ಪೊನ್ನಂಪೇಟೆ, ಅ.೮: ಪೊನ್ನಂಪೇಟೆ ತಾಲೂಕಿನ ಕಿರುಗೂರು ಗ್ರಾಮದ ಹೊನ್ನಿಕೊಪ್ಪ ಹೊಳೆಕರೆ ಸಮೀಪ ಕೀರೆಹೊಳೆಯಿಂದ ದಡಕ್ಕೆ ಬಂದ ಮೊಸಳೆಯನ್ನು ಸೆರೆ ಹಿಡಿದು ರಕ್ಷಿಸಲಾಯಿತು. ಕಿರುಗೂರು ಗ್ರಾ.ಪಂ.ಸದಸ್ಯ ಚೆಪ್ಪುಡಿರ ರಾಕೇಶ್ ದೇವಯ್ಯ ಮೊಸಳೆ ಕಾಣಿಸಿಕೊಂಡಿರುವ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರವಾಣಿ ಮೂಲಕ ಕರೆಮಾಡಿ ಮಾಹಿತಿ ನೀಡಿದರು. ತಕ್ಷಣ ತಿತಿಮತಿ ವಲಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಸ್ಥಳಕ್ಕೆ ಬಂದು ಮೊಸಳೆಯನ್ನು ಹಿಡಿದು ಗ್ರಾಮಸ್ಥರ ಆತಂಕ ನಿವಾರಿಸಿದರು. ಸೆರೆಹಿಡಿದ ಮೊಸಳೆಯನ್ನು ನಾಗರಹೊಳೆ ಅಭಯಾರಣ್ಯದಲ್ಲಿರುವ ಕೆರೆಯೊಂದರಲ್ಲಿ ಬಿಡಲಾಯಿತು.

ಎಸಿಎಫ್ ನೆಹರು ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಓ ಹಾಲೇಶ್, ಅರಣ್ಯ ರಕ್ಷಕ ರೇವಪ್ಪ, ಚಾಲಕರಾದ ಉಮೇಶ್, ರಮೇಶ್ ಹಾಗೂ ತಿತಿಮತಿ ಆರ್‌ಆರ್‌ಟಿ ಸಿಬ್ಬಂದಿಗಳು ಭಾಗವಹಿಸಿದ್ದರು.

-ಚನ್ನನಾಯಕ