ಕಣಿವೆ, ಅ. ೭: ಕುಶಾಲನಗರ ತಾಲೂಕಿನ ಕೂಡಿಗೆ ಬಳಿಯ ಚಿಕ್ಕತ್ತೂರಿನಲ್ಲಿರುವ ಶ್ರೀ ಕೃಷ್ಣ ಗೋ ಶಾಲೆ ನಿರ್ವಹಣೆ ಸಮಸ್ಯೆಯಿಂದಾಗಿ ಮುಚ್ಚುವ ಸ್ಥಿತಿಯಲ್ಲಿದೆ. ಈ ಗೋಶಾಲೆಯಲ್ಲಿ ಪ್ರಸಕ್ತ ೩೯ ಗೋವುಗಳಿದ್ದು ಅವುಗಳಿಗೆ ಆಹಾರದ ಸಮಸ್ಯೆ ತಲೆದೋರಿದೆ.
ಈ ಕೇಂದ್ರವನ್ನು ಬಹಳಷ್ಟು ಮಹತ್ವಾಕಾಂಕ್ಷೆಯಿAದ ಆರಂಭಿಸಲಾಗಿತ್ತು. ಅಂದರೆ ಮುಗ್ಧ ಗೋವುಗಳು ಕಟುಕರ ಪಾಲಾಗುತ್ತಿದ್ದ ಸಂದರ್ಭದಲ್ಲಿ ಅವುಗಳ ರಕ್ಷಣೆಯ ಹಿತದೃಷ್ಟಿಯಿಂದ ಈ ಕೇಂದ್ರವನ್ನು ಆರಂಭಿಸಲಾಗಿದೆ.
ಈ ಮಧ್ಯೆ ಕೆಲವು ಮಂದಿ ಕೃಷಿಕರ ಪಾಲಿಗೆ ಆ ಗೋವು ಹಾಲು ಕೊಡದಿದ್ದರೆ ಅಥವಾ ಉಳುಮೆ ಮಾಡಲು ಆಗದಿದ್ದ ಸಂದರ್ಭದಲ್ಲಿ ಮನೆಗೆ ಭಾರವಾದ ಅಂತಹ ಗೋವನ್ನು ಕಟುಕರಿಗೆ ನೀಡುವುದನ್ನು ತಪ್ಪಿಸಲು ಗೋವುಗಳ ರಕ್ಷಣೆಗೆಂದೇ ಈ ಘಟಕ ತೆರೆಯ ಲಾಗಿದೆ ಎಂದು ಗೋಶಾಲೆಯ ಸಂಸ್ಥಾಪಕ ಹರೀಶ್ ಆಚಾರ್ಯ ಹೇಳುತ್ತಾರೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಸಂಭವಿಸಿದ ಜಲಸ್ಫೋಟದ ಸಂದರ್ಭ ದಿಕ್ಕಾಪಾಲಾಗಿದ್ದ ಗೋವು ಗಳಿಗೆ ಇಲ್ಲಿ ರಕ್ಷಣೆ ನೀಡಲಾಗಿತ್ತು. ಹಾಗೆಯೇ ಸಾಕಲು ಸಾಧ್ಯವೇ ಇಲ್ಲ ಎನ್ನುವ ಮನಸ್ಥಿತಿಯ ಕೆಲವರು ಈ ಗೋಸದನಕ್ಕೆ ಒಂದಿಷ್ಟು ಗೋವುಗಳನ್ನು ತಂದು ಬಿಟ್ಟಿದ್ದರು.
ಆದರೆ ಇದೀಗ ಇಲ್ಲಿರುವ ಗೋವುಗಳಿಗೆ ಔಷಧಿ ಉಪಚಾರ, ಊಟೋಪಚಾರ ನೀಡಲು ಆಗದಷ್ಟು ಪರಿಸ್ಥಿತಿ ಹದಗೆಟ್ಟಿದೆ.
ಈ ಸಂಸ್ಥೆ ಆರಂಭಿಸುವಾಗ ನಮಗೆ ಸಹಾಯ ಹಸ್ತ ನೀಡುವುದಾಗಿ ಹೇಳಿದ ಮಂದಿ ಕೊರೋನಾ ಕಾರಣದಿಂದ ದೂರ ಸರಿದುಬಿಟ್ಟರು. ಮೂಕ ಪ್ರಾಣಿಗಳ ಆರೈಕೆಯಂತಹ ಪುಣ್ಯದ ಕೆಲಸಕ್ಕೆ ತಾನು ಮುಂದಿಟ್ಟ ಹೆಜ್ಜೆ ಹಿಂದೆ ಸರಿಸದೇ ಸಾಲ ಸೋಲ ಮಾಡಿ ರೂ. ೨೦ ಲಕ್ಷಕ್ಕೂ ಹೆಚ್ಚು ಹಣ ವ್ಯಯ ಮಾಡಿದ್ದೇನೆ.
