ಎಸ್ಸಿ-ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ತೀರ್ಮಾನ

ಬೆಂಗಳೂರು, ಅ. ೭: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ವಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಎಸ್‌ಸಿ, ಎಸ್‌ಟಿಗೆ ಸೇರಿದವರಿಗೆ ಹೆಚ್ಚಿನ ಅವಕಾಶ ನೀಡಲು ಅನುಕೂಲವಾಗುವಂತೆ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲಾಗುವುದು ಎಂದು ತಿಳಿಸಿದರು. ಎಸ್‌ಸಿ ವರ್ಗದ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ. ೧೫ ರಿಂದ ಶೇ. ೧೭ಕ್ಕೆ ಹಾಗೂ ಎಸ್‌ಟಿ ಮೀಸಲಾತಿಯನ್ನು ಹಾಲಿ ಅಸ್ತಿತ್ವದಲ್ಲಿರುವ ಶೇ. ೩ ರಿಂದ ೭ಕ್ಕೆ ಹೆಚ್ಚಳ ಮಾಡಲಾಗುವುದು. ಸರ್ವಪಕ್ಷ ಸಭೆಯ ನಿರ್ಣಯವನ್ನು ಸಚಿವ ಸಂಪುಟದಲ್ಲಿ ಇರಿಸಿ ಅಂಗೀಕಾರ ಪಡೆದುಕೊಂಡ ನಂತರ ಸರ್ಕಾರಿ ಆದೇಶ ಹೊರಡಿಸಲಾಗುವುದು. ಮೀಸಲಾತಿ ಪ್ರಮಾಣ ಹೆಚ್ಚಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಬೊಮ್ಮಾಯಿ ಹೇಳಿದರು. ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡುವ ಬಗ್ಗೆ ಸಂವಿಧಾನವು ಪ್ರಸ್ತಾಪಿಸಿದೆ. ಅದರ ಆಶಯದಂತೆ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂಬುದು ನಮ್ಮ ನಿರ್ಧಾರ. ಎಸ್‌ಸಿ, ಎಸ್‌ಟಿ ಮೀಸಲಾತಿ ಪ್ರಮಾಣ ಹೆಚ್ಚಳ ಸಂಬAಧ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ ದಾಸ್ ಸಮಿತಿ ಅಧ್ಯಯನ ಮಾಡಿ, ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸರ್ವಪಕ್ಷ ಸಭೆಯಲ್ಲಿ ವರದಿ ಅನುಷ್ಠಾನ ಸಂಬAಧ ಚರ್ಚೆ ನಡೆಸಿದೆವು ಎಂದು ಸಿಎಂ ತಿಳಿಸಿದರು.

ರಾಜ್ಯ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ ಹೆಚ್ಚಳ

ಬೆಂಗಳೂರು, ಅ. ೭: ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಂತಸ ಸುದ್ದಿ ನೀಡಿದ್ದು, ಕಳೆದ ಜುಲೈ ೧ ರಿಂದಲೇ ಪೂರ್ವಾನ್ವಯವಾಗುವಂತೆ ತುಟ್ಟಿಭತ್ಯೆ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ಟ್ವಿಟರ್‌ನಲ್ಲಿ ಮಾಹಿತಿ ನೀಡಿದ್ದು, ರಾಜ್ಯ ಸರ್ಕಾರಿ ನೌಕರರಿಗೆ ಜುಲೈ ೧ ರಿಂದ ಜಾರಿಗೆ ಬರುವಂತೆ ತುಟ್ಟಿ ಭತ್ಯೆಯನ್ನು ಶೇ. ೩.೭೫ ರಷ್ಟು ಹೆಚ್ಚಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸರ್ಕಾರ ೧,೨೮೨.೭೨ ಕೋಟಿ ರೂ. ವಾರ್ಷಿಕ ವೆಚ್ಚ ಭರಿಸಲಿದೆ. ಸರ್ಕಾರಿ ಆದೇಶ ಹೊರಡಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಜಾಗದ ವಿಚಾರಕ್ಕೆ ಚಂದ್ರಶೇಖರ್ ಗುರೂಜಿಯ ಹತ್ಯೆ

