಪೈರನ್ನು ಕಡವೆಗಳು, ಕಾಡು ಕೋಣ, ಕಾಡುಹಂದಿಗಳು ನಾಶಪಡಿಸಿವೆ.
ಕಳೆದ ವರ್ಷವೂ ಸಹ ಕೃಷಿ ಫಸಲು ನಷ್ಟ ಅನುಭವಿಸಿ ದ್ದೆವು. ಈ ವರ್ಷವೂ ಮತ್ತೆ ವನ್ಯಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ಪರಿಹಾರ ನೀಡುವಂತೆ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಆದರೆ ವನ್ಯ ಪ್ರಾಣಿಗಳನ್ನು ಬೇಟೆಯಾಡಿದ್ದಾರೆ ಎಂದು ಆರೋಪಿಸಿ ಅರಣ್ಯ ಇಲಾಖೆ ಹಾಗೂ ವೈಲ್ಡ್ಲೈಫ್ನವರು ಗ್ರಾಮದ ಮನೆಗಳಿಗೆ ಮಧ್ಯರಾತ್ರಿ ಬಂದು ಬಾಗಿಲು ಬಡಿಯುತ್ತಿದ್ದಾರೆ. ಪ್ರಾಣಿಗಳಿಂದ ಫಸಲು ಹಾನಿಯಾದಾಗ ಮಾತ್ರ ಇತ್ತ ಸುಳಿಯುತ್ತಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಪ್ರಸ್ತುತ ೨೫ಕ್ಕೂ ಅಧಿಕ ಕಾಡುಕೋಣಗಳು ಈ ಭಾಗದಲ್ಲಿ ಬೀಡುಬಿಟ್ಟಿದ್ದು, ಯಾವ ಕೃಷಿಯನ್ನೂ ಉಳಿಸುತ್ತಿಲ್ಲ. ವಾರ್ಷಿಕ ಅತೀ ಹೆಚ್ಚು ಮಳೆಯಾಗುವ ಈ ಭಾಗದಲ್ಲಿ ಕೃಷಿ ಕಾರ್ಯಕೈಗೊಳ್ಳುವುದೇ ಸವಾಲಿನ ಕೆಲಸ. ಹಲವಷ್ಟು ಮಂದಿ ಈಗಾಗಲೇ ಕೃಷಿಯಿಂದ ಹಿಂದೆ ಸರಿದಿದ್ದಾರೆ. ಗದ್ದೆಗಳನ್ನು ಪಾಳು ಬಿಡಬಾರದು ಎಂಬ ದೃಷ್ಟಿಯಿಂದ ಕೃಷಿ ಕೈಗೊಂಡರೆ ಕೈಗೆ ಬಂದ ತುತ್ತು ಬಾಯಿಗೆ ಇಲ್ಲದಂತಾಗಿದೆ ಎಂದು ಮಂಕ್ಯ ಗ್ರಾಮದ ಚಾಮೇರ ಪಳಂಗಪ್ಪ ತಿಳಿಸಿದ್ದಾರೆ.
ವನ್ಯಪ್ರಾಣಿ ಹಾವಳಿ ತಡೆಗಟ್ಟಲು ಅರಣ್ಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಕೃಷಿ ಹಾಗೂ ಜನವಸತಿ ಪ್ರದೇಶಕ್ಕೆ ಬಾರದಂತೆ ಪಟಾಕಿ ಸಿಡಿಸಲು ಅವಕಾಶವಿದ್ದರೂ ಅರಣ್ಯ ಇಲಾಖೆ ಪಟಾಕಿ ನೀಡುತ್ತಿಲ್ಲ. ಪರಿಹಾರಕ್ಕೆ ಅರ್ಜಿ ಸಲ್ಲಿಸಿದರೂ ಪರಿಹಾರ ಲಭ್ಯವಾಗುತ್ತಿಲ್ಲ. ಈ ಭಾಗದ ಕೃಷಿಕರ ಗೋಳು ಹೇಳತೀರದ್ದಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಗ್ರಾಮಸ್ಥರೇ ತಮ್ಮ ಕೃಷಿಯನ್ನು ರಕ್ಷಿಸಿಕೊಳ್ಳಲು ಮುಂದಾಗಬೇಕಾಗುತ್ತದೆ. ಸೂರ್ಲಬ್ಬಿ, ಕಿಕ್ಕರಳ್ಳಿ, ಕುಂಬಾರಗಡಿಗೆ, ಮಂಕ್ಯ ವ್ಯಾಪ್ತಿಯ ರೈತರು ಅರಣ್ಯ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪಳಂಗಪ್ಪ ತಿಳಿಸಿದ್ದಾರೆ.