ಮಡಿಕೇರಿ, ಅ. ೪: ನೆಲ, ಜಲ ಉಳಿದಲ್ಲಿ ಮಾತ್ರ ನಮ್ಮ ಬದುಕು... ಕೊಡಗಿನ ಸೊಬಗಿನ ಅನಾವರಣ, ಕೋಮು ಸಂಘರ್ಷ ದೂರ ಮಾಡಿ ಒಂದಾಗಿ ಎಂಬ ಸಂದೇಶ, ಅಮ್ಮನಿಗೆ ಭಾವಪೂರ್ವಕ ನಮನ, ಹೆಣ್ಣಿನ ಶೋಷಣೆ ವಿರುದ್ಧ ಆಕ್ರೋಶ...
ಹೀಗೆ ಅನೇಕ ವಿಚಾರಗಳು, ಸಮಾಜದ ಘಟನಾವಳಿಗಳಿಗೆ, ಮನದ ಮಿಡಿತಗಳಿಗೆ ಬಹುಭಾಷಾ ಕವಿಗೋಷ್ಠಿ ಯಲ್ಲಿ ಪದಗಳ ರೂಪುಪಡೆದುಕೊಂಡು ಚಿಂತನೆಗೆ ಹಚ್ಚುವಂತೆ ಮಾಡಿತು.
ಮಡಿಕೇರಿ ದಸರಾ ಸಮಿತಿ, ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಕವಿಗೋಷ್ಠಿಯಲ್ಲಿ ಭಾವನೆಗಳು ಹರಿದುಬಂದವು.
ಕಾವ್ಯಗಳ ಶರಧಿ
ಕನ್ನಡ, ಕೊಡವ, ಅರೆಭಾಷೆ, ತುಳು, ಮರಾಠಿ, ಕೊಂಕಣಿ, ಕುಂಬಾರ, ತಮಿಳು, ಹವ್ಯಕ, ಯರವ, ಬ್ಯಾರಿ, ಇಂಗ್ಲೀಷ್, ಹಿಂದಿ ಭಾಷೆಗಳಲ್ಲಿ ಕವಿಗಳು ಕವನಗಳನ್ನು ವಾಚಿಸಿದರು.
ಮನದ ತುಮುಲಗಳು, ಸಾಮಾಜಿಕ ಹಿನ್ನಡೆಗಳು, ಹಬ್ಬ, ಆಚರಣೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಹಾಗೂ ಪ್ರಕೃತಿಯ ಸಂರಕ್ಷಣೆಯ ಕುರಿತ ಕವನಗಳು ಕವಿಗೋಷ್ಠಿಯಲ್ಲಿ ಪರಿಣಾಮಕಾರಿ ಯಾಗಿ ಹೊರಹೊಮ್ಮಿದವು.
‘ಹೊತ್ತವಳ ತಾಯಿ' ಎಂಬ ಕವನದ ಮೂಲಕ ಕವಿ ಮಾಲಮೂರ್ತಿ ಮಾಲಿನ್ಯದಿಂದ ಕಾಪಾಡು ಪರಿಸರದೊಡಲ ಎಂಬ ಸಂದೇಶ ಸಾರಿದರು. ಕಷ್ಟ, ಸವಾಲುಗಳನ್ನು ಎದುರಿಸಿ ಮುನ್ನುಗ್ಗಿ ಎಂದು ‘ಪಯಣ' ಎಂಬ ಕವನದ ಮೂಲಕ ಸೌಮ್ಯ ಶೆಟ್ಟಿ ಸ್ಥೆöÊರ್ಯ ತುಂಬಿದರು. ಕುಕ್ಕನೂರು ರೇಷ್ಮಮನೋಜ್ ರಚಿತ ‘ನೆನಪು ಹೊತ್ತ ಶಾಲೆ' ಕವನವು ಶಾಲಾ ದಿನವನ್ನು ನೆನಪಿಸುವಂತೆ ಮಾಡಿತು. ಕೊಡಗಿನ ಭವ್ಯ ವೈಭವ, ಇತಿಹಾಸ, ಸಂಸ್ಕೃತಿ, ಸೇನೆಗೆ ಕೊಡಗಿನ ಕೊಡುಗೆಯನ್ನು ವರ್ಣಿಸಿ ಲವಿನ್ ಲೋಪೆಸ್ ಬರೆದ ‘ನಮ್ಮ ಕೊಡಗು' ಕವನ ಗಮನ ಸೆಳೆಯಿತು. ಚಿತ್ರ ಕಲಾವಿದನ ಹಿಂದಿನ ನೋವುಗಳನ್ನು ಪದಗಳಲ್ಲಿ ಇಳಿಸಿದ ಜಲಕಾಳಪ್ಪ ಅವರ ‘ಚಿತ್ರಕಲಾವಿದ' ಕವನ ಭಾವಪರವಶವಾಗುವಂತೆ ಮಾಡಿತು. ವಸಂತಿ ರವೀಂದ್ರ ಅವರ ‘ನಂಬುಗೆಯ ಅಂಬಿಗರು' ಕವನ ನಾವು ಮಾಡುತ್ತಿರುವ ತಪ್ಪಿಗೆ ಕನ್ನಡಿ ಹಿಡಿದಂತಿತ್ತು. ನೋವಿನಲ್ಲೂ ಕುಟುಂಬವನ್ನು ಕಾಯುವ ಅಪ್ಪನ ಕುರಿತು ವಿಮಲ ಪಿ.ಆರ್. ‘ಅಪ್ಪ ಎಂಬ ಅದ್ಭುತ' ಕವನ ವಾಚಿಸಿ ತಂದೆಯರಿಗೆ ಗೌರವ ಸಮರ್ಪಿಸಿದರು. ಈರಮಂಡ ಹರಿಣಿ ವಿಜಯ ನಡೆಯುತ್ತಿರುವ ಹೆಣ್ಣಿನ ಶೋಷಣೆಗೆ ಧ್ವನಿಯಾಗಿ ‘ಹೆಣ್ಣಿನ ಒಡಲು' ಎಂಬ ಕವನ ವಾಚಿಸಿ ಶೋಷಣೆಗೆ ಮುಕ್ತಿ ಇಲ್ಲವೇ ಎಂದು ಪ್ರಶ್ನಿಸಿದರು. ಗ್ರಾಮೀಣ ಭಾಗದ ನೋವು, ನಲಿವು, ಜನ-ಜೀವನದ ಕುರಿತು ಶರ್ಮಿಳಾ ರಮೇಶ್ ಗ್ರಾಮ್ಯ ಕನ್ನಡದಲ್ಲಿ ‘ಹಳ್ಳಿ ಪಾಡು' ಕವನ ಪ್ರಸ್ತುತಪಡಿಸಿದರು.
ಹೇಮಲತಾ ಪೂರ್ಣಪ್ರಕಾಶ್ ‘ಭಾವದೆಳೆಯ ನವಿರು', ಪುಷ್ಪಲತಾ ಶಿವಪ್ಪ ‘ಅನುಭವದ ಹಸನಾದ ಪ್ರೀತಿ, ಪಿ.ಎಸ್.ವೈಲೇಶ್ ‘ಮನದಿಂದ ಪೇಳಿ', ರಾಣಿ ರವೀಂದ್ರ ‘ಕವಿ ಎಲ್ಲವಲ್ಲಾ ನಾ', ಹರೀಶ ಸರಳಾಯ ‘ಪ್ರೀತಿಯೆಂದರೆ', ದೀಪಿಕಾ ಸಂದೀಪ್ ‘ತಾಯ್ತನ', ಮಂಜು ಗೋಪಿನಾಥ್ ‘ಮನದ ಮಾತು',
(ಮೊದಲ ಪುಟದಿಂದ) ರಂಜಿತ ಕಾರ್ಯಪ್ಪ ‘ಶೋಷಣೆ', ಕುಸುಮಾಕರ ಅಂಬೇಕಲ್ಲು ‘ಬಡವನಾದರೆ', ಕವಿತಾ ಕೆ.ಎನ್. ‘ಅಮೃತ ಮಹೋತ್ಸವ', ಯು.ಎನ್.ರೇಖಾ ‘ಪದಗಳಿಲ್ಲದ ಕವಿತೆ' ಎಂ. ಉಷಾ ‘ಕನ್ನಡ ನಾಡಿನ ಕಾಶ್ಮೀರ' ಕವನಗಳು ಜನರ ಮನಕ್ಕೆ ಮುದ ನೀಡಿದವು.
