ಕುಶಾಲನಗರ, ಅ. ೭: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಯನ್ನು ದಿಢೀರ್ ವರ್ಗಾವಣೆಗೊಳಿಸಿ ಕರ್ತವ್ಯ ಲೋಪ ಆರೋಪ ಹೊಂದಿರುವ ಅಧಿಕಾರಿ ಒಬ್ಬರನ್ನು ನಿಯೋಜಿಸಿರುವ ಕ್ರಮವನ್ನು ಖಂಡಿಸಿ ಕುಶಾಲನಗರ ಪ್ರಜ್ಞಾವಂತರ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಕುಶಾಲನಗರ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗ ವೇದಿಕೆಯ ಅಧ್ಯಕ್ಷ ವಿ.ಪಿ. ಶಶಿಧರ್ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಕ್ಷೇತ್ರ ಶಾಸಕರ ಜನವಿರೋಧಿ ನೀತಿಗಳ ಬಗ್ಗೆ ಘೋಷಣೆ ಕೂಗಿದರು. ಪಟ್ಟಣದ ಆಸ್ತಿ ಪಾಸ್ತಿಗಳ ಸಂರಕ್ಷಣೆ ಮಾಡುವ ಬಗ್ಗೆ ಕಾಳಜಿ ಇಲ್ಲದ ಶಾಸಕರ ಕ್ರಮಗಳ ಬಗ್ಗೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭ ಪ್ರಮುಖರಾದ ಹೆಚ್.ಎಸ್. ಅಶೋಕ್, ಪಂಚಾಯಿತಿ ಸದಸ್ಯರಾದ ಪ್ರಮೋದ್ ಮುತ್ತಪ್ಪ, ವಿ.ಎಸ್. ಆನಂದ್‌ಕುಮಾರ್, ಎಂ.ಕೆ. ದಿನೇಶ್, ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಕೆ.ಬಿ. ರಾಜು, ರಾಯ್ ಡೇವಿಡ್ ಮತ್ತಿತರರು ಇದ್ದರು.

ರಂಜನ್ ಪಾತ್ರ ಇಲ್ಲ : ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮತ್ತು ಕುಡಾ ಸದಸ್ಯ ಕಾರ್ಯದರ್ಶಿಗಳ ವರ್ಗಾವಣೆ ಮಾಡುವಲ್ಲಿ ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಹಸ್ತಕ್ಷೇಪ ಇರುವುದಿಲ್ಲ ಎಂದು ಕುಶಾಲನಗರ ಯೋಜನಾ ಪ್ರಾಧಿಕಾರದ ಎಂ.ಎA. ಚರಣ್ ಸ್ಪಷ್ಟ ಪಡಿಸಿದ್ದಾರೆ. ಅವರು, ಕುಶಾಲನಗರ ಪಟ್ಟಣ ಪಂಚಾಯಿತಿ ಮುಂಭಾಗ ನಡೆದ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿ ಅಧಿಕಾರಿಗಳು ಸರ್ಕಾರಿ ನಿಯಮದಂತೆ ವರ್ಗಾವಣೆ ಆಗುತ್ತಿದ್ದಾರೆ ಹೊರತು ಇದರಲ್ಲಿ ಯಾವುದೇ ಜನಪ್ರತಿನಿಧಿಗಳ ಕೈವಾಡವಿಲ್ಲ ಎಂದು ಹೇಳಿದ್ದಾರೆ.

ಯಾವುದೇ ಅಧಿಕಾರಿಗಳು ನಿಯೋಜನೆಗೊಂಡರೂ, ಅವರ ಮೂಲಕ ಉತ್ತಮ ಸೇವೆ ಪಡೆಯುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಹೊರತು ಜನರಲ್ಲಿ ಅನಾವಶ್ಯಕ ಗೊಂದಲ ಮೂಡಿಸುವುದು ಸರಿಯಲ್ಲ ಎಂದಿದ್ದಾರೆ. ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಜನಪರ ಕೆಲಸದಲ್ಲಿ ತೊಡಗಿದ್ದು, ಅವರ ಮೇಲೆ ಅನಾವಶ್ಯಕ ಆರೋಪ ಹೊರಿಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ವಿ.ಪಿ. ಶಶಿಧರ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ನಿರ್ದಿಷ್ಟ ನೆಲೆ ಇಲ್ಲದ ಹಿನ್ನೆಲೆಯಲ್ಲಿ ವೇದಿಕೆಗಳ ಹೆಸರಿನಲ್ಲಿ ಪ್ರತಿಭಟನೆ ಮಾಡುವ ಮೂಲಕ ಜನರ ಹಾದಿ ತಪ್ಪಿಸುತ್ತಿದ್ದಾರೆ ಎಂದು ಚರಣ್ ಹೇಳಿದರು.