ಕಣಿವೆ/ಕೂಡಿಗೆ, ಅ. ೮ : ಕೊಡಗು ಜಿಲ್ಲೆಯಲ್ಲಿ ಹಾಲಿ ಕಾರ್ಯನಿರ್ವಹಿಸುತ್ತಿದ್ದ ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರದೊಂದಿಗೆ ಇದೀಗ ಹೊಸದಾಗಿ ಹಾರಂಗಿಯಲ್ಲಿ ಮತ್ತೊಂದು ಸಾಕಾನೆ ಶಿಬಿರವನ್ನು ಪ್ರಾರಂಭಿಸಲಾಗಿದ್ದು ಜಿಲ್ಲೆಯ ಮೂರನೆಯ ಸಾಕಾನೆ ಶಿಬಿರದ ಉದ್ಘಾಟನೆ ಇಂದು ನೆರವೇರಿತು. ದುಬಾರೆ ಹಾಗೂ ಮತ್ತಿಗೋಡು ಸಾಕಾನೆ ಶಿಬಿರಗಳು ಸಾಕಷ್ಟು ಹೆಸರು ಮಾಡಿದ್ದು ಈ ಶಿಬಿರಗಳಿಂದ ದಸರಾ ಉತ್ಸವ ಸೇರಿದಂತೆ ಹಲವೆಡೆಗೆ ಹಾಗೂ ಅಗತ್ಯ ಸಂದರ್ಭದ ವಿವಿಧ ಕಾರ್ಯಾಚರಣೆಗಳಿಗಾಗಿ ಇಲ್ಲಿನ ಸಾಕಾನೆಗಳು ತೆರಳುತ್ತಿದ್ದವು. ಅಲ್ಲದೆ ಈ ಶಿಬಿರಗಳು ಅಪಾರ ಪ್ರವಾಸಿಗರನ್ನು ಕೂಡ ತನ್ನತ್ತ ಸೆಳೆಯುತ್ತಿದ್ದವು. ಇದೀಗ ಕೊಡಗಿನಲ್ಲಿ ಹಾರಂಗಿ ವ್ಯಾಪ್ತಿಯಲ್ಲಿ ಮತ್ತೊಂದು ಸಾಕಾನೆ ಶಿಬಿರ ಪ್ರಾರಂಭಗೊAಡಿರುವುದು ಇನ್ನಷ್ಟು ಹುರುಪು ಮೂಡಿಸಲಿದೆ. ದುಬಾರೆ ಶಿಬಿರದಲ್ಲಿನ ಒತ್ತಡ ನಿವಾರಿಸಲು ಹೊಸದಾಗಿ ಹಾರಂಗಿಯಲ್ಲಿ ಶಿಬಿರ ಪ್ರಾರಂಭಿಸಲಾಗಿದೆ.

ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ಹಾರಂಗಿ ಜಲಾಶಯದ ಬಲದಂಡೆಯ ಮೇಲಿನ ಸುಮಾರು ೪೦ ಎಕರೆ ವಿಶಾಲ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಿರುವ ವೃಕ್ಷೋದ್ಯಾನ ಹಾಗೂ

(ಮೊದಲ ಪುಟದಿಂದ) ನೂತನ ಸಾಕಾನೆಗಳ ಶಿಬಿರವನ್ನು ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಶನಿವಾರ ಲೋಕಾರ್ಪಣೆ ಗೊಳಿಸಿದರು.

ಬಳಿಕ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹಾರಂಗಿಯಲ್ಲಿ ಸಾಕಾನೆ ಶಿಬಿರ ಆರಂಭಿಸಲಾಗಿದೆ. ಹಸಿರಿದ್ದರೆ ಮಾತ್ರ ಉಸಿರು. ಹಾಗಾಗಿ ಅರಣ್ಯ ಇಲಾಖೆ ಎಲ್ಲೆಡೆಗಳಲ್ಲಿ ಟ್ರೀ ಪಾರ್ಕ್ ಮಾಡುತ್ತಿದೆ. ದೇವರ ಕಾಡುಗಳು ಪರಿಸರದ ಸಂವರ್ಧನಾ ಕೇಂದ್ರವಾಗಿವೆ. ಪರಿಸರಕ್ಕೆ ಪೂರಕವಾದ ಪ್ರವಾಸೋದ್ಯಮದ ಚಟುವಟಿಕೆಗಳು ಆಗಬೇಕಿದೆ. ಆನೆ ಸಫಾರಿ ಹಾಗೂ ಇತರೇ ಚಟುವಟಿಕೆಗಳನ್ನು ಹಂತ ಹಂತವಾಗಿ ತೆರೆಯಲಾಗುವುದು ಎಂದರು.