ಕೊಡವ ಭಾಷೆಯಲ್ಲಿ ಚಿಮ್ಮಚಿರ ಪವಿತ ರಜನ್ ‘ಬದ್ಕ್ ಬರ್ಡಾಕತಿ' ಎಂಬ ಕವನದ ಮೂಲಕ ಮಾದಕ ದ್ರವ್ಯಕ್ಕೆ ದಾಸರಾಗಿ ಪ್ರಾಣ ಕಳೆದುಕೊಳ್ಳಬೇಡಿ ಎಂದು ಮನವಿ ಮಾಡಿದರು.
ಚಾಮೇರ ದಿನೇಶ್ ಬೆಳ್ಯಪ್ಪ ‘ನರಿಬುದ್ಧಿ' , ತೆನ್ನೀರ ಟೀನಾ ಚಂಗಪ್ಪ ‘ಅಖೀರಿಲೊಮ್ಮ', ಬೊಟ್ಟೋಳಂಡ ನಿವ್ಯ ದೇವಯ್ಯ ‘ಆ ಗ್ಯಾನ', ಕವನಗಳು ಮೆಚ್ಚುಗೆ ಪಡೆದವು.
ಅರೆಭಾಷೆಯಲ್ಲಿ ಕಣಜಾಲು ಪೂವಯ್ಯ ಹಣದ ಆಸೆಗೆ ಪ್ರಕೃತಿ ಮೇಲಿನ ದಾಳಿ, ಹರಳು ಕಲ್ಲು, ಗಣಿಗಾಗಿ ಭೂಮಿ ಬಗೆಯುತ್ತಿರುವ ದಂಧೆಕೋರರ ವಿರುದ್ಧ ‘ನನ್ನ ಬೆತ್ತಲೆ ಮಾಡ್ದ್ ಯಾರ್' ಎಂಬ ಕವನದ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ವಿನೋದ್ ಮೂಡಗದ್ದೆ ‘ಅವ್ವ', ಜಶ್ಮಿ ಕಲ್ಲುಮುಟ್ಲು ‘ತಿಳ್ಕಂಡ್ ಬಾಳುವ ಜೀವನ', ಕುದುಪಜೆ ರಂಜಿತ್ ದಾಮೋದರ್ ‘ಸ್ಕೂಲ್ನ ಬದ್ಕ್', ಡಾ. ಲಾವಣ್ಯ ಸಿ.ಪಿ. ಕೊಟ್ಟಕೇರಿಯನ ‘ಬೊದ್ಕ್ನ ಪಾಟ', ಶೈಲಜ ದಿನೇಶ್ ‘ಬೊಳ್ಪ್' ಕವನಗಳು ಹಿತ ನೀಡಿದವು.
ತುಳು ಭಾಷೆಯಲ್ಲಿ ಸುಶೀಲಾ ಆರ್.ರಾವ್ ‘ಎಳ್ಪತೈನೆತೊ ಪೊಣ್ಜೋವು', ಕೆ.ಜಿ.ರಮ್ಯ ‘ಎನ್ನಪ್ಪೆ', ಆಕೃತಿ ಭಟ್ ‘ಬಾಲ್ಯದೊ ನೆನಪು', ಮರಾಠಿಯಲ್ಲಿ ಎಚ್. ಭೀಮರಾವ್ ವಾಷ್ಠರ್ ‘ಲೋಕಾಜ ರೀತ ರಿವಾಜ್', ಬರಹಗಳು ಭಾಷೆ ಅರ್ಥವಾಗದಿದ್ದರು ಭಾವನೆಗಳು ಮನ ಮುಟ್ಟಿತು.
ಉಳಿದಂತೆ ಕೊಂಕಣಿಯಲ್ಲಿ ಜೋಯ್ಸ್ ಪಿಂಟೋ ‘ಹಾಂವ್ ಸೊಜೆರಾಂಚಾ ಘರಾ', ಫ್ಲಾವಿಯಾ ಅಲ್ಬುಕರ್ಕ್ ‘ಅಮಿಸೆವಿನಾಂದ್' ಕುಂಬಾರ ಭಾಷೆಯಲ್ಲಿ ಸುನಿತಾ ವಿಶ್ವನಾಥ್ ‘ಜೀವ', ಎಸ್.ಸೈಮನ್ ತಮಿಳು ಭಾಷೆಯಲ್ಲಿ ‘ಬುದ್ಧಿ', ಪೆರಮಾಳು ಲಕ್ಷ್ಮಣ್ ‘ನವರಾತ್ರಿ’, ಕವನಗಳು ಉತ್ತಮವಾಗಿ ಮೂಡಿಬಂದವು.
