ಮಡಿಕೇರಿ, ಅ. ೬: ಮನುಷ್ಯ ಮನುಷ್ಯರ ನಡುವಿನ ದ್ವೇಷ ನಿಲ್ಲಿಸಿ ಪ್ರೀತಿಯಿಂದ ಜೀವನ ನಡೆಸೋಣ ಎಂದು ಶಕ್ತಿ ದಿನಪತ್ರಿಕೆ ಪ್ರಧಾನ ಸಂಪಾದಕ ಜಿ. ರಾಜೇಂದ್ರ ನಾಡಿನ ಜನತೆಗೆ ಕರೆಕೊಟ್ಟರು.
ಮಡಿಕೇರಿ ನಗರ ದಸರಾ ಸಮಿತಿ, ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಗರದ ಗಾಂಧಿ ಮೈದಾನದಲ್ಲಿನ ಕಲಾಸಂಭ್ರಮ ವೇದಿಕೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನವರಾತ್ರಿ ಆಚರಣೆ, ವಿಜಯದಶಮಿಯ ಮಹತ್ವವನ್ನು ಅರುಹಿ, ನಮ್ಮಲ್ಲಿರುವ ರಾಗದ್ವೇಶಗಳನ್ನು ದೂರಮಾಡಿ ಅರಿಷಡ್ವರ್ಗಗಳನ್ನು ದಹನ ಮಾಡುವ ಕಾರ್ಯಕ್ಕೆ ಮಹತ್ವ ನೀಡಬೇಕು. ನಾವೆಲ್ಲರೂ ಇಂದಿಲ್ಲಿ ಬಂಧುತ್ವದಲ್ಲಿ, ಪ್ರೀತಿಯಿಂದ ಸೇರಿದ್ದೇವೆ. ನಮಗೆ ಉಗ್ರಗಾಮಿತ್ವ ಬೇಡ, ಪ್ರೀತಿಗಾಮಿತ್ವ ಬೇಕಿದೆ ಎಂದು ಅಭಿಪ್ರಾಯಪಟ್ಟರು.
ನಗರ ಸಭಾ ಆಯುಕ್ತ ವಿಜಯ ಮಾತನಾಡಿ, ನವರಾತ್ರಿಯ ಈ ದಿನಗಳು ಶುದ್ಧ-ಪರಿಶುದ್ಧವಾದ ದಿನಗಳು, ನವರಾತ್ರಿ ಆಚರಣೆಯಿಂದ ಕಷ್ಟ ಕಾರ್ಪಣ್ಯ ಕಳೆದು, ಕತ್ತಲು ಹೋಗಲಾಡಿಸಿ ಜೀವನದಲ್ಲಿ ಬೆಳಕು ಕಾಣುವಂತಾಗಲಿ ಎಂದು ಹೇಳಿದರು.
ಸಾಂಸ್ಕೃತಿಕ ಸಮಿತಿ ಗೌರವ ಸಲಹೆಗಾರ ಅನಿಲ್ ಎಚ್.ಟಿ. ಮಾತನಾಡಿ ನವರಾತ್ರಿಯ ಪ್ರತಿದಿನ ಹೆಚ್ಚಿನ ಸಂಖ್ಯೆಯಲ್ಲಿ ಕಲಾಪ್ರೇಮಿಗಳು ಆಗಮಿಸಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿಸಿದ್ದಾರೆ. ಕಾರ್ಯಕ್ರಮಕ್ಕೆ ಅವಕಾಶ ಕೋರಿ ರಾಜ್ಯದ ವಿವಿಧ ಭಾಗಗಳಿಂದ ೨೨೦ಅರ್ಜಿಗಳು ಬಂದಿದ್ದವು. ಈ ಪೈಕಿ ೪೨ ತಂಡಗಳನ್ನು ಆಯ್ಕೆ ಮಾಡಿ ಅವಕಾಶ ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಕಾರ್ಯಾಧ್ಯಕ್ಷ ಕೆ.ಎಸ್. ರಮೇಶ್, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಹರೀಶ್ ಅಣ್ವೇಕರ್, ಪುರಸಭಾ ಮಾಜಿ ಸದಸ್ಯ ಬಿ.ಎಂ. ಯಲ್ಲಪ್ಪ ಇದ್ದರು. ಅನೂಹ್ಯ ತಂಡದವರು ಪ್ರಾರ್ಥಿಸಿದರೆ, ಬಿ.ಕೆ. ಅರುಣ್‌ಕುಮಾರ್ ನಿರೂಪಿಸಿದರು. ಮಹೇಶ್ ಜೈನಿ ಸ್ವಾಗತಿಸಿದರೆ, ಸತೀಶ್‌ಕುಮಾರ್ ವಂದಿಸಿದರು.
ನAತರ ಸುಬ್ರಹ್ಮಣ್ಯದ ಮುದ್ರಾ ಸ್ಕೂಲ್ ಆಫ್ ಡ್ಯಾನ್ಸ್ ತಂಡದಿAದ ನೃತ್ಯ ವೈಭವ, ಯುವ ಗಾಯಕ ಶರಣ್ ಅಯ್ಯಪ್ಪ, ವೈಷ್ಣವಿ ಅವರಿಂದ ಸಂಗೀತ ಮಂಜರಿ, ಅನ್ವಿತ್‌ಕುಮಾರ್ ತಂಡದಿAದ ಗೀತ ಗಾಯನ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ವಿಜೇತ ರಾಹುಲ್ ತಂಡದವರಿAದ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು. ನಂತರ ಚೈತ್ರ ತಂಡದಿAದ ಸಂಗೀತ ರಸಮಂಜರಿ ಕಾರ್ಯಕ್ರಮಗಳು ಮೂಡಿಬಂದವು.