ಹುಬ್ಬಳ್ಳಿ, ಅ. ೭: ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆಗೆ ಸಂಬAಧಪಟ್ಟAತೆ ಪೊಲೀಸ್ ಕಮಿಷನರೇಟ್ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದೆ. ಜೆಎಂಎಫ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಬರೋಬ್ಬರಿ ೮೦೦ ಪುಟಗಳ ಚಾಜ್‌ಶೀಟ್‌ನಲ್ಲಿ ಕೊಲೆಗೆ ಏನು ಕಾರಣ ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಜಾರ್ಜ್ ಶೀಟ್‌ನಲ್ಲಿ ಪ್ರಕರಣದ ಮಹತ್ವದ ಅಂಶಗಳು ಉಲ್ಲೇಖವಾಗಿದ್ದು, ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿದ್ದ ಸರ್ವೆ ನಂಬರ್ ೧೬೬/೧, ೫ ಎಕರೆ ೧೧ ಗುಂಟೆ ಜಮೀನು ವಿಚಾರ ಚಂದ್ರಶೇಖರ ಗುರೂಜಿ ಕೊಲೆಗೆ ಮುಖ್ಯ ಕಾರಣ ಎಂದು ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ತಿಳಿದುಬಂದಿದೆ. ಈ ಜಮೀನು ಬಸವರೆಡ್ಡಿ ಎಂಬುವರ ಹೆಸರಿನಲ್ಲಿದ್ದು ಈತ ಸಹ ಸರಳವಾಸ್ತು ಕಂಪೆನಿಯ ಹಳೇ ಉದ್ಯೋಗಿಯಾಗಿದ್ದನು. ಗುರೂಜಿ ಕಂಪನಿ ಬಿಟ್ಟ ಬಳಿಕ ಮಹಾಂತೇಶ್, ಮಂಜುನಾಥ ಮತ್ತು ಬಸವರೆಡ್ಡಿ ಗುರೂಜಿ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರು. ಹೀಗಾಗಿ ಬಸವರೆಡ್ಡಿ ಹತ್ತಿರ ಇದ್ದ ಜಮೀನನ್ನು ಮಹಾಂತೇಶ್ ಹೆಸರಿಗೆ ವರ್ಗಾಯಿಸಿ ಮಾರಾಟ ಮಾಡಲು ಯೋಜನೆ ಮಾಡಿದ್ದರು ಎಂದು ಹೇಳಲಾಗಿದೆ. ಇನ್ನೂ ಈ ಕೊಲೆಯಲ್ಲಿ ಬಸವರೆಡ್ಡಿ ಪಾತ್ರವಿಲ್ಲ ಎನ್ನುವ ಅಂಶವೂ ಕೂಡ ಚಾರ್ಜ್ ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದೆ.

ಬ್ಯಾರೆಲ್ ಸಿಡಿದು ಇಬ್ಬರು ಸೈನಿಕರು ಸಾವು

ಬಬಿನಾ, ಅ. ೭: ಮಧ್ಯಪ್ರದೇಶದ ಬಬಿನಾದಲ್ಲಿ ಫೀಲ್ಡ್ ಫೈರಿಂಗ್ ತರಬೇತಿ ವೇಳೆ ಟಿ -೯೦ ಯುದ್ಧ ಟ್ಯಾಂಕ್‌ನ ಬ್ಯಾರೆಲ್ ಸಿಡಿದು ಇಬ್ಬರು ಭಾರತೀಯ ಸೇನಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬರು ಗಾಯ ಗೊಂಡಿದ್ದಾರೆ. ತಾ. ೬ ರಂದು ಬಾಬಿನಾ ಫೀಲ್ಡ್ ಫೈರಿಂಗ್ ರೇಂಜ್‌ನಲ್ಲಿ ವಾರ್ಷಿಕ ಗುಂಡಿನ ದಾಳಿಯ ಸಂದರ್ಭದಲ್ಲಿ ಟ್ಯಾಂಕರ್‌ನ ಬ್ಯಾರೆಲ್ ಸ್ಫೋಟಗೊಂಡಿತು. ಈ ಟ್ಯಾಂಕರ್ ಅನ್ನು ಮೂವರು ಸಿಬ್ಬಂದಿ ನಿರ್ವಹಿಸು ತ್ತಿದ್ದರು. ಎಲ್ಲಾ ಸಿಬ್ಬಂದಿಗೆ ತಕ್ಷಣವೇ ವೈದ್ಯಕೀಯ ತುರ್ತು ಚಿಕಿತ್ಸೆ ನೀಡಿ ಬಬಿನಾದಲ್ಲಿರುವ ಮಿಲಿಟರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಸುಟ್ಟ ಗಾಯಗಳಿಂದ ಬಳಲುತ್ತಿದ್ದ ಕಮಾಂಡರ್ ಮತ್ತು ಗನ್ನರ್ ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ. ಚಾಲಕ ಅಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಲೆಸ್ ಸೇರಿ ಮೂವರಿಗೆ ನೊಬೆಲ್ ಶಾಂತಿ ಪ್ರಶಸ್ತಿ

