ಸಿದ್ದಾಪುರ, ಅ. ೭: ಸಿಐಟಿಯು ಸಂಘಟನೆಯ ಕೊಡಗು ಜಿಲ್ಲಾ ಸಮ್ಮೇಳನವು ತಾ.೯ ಹಾಗೂ ೧೦ ರಂದು ನೆಲ್ಯಹುದಿಕೇರಿ ಗ್ರಾಮದ ಸೂರ್ಯ ನಾರಾಯಣರಾವ್ ನಗರದಲ್ಲಿ ನಡೆಯಲಿದೆ ಎಂದು ಸಿಐಟಿಯು ಸಂಘಟನೆಯ ಮುಖಂಡರಾದ ಎ.ಸಿ ಸಾಬು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿದ ಅವರು ಸಿಐಟಿಯು ಸಂಘಟನೆಯ ೧೭ನೆಯ ಅಖಿಲ ಭಾರತ ಸಮ್ಮೇಳನ ಜ.೧೮, ೨೦೨೩ ರಂದು ೪ ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ. ಅಖಿಲ ಭಾರತ ಸಮ್ಮೇಳನದ ಮುಂಚಿತವಾಗಿ ರಾಜ್ಯ ಸಮ್ಮೇಳನ ಉಡುಪಿ ಜಿಲ್ಲೆಯ ಕುಂದಾಪುದಲ್ಲಿ ನವೆಂಬರ್ ತಿಂಗಳಿನಲ್ಲಿ ನಡೆಯಲಿದೆ ಎಂದರು. ರಾಜ್ಯ ಸಮ್ಮೇಳನಕ್ಕೆ ಪೂರಕವಾಗಿ ತಾಲೂಕು ಸಮ್ಮೇಳನಗಳು, ಜಿಲ್ಲಾ ಸಮ್ಮೇಳನಗಳು ನಡೆಯಬೇಕಾಗಿರುವುದರಿಂದ ಈಗಾಗಲೇ ತಾಲೂಕು ಸಮ್ಮೇಳನಗಳು ಮುಕ್ತಾಯದ ಹಂತದಲ್ಲಿದೆ ಎಂದರು.

ಅ.೯ ಹಾಗೂ ೧೦ ರಂದು ಕೊಡಗು ಜಿಲ್ಲಾ ಸಮ್ಮೇಳನವು ಕುಶಾಲನಗರ ತಾಲೂಕಿನ ನೆಲ್ಯಹುದಿಕೇರಿ ಗ್ರಾಮದ ಡಾ. ಐ.ಆರ್ ಅಸ್ರಣ್ಣ ಅವರ ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ಈ ಸಮ್ಮೇಳನಕ್ಕೆ ಸಿಐಟಿಯು ಸಂಘಟನೆಯ ರಾಜ್ಯ ಉಪಾಧ್ಯಕ್ಷರಾದ ಧರ್ಮೇಶ್ ಹಾಗೂ ಹಿರಿಯ ವಕೀಲರಾದ ಕೆ.ಆರ್ ವಿದ್ಯಾಧರ್, ರೈತ ಮುಖಂಡ ನೆರವೆಂಡ ಉಮೇಶ್, ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷರಾದ ಎ.ಮಹದೇವ, ಪ್ರಧಾನ ಕಾರ್ಯದರ್ಶಿ ಎ.ಸಿ ಸಾಬು ಭಾಗವಹಿಸಲಿದ್ದಾರೆ. ಸಮ್ಮೇಳನವನ್ನು ಕಾರ್ಮಿಕ ಮುಖಂಡರಾದ ನಾಪಂಡ ಮುತ್ತಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಸಂಘಟನೆಯ ಉಪಾಧ್ಯಕ್ಷ ಪಿ.ಆರ್ ಭರತ್, ಖಜಾಂಚಿ ಹೆಚ್.ಬಿ ರಮೇಶ್ ಹಾಜರಿದ್ದರು.