ಈಗಲೂ ದಾನಿಗಳು ಅಥವಾ ಗೋ ರಕ್ಷಕರು ಗೋಶಾಲೆಗೆ ಬಂದು ಪರಿಸ್ಥಿತಿಯ ಅವಲೋಕನ ನಡೆಸಿ ತಮ್ಮ ಕೈಲಾಗುವ ಸಹಾಯ ಹಸ್ತ ನೀಡಿದರೆ ಗೋ ಶಾಲೆ ಉಳಿಯುತ್ತದೆ ಎಂದು ಸಂಸ್ಥೆಯ ಸಂಸ್ಥಾಪಕ ಹರೀಶ್ ಆಚಾರ್ಯ ಹೇಳುತ್ತಾರೆ.
ಜಿಲ್ಲಾಡಳಿತದಿಂದ ಸಿಗದ ನೆರವು
ಈ ಹಿಂದೆ ರಾಜ್ಯ ಸರ್ಕಾರವೇ ಪ್ರತೀ ಜಿಲ್ಲೆಯಲ್ಲಿ ಗೋಶಾಲೆಯನ್ನು ತೆರೆದು ಗೋವುಗಳನ್ನು ಸಂರಕ್ಷಿಸುವುದಾಗಿ ಘೋಷಿಸಿತ್ತು.
ಆದರೆ ಈ ಸಂಸ್ಥೆಗೆ ಸಹಾಯ ಮಾಡಬೇಕೆಂದು ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಹತ್ತಾರು ಬಾರಿ ಅಲೆದಾಡಿದರೂ ಕೂಡ ಗೋವುಗಳ ಮೇಲೆ ಕಾಳಜಿಯನ್ನು ತೋರಿಸುತ್ತಿಲ್ಲ. ಹಾಗಾಗಿ ದಾನಿಗಳು ಮನಸ್ಸು ಮಾಡಿದರೆ ಈ ಶಾಲೆಯನ್ನು ಅಭಿವೃದ್ಧಿ ಪಡಿಸಬಹುದು ಎನ್ನುತ್ತಾರೆ.
ಜಾಗ ಮೂರು ವರ್ಷಕ್ಕೆ ಲೀಸ್
ಗೋಶಾಲೆಯನ್ನು ತೆರೆಯಲು ಚಿಕ್ಕತ್ತೂರಿನಲ್ಲಿ ನಾಲ್ಕು ಎಕರೆ ಸುತ್ತಳತೆಯ ವಿಶಾಲವಾದ ಜಾಗವನ್ನು ಮೂರು ವರ್ಷದ ಅವಧಿಗೆ ವರ್ಷಕ್ಕೆ ಒಂದು ಲಕ್ಷದ ಇಪ್ಪತ್ತು ಸಾವಿರಕ್ಕೆ ಲೀಸ್ಗೆ ಪಡೆಯಲಾಗಿದೆ.
ಇದೇ ಜಾಗದಲ್ಲಿ ಕುಡಿಯುವ ನೀರಿನ ಕೊಳವೆ ಬಾವಿಯು ಇದ್ದು ಗೋವುಗಳು ಸರಾಗವಾಗಿ ನೀರು ಕುಡಿಯುವಂತೆ ಮಾಡಲು ರೂ. ೭೦ ಸಾವಿರ ವ್ಯಯಿಸಲಾಗಿದೆ. ಲಕ್ಷ ರೂಪಾಯಿ ವ್ಯಯಿಸಿ ಸುತ್ತಲೂ ತಂತಿ ಬೇಲಿಯನ್ನು ಅಳವಡಿಸಲಾಗಿದೆ.
ಹಾಗೆಯೇ ಇಲ್ಲಿರುವ ಗೋವುಗಳನ್ನು ನಿರ್ವಹಿಸಲು ಐವರು ಕಾರ್ಮಿಕರಿದ್ದು ದಿನವೊಂದಕ್ಕೆ ಕಾರ್ಮಿಕರ ವೇತನ, ಹುಲ್ಲು, ಔಷಧಿ ಉಪಚಾರ ಸೇರಿದಂತೆ ಮತ್ತಿತರ ಕಾರಣಗಳಿಗೆ ರೂ. ೮ ರಿಂದ ೯ ಸಾವಿರ ಖರ್ಚಾಗುತ್ತಿದೆ.
