ಸೋಮವಾರಪೇಟೆ, ಅ. ೪: ಪಟ್ಟಣದ ಬಸವೇಶ್ವರ ರಸ್ತೆ ನಿವಾಸಿ ಕಾಫಿ ಬೆಳೆಗಾರ ಎ.ಪಿ. ಶಂಕರಪ್ಪ ಅವರ ಪತ್ನಿ ಪಿ. ಶಾರದ ಶಂಕರಪ್ಪ ಅವರು ಕಳೆದ ೬೪ ವರ್ಷಗಳಿಂದ ನವರಾತ್ರಿ ಉತ್ಸವವನ್ನು ೯ ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಆಚರಿಸುವ ಮೂಲಕ ಸಂಸ್ಕೃತಿಯ ಉಳಿವಿಗೆ ತಮ್ಮದೇ ಸೇವೆ ಸಲ್ಲಿಸುತ್ತಿದ್ದಾರೆ.
ಮೂಲತಃ ಬೆಂಗಳೂರಿ ನವರಾದ ಇವರು ಕಳೆದ ೬೪ ವರ್ಷಗಳ ಹಿಂದೆ ಮದುವೆಯಾಗಿ ಸೋಮವಾರಪೇಟೆಗೆ ಬಂದಿದ್ದಾರೆ. ಬಂದ ವರುಷದಲ್ಲಿಯೇ ನವರಾತ್ರಿ ಹಬ್ಬವನ್ನು ಚಿಕ್ಕದಾಗಿ ಆಚರಿಸಲು ಪ್ರಾರಂಭಿಸಿದ್ದರು. ಇಂದು ಸಾವಿರಾರು ಗೊಂಬೆಗಳನ್ನಿಟ್ಟು ನವರಾತ್ರಿ ಪೂಜೆ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಎಲ್ಲರೂ ವಿವಿಧ ಗೊಂಬೆಗಳನ್ನಿರಿಸಿ ಪೂಜೆ ಮಾಡುವುದು ವಾಡಿಕೆ. ಆದರೆ, ಇಲ್ಲಿ ನವದುರ್ಗೆಯರಾದ ಶ್ರೀ ಶೈಲಾಪುತ್ರಿ ದೇವಿ, ಶ್ರೀ ಬ್ರಹ್ಮಚಾರಿಣಿ ದೇವಿ, ಶ್ರೀ ಕುಷ್ಮಾಂಡಾ ದೇವಿ, ಶ್ರೀ ಸ್ಕಂದ ಮಾತೆ, ಶ್ರೀ ಕಾತ್ಯಾಯಿನಿ ದೇವಿ, ಶ್ರೀ ಕಾಲಾರಾತ್ರಿ ದೇವಿ, ಶ್ರೀ ಮಹಾಗೌರಿ ದೇವಿ, ಶ್ರೀ ಸಿದ್ಧಿಧಾತ್ರಿ ದೇವಿ, ಶ್ರೀ ಆಧಿಶಕ್ತಿ ದೇವಿಯ ಗೊಂಬೆಗಳನ್ನಿರಿಸಿ, ಸೀರೆಯನ್ನುಡಿಸಿ, ಆಭರಣಗಳಿಂದ ಸಿಂಗರಿಸಿ ಪೂಜೆ ನಡೆಸಲಾಗುತ್ತಿದೆ.
ದಿನಂಪ್ರತಿ ವಿವಿಧ ತಿಂಡಿಗಳನ್ನು ಮಾಡಿ, ಬೆಳಿಗ್ಗೆ ಮತ್ತು ಸಂಜೆ ಪೂಜೆ, ಧ್ಯಾನ ನಡೆಸಲಾಗುತ್ತಿದೆ. ಸುಮಂಗಲೆೆಯರನ್ನು ಕರೆದು ಫಲ ತಾಂಬೂಲವನ್ನು ನೀಡಲಾಗುತ್ತಿದೆ.
ಅಲ್ಲದೆ, ವಿವಿಧ ರಾಜ್ಯಗಳಿಂದ ತಂದಿರುವ ಖಡ್ಗ, ಸೇರಿದಂತೆ ವಿವಿಧ ಪರಿಕರಗಳನ್ನು ಇಟ್ಟು ಪೂಜಿಸಲಾಗುತ್ತಿದೆ. ಗೊಂಬೆಗಳನ್ನು ಮಣ್ಣಿನ ಮಡಿಕೆಯಲ್ಲಿ ಅಕ್ಕಿ ಹಾಕಿ, ಕಳಸ ಮಾಡಿಕೊಂಡು ಅವುಗಳಿಗೆ ಮುಖವಾಡ ಹಾಕಲಾಗುತ್ತದೆ. ಎಲ್ಲ ಗೊಂಬೆಗಳಿಗೂ ಹೊಸ ಸೀರೆಯನ್ನು ಉಡಿಸಿ ಅಲಂಕಾರ ಮಾಡಿರುವುದು ವಿಶೇಷವಾಗಿದೆ.
ನವರಾತ್ರಿ ಪೂಜೆ ಬಗ್ಗೆ ಮಾತನಾಡಿದ ಶಾರದ ಅವರು, ಮದುವೆಯಾಗಿ ಇಲ್ಲಿ ಬಂದ ವರ್ಷದಲ್ಲಿ ಚಿಕ್ಕದಾಗಿ ಪೂಜೆಯನ್ನು ಪ್ರಾರಂಭ ಮಾಡಿದೆ.
ನಂತರ ದೊಡ್ಡ ಮಟ್ಟಕ್ಕೆ ಬಂದಿದೆ. ನಮ್ಮ ಸಂಪ್ರದಾಯವನ್ನು ಉಳಿಸಿ, ಬೆಳೆಸುವುದು ಮತ್ತು ಇದರ ಬಗ್ಗೆ ನಾಲ್ಕಾರು ಜನರಿಗೆ ತಿಳಿಸುವ ಉದ್ದೇಶದಿಂದ ಪೂಜೆ ಮಾಡಲಾಗುತ್ತದೆ.
ದಶಮಿಯಂದು ನಮ್ಮ ತೋಟದಲ್ಲಿರುವ ಸುಮಾರು ೨೦೦ ವರ್ಷಗಳಷ್ಟು ಹಳೆಯದಾದ ಬನ್ನಿ ಮರದಿಂದ ಬನ್ನಿಯನ್ನು ತಂದು ಪೂಜೆ ಮಾಡಿ, ಗೊಂಬೆಗಳನ್ನು ತೆಗೆದು ಪೆಟ್ಟಿಗೆಯಲ್ಲಿ ಇರಿಸುತ್ತೇವೆ ಎಂದು ತಿಳಿಸಿದರು.