*ಗೋಣಿಕೊಪ್ಪ, ಅ. ೮: ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸಿ ನಂಬಿಕೆ ಉಳಿಸಿ ಕೊಳ್ಳಬೇಕು ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಚೆಪ್ಪುಡೀರ ಎಂ. ಪೂಣಚ್ಚ ಸಲಹೆ ನೀಡಿದರು.

ಇತ್ತೀಚೆಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಚೆಪ್ಪುಡೀರ ಐನ್‌ಮನೆ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಕೊಡವ ಜನಾಂಗಕ್ಕೆ ಬೇರೆ, ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಅವಕಾಶಗಳು ದೊರೆಯುತ್ತಿವೆ. ಶಿಸ್ತು, ನಂಬಿಕೆಯ ಸಾಮರ್ಥ್ಯ ಅರಿತು ದೊರೆಯುವ ಜವಬ್ದಾರಿಯನ್ನು ನಿಭಾಯಿಸುವ ಮೂಲಕ ಸಮಾಜಕ್ಕೆ ಕೊಡುಗೆ ನೀಡಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಗಮನ ಹರಿಸಬೇಕಿದೆ ಎಂದು ಸಲಹೆ ನೀಡಿದರು. ಕುಟುಂಬದಲ್ಲಿ ದೊರೆಯುವ ಪ್ರೋತ್ಸಾಹ, ಸನ್ಮಾನಗಳು ಹೆಚ್ಚು ಸಾಧನೆಗೆ ಪೂರಕವಾಗುತ್ತದೆ. ಅಪ್ರತಿಮ ಸಾಧನೆ ಹಿಂದೆ ಗುರು ಕಾರೊಣ, ಊರಿನ ದೇವರುಗಳ ಆಶೀರ್ವಾದ, ಜನರ ಪ್ರಾರ್ಥನೆ ಕೂಡ ಮುಖ್ಯವಾಗುತ್ತದೆ. ಆದ್ದರಿಂದ ಸ್ಥಳೀಯವಾಗಿ ಪಾಲ್ಗೊಳ್ಳುವುದು ಕೂಡ ಮುಖ್ಯ ಎಂದು ಅವರು ಹೇಳಿದರು.

ಹಿರಿಯರಾದ ಡಾ. ಸಿ.ಜಿ. ಕುಶಾಲಪ್ಪ ನ್ಯಾಯಮೂರ್ತಿ ಚೆಪ್ಪುಡೀರ ಎಂ. ಪೂಣಚ್ಚ ಅವರ ಸಾಧನೆಯ ಪರಿಚಯ ಮಾಡಿಕೊಟ್ಟರು. ೨೦ ವರ್ಷಗಳ ಅವಧಿಯಲ್ಲಿ ವಿವಿಧ ಶ್ರೇಣಿಯ ನ್ಯಾಯಾಲಯಗಳಾದ ಟ್ರಿಬ್ಯುನಲ್, ಕಮಿಷನ್ಸ್, ಹೈಕೋರ್ಟ್, ಸುಪ್ರಿಂ ಕೋರ್ಟ್ನಲ್ಲಿ ಕಲಿತ ಅಭ್ಯಾಸದಿಂದ ದೊಡ್ಡ ಹುದ್ದೆ ಅಲಂಕರಿಸುವAತಾಗಿದೆ. ಖಾಸಗಿ ಅಂತಾರಾಷ್ಟಿçÃಯ ಕಾನೂನು ಕೂಡ ಕಲಿತಿರುವುದು ನಮ್ಮ ಕುಟುಂಬಕ್ಕೆ ಹೆಮ್ಮೆ. ಸುಪ್ರೀಂಕೋರ್ಟ್ ನ್ಯಾಯ ಮೂರ್ತಿಯಾಗಿ ಬರಲಿ ಎಂದು ಶುಭ ಹಾರೈಸಿದರು.

ಚೆಪ್ಪುಡೀರ ಕುಟುಂಬದ ದಿವಾನ್ ಪೊನ್ನಪ್ಪ ಅವರ ಭಾವಚಿತ್ರವಿರುವ ಬೆಳ್ಳಿಯ ನೆನಪಿನ ಕಾಣಿಕೆ ನೀಡಲಾಯಿತು. ಚೆಪ್ಪುಡೀರ ಕುಟುಂಬ ಅಧ್ಯಕ್ಷ ಚೆಪ್ಪುಡೀರ ಸುಭಾಷ್ ಮುತ್ತಣ್ಣ, ಪಟ್ಟೆದಾರ ಚೆಪ್ಪುಡೀರ ಬಬ್ಬು ಕಾರ್ಯಪ್ಪ ಪ್ರಶಂಸೆ ವ್ಯಕ್ತಪಡಿಸಿದರು. ಕುಟುಂಬದ ಸದಸ್ಯರು ಶುಭ ಕೋರಿದರು.

ಚೆಪ್ಪುಡೀರ ಪ್ರಮುಖ್ ಪ್ರಾರ್ಥಿಸಿದರು. ಚೆಪ್ಪುಡೀರ ಕಾರ್ಯಪ್ಪ ನಿರೂಪಿಸಿದರು. ಚೆಪ್ಪುಡೀರ ರಾಮಕೃಷ್ಣ ವಂದಿಸಿದರು.

ನ್ಯಾಯಮೂರ್ತಿ ಚೆಪ್ಪುಡೀರ ಎಂ. ಪೂಣಚ್ಚ ಅವರ ತಾಯಿ ಶೈಲಾ ಮೊಣ್ಣಪ್ಪ, ಪತ್ನಿ ಸವಿತಾ ಪೂಣಚ್ಚ ಇದ್ದರು.

-ಎನ್.ಎನ್. ದಿನೇಶ್