ತಾನು ೨೦೧೯ ರಲ್ಲಿ ಭಾಗಮಂಡಲದ ಚೆಟ್ಟಿಮಾನಿಯಲ್ಲಿ ಗೋಶಾಲೆ ಆರಂಭಿಸಿದ್ದೆ. ಆದರೆ ಅಂದು ಸಂಭವಿಸಿದ ಜಲಸ್ಫೋಟ, ಭೂಕಂಪನ, ಅಧಿಕ ಮಳೆಯ ಕಾರಣಕ್ಕೆ ಅಲ್ಲಿನ ಭೂಮಿಯಲ್ಲಿ ನೀರಿನಾಂಶ ಹೆಚ್ಚಾದ ಕಾರಣ ಗೋವುಗಳು ಶೀತಕ್ಕೆ ಸಿಲುಕಿದ್ದರಿಂದ ಆ ಸಂಸ್ಥೆಯನ್ನು ಕುಶಾಲನಗರದತ್ತ ಸ್ಥಳಾಂತರಿಸಲು ತೀರ್ಮಾನಿಸಿದೆ ಎಂದು ಹರೀಶ್ ಮಾಹಿತಿಯಿತ್ತರು.
ಇದೀಗ ಜನರ ಅಸಹಕಾರ ತನ್ನಲ್ಲಿನ ಗೋ ಪ್ರೀತಿ ಹಾಗೂ ಕಾಳಜಿಯನ್ನು ಅಣಕಿಸುತ್ತಿದೆ. ಇನ್ನಾದರೂ ದಾನಿಗಳು, ಸಹಕಾರ ಸಂಸ್ಥೆಗಳು, ಸಂಘಟನೆಗಳು ಮನಸ್ಸು ಮಾಡಬೇಕಿದೆ.
ನಮ್ಮ ಶ್ರೀ ಕೃಷ್ಣ ಗೋಶಾಲೆಗೆ ಖುದ್ದಾಗಿ ಬಂದು ಇಲ್ಲಿನ ಗೋವುಗಳ ಪರಿಸ್ಥಿತಿಯನ್ನು ಕಣ್ಣಾರೆ ಕಂಡು ಅವುಗಳಿಗೆ ಕನಿಷ್ಟ ಆಹಾರಕ್ಕಾಗಿ ಒಣ ಹುಲ್ಲು ಅಥವಾ ಹಸಿ ಹುಲ್ಲಿನ ವ್ಯವಸ್ಥೆ ಹಾಗೂ ಔಷಧಿ ವ್ಯವಸ್ಥೆ ಮಾಡಿದರೆ ಗೋರಕ್ಷಣೆ ಮುಂದುವರಿಯುತ್ತದೆ.
ಜಿಲ್ಲಾಡಳಿತವೂ ಕೂಡ ಪಶು ಸಂಗೋಪನಾ ಇಲಾಖೆಯ ಮೂಲಕ ನಮ್ಮ ಗೋವುಗಳಿಗೆ ಉಚಿತ ಔಷಧೋಪಚಾರಕ್ಕೆ ಮುಂದಾದರೆ ನಮ್ಮ ಗೋವುಗಳು ನೆಮ್ಮದಿಯಿಂದ ದಿನಗಳೆಯುತ್ತವೆ. ಜೊತೆಗೆ ಗೋಶಾಲೆಯು ಅಭಿವೃದ್ಧಿ ಹೊಂದುತ್ತದೆ ಎನ್ನುತ್ತಾರೆ ಹರೀಶ್ ಆಚಾರ್ಯ.
ಗೋಶಾಲೆಗೆ ಸಹಾಯ ಹಸ್ತ ಚಾಚ ಬಯಸುವ ಕೈಗಳು ೯೧೬೪೮ ೫೭೧೬೩ ಈ ಮೊಬೈಲ್ ನಂಬರಿಗೆ ಕರೆ ಮಾಡುವ ಮೂಲಕ ಮಾಹಿತಿ ಪಡೆದು ಕೊಂಡು ಸಹಕರಿಸಬಹುದು ಎಂದು ಕೋರಲಾಗಿದೆ.
- ಕೆ.ಎಸ್. ಮೂರ್ತಿ, ಕುಶಾಲನಗರ