ಸೋಮವಾರಪೇಟೆ, ಅ. ೭: ಭಾರತೀಯ ಜನತಾ ಪಾರ್ಟಿಯ ತಾಲೂಕು ಸೈನಿಕ ಪ್ರಕೋಷ್ಠದ ವತಿಯಿಂದ ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಹಣ್ಣು ಹಂಪಲುಗಳನ್ನು ವಿತರಿಸಿ ಮಾತನಾಡಿದ ಸೈನಿಕ ಪ್ರಕೋಷ್ಠದ ಮಂಡಲ ಅಧ್ಯಕ್ಷ ಬಿ.ಆರ್. ಈರಪ್ಪ ಅವರು, ದೇಶ ಕಂಡ ಅಪ್ರತಿಮ ನಾಯಕರುಗಳಲ್ಲಿ ಮುಂಚೂಣಿ ಯಲ್ಲಿರುವ ನರೇಂದ್ರ ಮೋದಿ ಅವರು ಜನಸಾಮಾನ್ಯರ ನೆರವಿಗೆ ಅನೇಕ ಕಲ್ಯಾಣ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದರು.
ಕೊರೊನಾ ಸಂದರ್ಭ ಇಡೀ ದೇಶದ ಆರೋಗ್ಯ ಕ್ಷೇತ್ರದ ಸುಧಾರಣೆಗೆ ಶ್ರಮಿಸಲಾಗಿದೆ. ಕೋಟ್ಯಂತರ ಭಾರತೀಯರಿಗೆ ಉಚಿತವಾಗಿ ಲಸಿಕೆ ನೀಡುವ ಮೂಲಕ ಕೊರೊನಾದಿಂದ ಪಾರು ಮಾಡಿದ್ದಾರೆ. ತಾಲೂಕು ಸೈನಿಕ ಪ್ರಕೋಷ್ಠದಿಂದ ಮುಂದಿನ ದಿನಗಳಲ್ಲಿ ಕ್ಷಯ ರೋಗಿಗಳಿಗೆ ಕಿಟ್ ನೀಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮನುಕುಮಾರ್ ರೈ ಮಾತನಾಡಿ, ಬಿಜೆಪಿ ಕಾರ್ಯಕರ್ತರು ಕೊರೊನಾ ಸಂದರ್ಭ ಸರ್ಕಾರದೊಂದಿಗೆ ಸಹಕರಿಸಿ ಸೇವಾ ಕಾರ್ಯ ಮಾಡಿದ್ದಾರೆ.
ಈ ಬಾರಿ ಪ್ರಧಾನಿ ಮೋದಿ ಅವರ ಹುಟ್ಟು ಹಬ್ಬದ ಅಂಗವಾಗಿ ರಕ್ತದಾನ ಶಿಬಿರ, ಸ್ವಚ್ಛತಾ ಕಾರ್ಯಕ್ರಮ, ಕ್ಷಯ ರೋಗಿಗಳಿಗೆ ಕಿಟ್ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಸೈನಿಕ ಪ್ರಕೋಷ್ಠದ ಅಧ್ಯಕ್ಷ ಚಂಗಪ್ಪ, ಆಸ್ಪತ್ರೆಯ ವೈದ್ಯಾಧಿಕಾರಿ ಸತೀಶ್ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.