ಮಡಿಕೇರಿ, ಅ. ೭: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕೊಡಗಿನಲ್ಲಿ ನಡೆದಿದ್ದ ಹೋರಾಟ ಕಡಿಮೆಯೇನಲ್ಲ. ಇಂಥದ್ದೇ ಅಭಿಯಾನ ಇತ್ತೀಚೆಗೆ ಉತ್ತರ ಕನ್ನಡ ಜಿಲ್ಲೆಯಲ್ಲೂ ನಡೆದಿತ್ತು.
ಅಲ್ಲಿಯವರು ಬೇಡಿಕೆ ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲಿ ಸಾಧ್ಯವಾಗಿದ್ದು ಇಲ್ಲಿ ಯಾಕೆ ಕೈಗೂಡಲಿಲ್ಲ ಎನ್ನುವ ಪ್ರಶ್ನೆ ಸ್ಥಳೀಯರನ್ನು ಕಾಡುತ್ತಿದೆ.
ಪುಟ್ಟ ಜಿಲ್ಲೆ ಕೊಡಗಿನಲ್ಲಿ ೨೦೧೧ರ ಜನಗಣತಿ ಪ್ರಕಾರ ೫.೫ ಲಕ್ಷದಷ್ಟು ಜನಸಂಖ್ಯೆ ಇದೆ. ಈಗ ಈ ಪ್ರಮಾಣ ಸುಮಾರು ೭-೮ ಲಕ್ಷ ತಲುಪಿರಬಹುದು. ಪ್ರವಾಸಿಗರ ‘ಫ್ಲೋಟಿಂಗ್ ಪಾಪ್ಯುಲೇಷನ್’ ಕೂಡ ಹೆಚ್ಚಾಗಿದೆ. ಆದರೆ ಎಲ್ಲಾ ಬಗೆಯ ಆರೋಗ್ಯ ತೊಂದರೆಗಳಿಗೆ ಗರಿಷ್ಠ ಪ್ರಮಾಣದಲ್ಲಿ ಸೂಕ್ತ ಚಿಕಿತ್ಸೆ ಕೊಡುವ ಆಸ್ಪತ್ರೆ ಜಿಲ್ಲೆಯಲ್ಲಿ ಇಲ್ಲ. ಅದರಲ್ಲೂ ತೀವ್ರ ಹೃದಯಾಘಾತ, ರಸ್ತೆ ಅಪಘಾತದಂತಹ ತುರ್ತು ಇರುವಾಗ ದೂರದ ಮೈಸೂರು, ಬೆಂಗಳೂರು ಅಥವಾ ಮಂಗಳೂರಿಗೆ ತೆರಳಬೇಕಾಗಿದೆ. ಇಂತಹ ಸಂದರ್ಭದಲ್ಲಿ ಚಿಕಿತ್ಸೆಯಲ್ಲಾದ ವಿಳಂಬದಿAದ ಸಾವನ್ನಪ್ಪಿದವರ ದೊಡ್ಡ ಪಟ್ಟಿಯೇ ಕೊಡಗಿನಲ್ಲಿ ಸಿಗುತ್ತದೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಹಿಂದಿನಿAದಲೂ ಇದೆ. ಈ ಸಂಬAಧ ದೊಡ್ಡ ಮಟ್ಟದಲ್ಲಿ ಅಭಿಯಾನವೂ ನಡೆದಿತ್ತು. ದೇಶ, ವಿದೇಶದಲ್ಲಿರುವ ಕೊಡಗು ಮೂಲದವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದರು. ಸಿನಿಮಾ ನಟರು, ಕ್ರೀಡಾಪಟುಗಳೂ ಕೊಡಗಿನವರ ಬೇಡಿಕೆಗೆ ಒತ್ತಾಸೆ ಯಾಗಿ ನಿಂತಿದ್ದರು. ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಇದೊಂದು ದೊಡ್ಡ ಟ್ರೆಂಡ್ ಸೃಷ್ಟಿಸಿತ್ತು. ಇಷ್ಟಾದರೂ ಈ ವಿಷಯ ಸರಕಾರದ ಗಮನಕ್ಕೆ ಬಂದಿಲ್ಲ ಎನ್ನುವ ಉತ್ತರ ಸದನದಲ್ಲಿ ಅಂದಿನ ಆರೋಗ್ಯ ಸಚಿವ ಬಿ. ಶ್ರೀರಾಮುಲು ಕೊಟ್ಟಿದ್ದರು.
ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳೆದ ತಿಂಗಳು ಇಂತಹದ್ದೇ ಅಭಿಯಾನ ನಡೆದಿತ್ತು. ಸರಕಾರವೂ ಆರಂಭದಲ್ಲಿ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ವಿಷಯ ನಿರ್ಲಕ್ಷಿಸಿತ್ತು.
ಆದರೆ ಅಲ್ಲಿಯ ಜನಪ್ರತಿನಿಧಿಗಳ ಇಚ್ಛಾಶಕ್ತಿ ಮತ್ತು ಲಾಬಿ ಮುಂದೆ ತಲೆ ಬಾಗಿದ ಸರಕಾರ ‘ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ’ ಆರಂಭಕ್ಕೆ ಮುಂದಾಗಿದೆ. ಆಸ್ಪತ್ರೆಗಾಗಿ ಜಾಗ ಹುಡುಕಾಟವೂ ಪ್ರಗತಿಯಲ್ಲಿದೆ. ಆದರೆ ಕೊಡಗಿನ ಕೂಗು ಇನ್ನೂ ಗಡಿ ದಾಟಿ ವಿಧಾನಸೌಧ ತಲುಪಲೇ ಇಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
-ಸುನಿಲ್ ಪೊನ್ನೇಟಿ