ನ್ಯೂಯಾರ್ಕ್, ಅ. ೭: ೨೦೨೨ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಶುಕ್ರವಾರ ಪ್ರಕಟವಾಗಿದ್ದು, ಬೆಲಾರಸ್‌ನ ಮಾನವ ಹಕ್ಕುಗಳ ಹೋರಾಟಗಾರ ಅಲೆಸ್ ಬಿಲಿಯಾಟ್ಸಿ÷್ಕ, ರಷ್ಯಾದ ಮಾನವ ಹಕ್ಕುಗಳ ಸಂಸ್ಥೆ ಸ್ಮಾರಕ ಮತ್ತು ಉಕ್ರೇನಿಯನ್ ಮಾನವ ಹಕ್ಕುಗಳ ಸಂಸ್ಥೆ ಸೆಂಟರ್ ಫಾರ್ ಸಿವಿಲ್ ಲಿಬರ್ಟೀಸ್ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದುಕೊಂಡಿವೆ. ಬೆಲಾರಸ್‌ನ ಅಲೆಸ್ ೧೯೮೦ ರ ದಶಕದಲ್ಲಿ ದೇಶದಲ್ಲಿ ಪ್ರಜಾಪ್ರಭುತ್ವ ಚಳವಳಿಯ ಪ್ರಾರಂಭಿಕರಲ್ಲಿ ಒಬ್ಬರಾಗಿದ್ದರು ಮತ್ತು ಪ್ರಜಾಪ್ರಭುತ್ವ ಮತ್ತು ಶಾಂತಿಯನ್ನು ಉತ್ತೇಜಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಮಾನವ ಹಕ್ಕುಗಳ ಸಂಸ್ಥೆ ಮೆಮೋರಿಯಲ್ ರಷ್ಯಾದಲ್ಲಿ ರಾಜಕೀಯ ದಬ್ಬಾಳಿಕೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಮಾಹಿತಿಯನ್ನು ಸಂಗ್ರಹಿಸಿದೆ ಮತ್ತು ವ್ಯವಸ್ಥಿತಗೊಳಿಸಿದೆ. ಕೈವ್‌ನಲ್ಲಿರುವ ಸಿವಿಲ್ ಲಿಬರ್ಟೀಸ್ ಕೇಂದ್ರವು ಉಕ್ರೇನ್‌ನಲ್ಲಿ ಮಾನವ ಹಕ್ಕುಗಳು ಮತ್ತು ಪ್ರಜಾಪ್ರಭುತ್ವವನ್ನು ಮುನ್ನಡೆಸುತ್ತಿದ್ದು, ಉಕ್ರೇನಿಯನ್ ನಾಗರಿಕ ಸಮಾಜವನ್ನು ಬಲಪಡಿಸುವ ನಿಲುವನ್ನು ತೆಗೆದುಕೊಂಡಿದೆ ಮತ್ತು ಉಕ್ರೇನ್ ಅನ್ನು ಪೂರ್ಣ ಪ್ರಮಾಣದ ಪ್ರಜಾಪ್ರಭುತ್ವವನ್ನಾಗಿ ಮಾಡಲು ಪಣತೊಟ್ಟಿದೆ.