ಡಿಎಫ್‌ಓ ಎ.ಟಿ. ಪೂವಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ವೃಕ್ಷೋದ್ಯಾನವನ್ನು ಕಳೆದ ೨೦೧೫ ರಿಂದ ಹಾರಂಗಿಯಲ್ಲಿ ಆರಂಭಿಸಲಾಗಿತ್ತು. ತೋಟಗಾರಿಕಾ ಇಲಾಖೆಯಿಂದ ೪೦ ಎಕರೆ ಜಾಗವನ್ನು ಪಡೆದು ಶಿಬಿರ ಮಾಡಲಾಗುತ್ತಿದೆ. ಸಾಕಾನೆ ಶಿಬಿರದಲ್ಲಿ ೧೫ ಕ್ಕಿಂತ ಹೆಚ್ಚು ಸಾಕಾನೆಗಳು ಇರಬಾರದು ಎಂಬ ನಿಯಮ ಇದ್ದುದರಿಂದ ದುಬಾರೆಯಿಂದ ಹಾರಂಗಿಗೆ ೮ ರಿಂದ ೧೦ ಸಾಕಾನೆಗಳನ್ನು ಸ್ಥಳಾಂತರಿಸಲಾಗುತ್ತಿದೆ. ಹಾರಂಗಿಯಲ್ಲಿ ಕ್ರಮೇಣ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಎಸಿಎಫ್ ಗೋಪಾಲ್, ವಲಯ ಅರಣ್ಯಾಧಿಕಾರಿಗಳಾದ ಕುಶಾಲನಗರದ ಶಿವರಾಂ, ಶನಿವಾರಸಂತೆಯ ಪ್ರಫುಲ್ ಶೆಟ್ಟಿ, ಸೋಮವಾರಪೇಟೆಯ ಹೆಚ್.ಪಿ.ಚೇತನ್, ಕುಶಾಲನಗರ ಡಿವೈಎಸ್ಪಿ ಗಂಗಾಧರಪ್ಪ, ವೃತ್ತ ನಿರೀಕ್ಷಕ ಬಿ.ಜಿ.ಮಹೇಶ್, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಇಂದಿರಾ, ಉಪಾಧ್ಯಕ್ಷ ಭಾಸ್ಕರ ನಾಯಕ್, ಕುಶಾಲನಗರ ಪಟ್ಟಣ ಪಂಚಾಯಿತಿ ಅಧ್ಯಕ್ಷ ಜಯವರ್ಧನ, ಬಸವನಹಳ್ಳಿ ಲ್ಯಾಂಪ್ಸ್ ಅಧ್ಯಕ್ಷ ಆರ್.ಕೆ.ಚಂದ್ರು, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾಧ್ಯಕ್ಷ ಟಿ.ಜಿ.ಪ್ರೇಮಕುಮಾರ ಮತ್ತಿತರರು ಇದ್ದರು.

ಶಿಬಿರದಲ್ಲಿನ ಸಾಕಾನೆಗಳು

ನೂತನ ಸಾಕಾನೆ ಶಿಬಿರದಲ್ಲಿ ದುಬಾರೆಯಿಂದ ಹಾರಂಗಿಗೆ ಸ್ಥಳಾಂತರಗೊAಡ ಏಕದಂತ (೫೨) ವಿಜಯ (೪೮) ರಾಮ (೬೮) ಮಾರುತಿ (೨೧) ಸುಬ್ರಮಣ್ಯ (೩೫) ವಿಕ್ರಮ (೫೮) ಎಂಬ ಆರು ಸಾಕಾನೆಗಳಿವೆ.

ಶಿಬಿರದ ಆರಂಭದ ದಿನದಂದು ವಿಕ್ರಮನನ್ನು ಹೊರತು ಪಡಿಸಿ ಉಳಿದ ಸಾಕಾನೆಗಳಿಂದ ಆನೆಗಳ ಮಾವುತರು ಹಾಗೂ ಕಾವಾಡಿಗಳು ಚಟುವಟಿಕೆಗಳನ್ನು ಮಾಡಿಸಿದರು. ವಿದ್ಯಾರ್ಥಿನಿ ಸಂವೇದಿತಾ ತಂಡ ಪರಿಸರ ಗೀತೆ ಹಾಡಿದರು.

ಆನೆಕಾಡು ಅರಣ್ಯ ನಾಟಾ ಸಂಗ್ರಹಾಲಯದ ಅರಣ್ಯಾಧಿಕಾರಿ ಪೂಜಾಶ್ರೀ ನಿರೂಪಿಸಿದರು. ಸೋಮವಾರಪೇಟೆ ತಾಲೂಕು ಎಸಿಎಫ್ ಎ.ಎ. ಗೋಪಾಲ್ ಸ್ವಾಗತಿಸಿದರು. ಕುಶಾಲನಗರ ಆರ್‌ಎಫ್‌ಒ ಶಿವರಾಂ ವಂದಿಸಿದರು.

ಕಾರ್ಯಕ್ರಮಕ್ಕೂ ಮುನ್ನಾ ಶಾಸಕ ರಂಜನ್ ಹಾಗೂ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ್ ಅವರು ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಶಿಬಿರದ ಆವರಣದಲ್ಲಿ ಗಿಡಗಳನ್ನು ನೆಟ್ಟರು.

(ಕೆ.ಎಸ್. ಮೂರ್ತಿ / ನಾಗರಾಜಶೆಟ್ಟಿ)