ಗಮನ ಸೆಳೆದ ಯರವ ಕವನ
ಸಾಹಿತಿ ಉಳುವಂಗಡ ಕಾವೇರಿ ಉದಯ ಅವರು ಯರವ ಭಾಷೆಯಲ್ಲಿ ಮೂರು ಸಣ್ಣ ಕವನ ರಚಿಸಿ ಗಮನ ಸೆಳೆದರು.
‘ಚೀಮ' ಕವನ ಜೀವಂತ ಕೊಕ್ಕರೆ ಹಾಗೂ ನಿರ್ಮಿತ ಕೊಕ್ಕರೆಯನ್ನು ಕುರಿತು ಇತ್ತು. 'ಉರ್ ಪೆ' ಎಂಬ ಕವನ ಕೈಚೀಲದ ಕುರಿತು ಹಾಸ್ಯಸ್ಪದವಾಗಿ ಮೂಡಿಬಂತು. ಅಜ್ಜಿಯ ಕೈಚೀಲದಲ್ಲಿ ಎಲೆ, ಅಡಿಕೆ, ಸುಣ್ಣವಿದೆ. ಯಜಮಾನತಿ ಕೈಚೀಲದಲ್ಲಿ ಮೊಬೈಲ್ ಇದೆ ಎಂಬ ಪದಗಳು ಕಚಗುಳಿ ಇಟ್ಟಿತು. ಅಂಗೈ ರೇಖೆಯನ್ನು ನಂಬಬೇಡಿ, ಬುದ್ದಿ, ವಿಶ್ವಾಸವನ್ನು ನಂಬಿ ಮುನ್ನುಗಿ ಎಂದು ಹೇಳಿದರು. ಜೊತೆಗೆ ಇಂಗ್ಲೀಷ್ ನಲ್ಲಿ ಅಮ್ಮಣ್ಣಿಚಂಡ ಪ್ರವೀಣ್ ಚಂಗಪ್ಪ 'ದೀಸ್ ವೇರ್ ದಿ ಡೇಸ್', ಮುಕ್ಕಾಟಿ ಮನೋಜ್ ಈರಪ್ಪ ಹಿಂದಿಯಲ್ಲಿ ‘ಕೊರೊನಾ' ಎಂಬ ಕವನ ವಾಚಿಸಿದರು.
ಗೋಷ್ಠಿಗೆ ಕವನ ಬರೆಯಬೇಡಿ.
ಗೋಷ್ಠಿಗಾಗಿ ಕವನ ಬರೆಯಬೇಡಿ. ಒಂದೆರಡು ಗೋಷ್ಠಿಗೆ ಕವಿತೆ ಬರೆದರೆ ಕವಿಯ ಭಾವನೆ ಸತ್ತಂತೆ. ಆದ್ದರಿಂದ ಕವಿಯಾದವನು ಎಂದಿಗೂ ಕವನ ಬರೆಯುವ ಮೂಲಕ ಭಾವನೆಗಳನ್ನು ಜೀವಂತವಾಗಿರಿಸಬೇಕು. ಪ್ರಕೃತಿ, ಅಮ್ಮ, ದಸರಾ, ಮಹಿಳೆ ವಿಷಯದ ಬಗ್ಗೆ ಕವಿಗಳು ತಮ್ಮ ಕವನದ ಮೂಲಕ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ರಾಜಕೀಯದ ಬಗ್ಗೆ ಹಾಗೂ ಪ್ರಸ್ತುತ ಸನ್ನಿವೇಶಗಳ ಬಗ್ಗೆ ಕವಿಗಳು ಹೆಚ್ಚು ಆಸಕ್ತಿ ತೋರಿಲ್ಲ ಎಂದು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಚುಟುಕು ಸಾಹಿತಿ ಹಾ.ತಿ. ಜಯಪ್ರಕಾಶ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
- ಹೆಚ್.ಜೆ. ರಾಕೇಶ್