ಮದರಸಾದಲ್ಲಿ ಪೂಜೆ-ಬೀದರ್ ಉದ್ವಿಗ್ನ

ಬೀದರ್, ಅ. ೭: ಹಿಂದೂಪರ ಸಂಘಟನೆಗಳ ಗುಂಪೊAದು ಗುರುವಾರ ಬೆಳಿಗ್ಗೆ ನಗರದ ೧೫ನೇ ಶತಮಾನದ ಐತಿಹಾಸಿಕ ಮೊಹಮ್ಮದ್ ಗವಾನ್ ಮಸೀದಿ ಹಾಗೂ ಮದರಸಾಗೆ ನುಗ್ಗಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿ ಪೂಜೆ ಸಲ್ಲಿಸಿದ ನಂತರ ಬೀದರ್ ನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಘಟನೆಗೆ ಸಂಬAಧಿಸಿದAತೆ ಬೀದರ್ ಪೊಲೀಸರು ಒಂಬತ್ತು ಮಂದಿಯ ವಿರುದ್ಧ ಕೇಸ್ ದಾಖಲಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಐತಿಹಾಸಿಕ ಸ್ಮಾರಕದ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಮಹ್ಮದ್ ಗವಾನ್ ಸ್ಮಾರಕದ ಆವರಣದಲ್ಲಿರುವ ಮದರಸಾ ಮತ್ತು ಮಸೀದಿಯ ಮುಂಭಾಗದಲ್ಲಿ ಭವಾನಿ ದೇವಿಯ ಮೆರವಣಿಗೆ ಸಾಗುತ್ತಿರುವ ಸಂದರ್ಭದಲ್ಲಿ ಗುಂಪೊAದು ಮದರಸಾ ಪ್ರವೇಶಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೇಟ್ ಒಡೆದು ಮದರಸಾ ಪ್ರವೇಶಿಸಿದ ಗುಂಪು ಒಳಗೆ ಪ್ರಾರ್ಥನೆ ಸಲ್ಲಿಸಿ ಮತ್ತು ಘೋಷಣೆಗಳನ್ನು ಕೂಗಿದೆ. ಬಳಿಕ ಕಟ್ಟಡದ ಒಂದು ಮೂಲೆಯಲ್ಲಿ ಹಿಂದೂ ಸಂಪ್ರದಾಯದAತೆ ಪೂಜೆ ಸಲ್ಲಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ಖಂಡಿಸಿ ಬೀದರ್‌ನಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿವೆ. ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಶುಕ್ರವಾರದ ಪ್ರಾರ್ಥನೆಯ ನಂತರ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಚಿವ ಜಬ್ಬಾರ್ ಖಾನ್ ವಿಧಿವಶ

ಹುಬ್ಬಳ್ಳಿ, ಅ. ೭: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ಸಚಿವ ಜಬ್ಬಾರ್ ಖಾನ್ ಹೊನ್ನಳ್ಳಿ (೮೦) ತಾ. ೭ ರಂದು ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಎಸ್.ಎಂ. ಕೃಷ್ಣ ನೇತೃತ್ವದ ಸರ್ಕಾರದ ಅವಧಿಯಲ್ಲಿ ಜಬ್ಬಾರ್ ಖಾನ್ ಹೊನ್ನಳ್ಳಿಯವರು ಕ್ರೀಡಾ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಇತ್ತೀಚೆಗೆ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಿಸದೆ ಸಾವನಪ್ಪಿದ್ದಾರೆ. ಯುವಜನ ಮತ್ತು ಕ್ರೀಡಾ ಸಚಿವರಾಗಿದ್ದ ಜಬ್ಬಾರ್ ಖಾನ್ ಹೊನ್ನಳ್ಳಿ ಸಾಕಷ್ಟು ರಾಜಕೀಯ ಅನುಭವ ಪಡೆದಿದ್ದ ಹಿರಿಯ ರಾಜಕಾರಣಿಯಾಗಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್ ನಾಯಕರು ಸೇರಿದಂತೆ ಅವಳಿನಗರದ ಜನಪ್ರತಿನಿಧಿಗಳು ಕಂಬನಿ ಮಿಡಿದಿದ್ದಾರೆ.v