ಸೋಮವಾರಪೇಟೆ, ಅ.೪: ಸೋಮವಾರಪೇಟೆ ಪಟ್ಟಣಕ್ಕೆ ಕಾಣುವಂತಿರುವ ಜೂನಿಯರ್ ಕಾಲೇಜು ವ್ಯಾಪ್ತಿಯಲ್ಲಿ ಬರೋಬ್ಬರಿ ೪ ಕೋಟಿಗೂ ಅಧಿಕ ವೆಚ್ಚದ ೨ ಬೃಹತ್ ಯೋಜನೆಗಳು ಅಪೂರ್ಣಗೊಂಡಿವೆ. ಇದರಲ್ಲಿ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿ ಕಳೆದ ೯ ವರ್ಷಗಳಿಂದಲೂ ಕುಂಟುತ್ತಾ ಸಾಗುತ್ತಿದ್ದರೆ, ಶತಮಾನೋತ್ಸವ ಭವನವಂತೂ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಂತಾಗಿದೆ.

ಈ ಎರಡು ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಆಡಳಿತ ವರ್ಗ ಹಾಗೂ ಅಧಿಕಾರಿ ವರ್ಗ ನಿರಾಸಕ್ತಿ ತೋರಿದ್ದು, ಸಾರ್ವಜನಿಕರ ಹೋರಾಟವಂತೂ ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದೆ!

ಹಿಂದುಳಿಯುತ್ತಿರುವ ತಾಲೂಕುಗಳ ಪಟ್ಟಿಯಲ್ಲಿ ಸೋಮವಾರಪೇಟೆ ತಾಲೂಕು ಪ್ರಥಮ ಸ್ಥಾನದಲ್ಲಿದೆ ಎಂದು ಬಿಜೆಪಿಯನ್ನು ಹೊರತುಪಡಿಸಿ ಉಳಿದ ಪಕ್ಷಗಳ ಕಾರ್ಯಕರ್ತರು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ವಿರೋಧ ಪಕ್ಷದ ಜವಾಬ್ದಾರಿಯನ್ನು ಅರಿತು ಹೊಣೆಗಾರಿಕೆ ನಿರ್ವಹಿಸುವಲ್ಲಿ ವಿಪಕ್ಷಗಳು ವಿಫಲವಾಗಿವೆ.

(ಮೊದಲ ಪುಟದಿಂದ) ಪರಿಣಾಮ ಇಂತಹ ಬೃಹತ್ ಯೋಜನೆಗಳೊಂದಿಗೆ ಇನ್ನೂ ಅನೇಕ ಅಭಿವೃದ್ಧಿ ಕಾಮಗಾರಿಗಳು ನೆನೆಗುದಿಗೆ ಬೀಳುವಂತಾಗಿದೆ.

ಕುAಟುತ್ತಿರುವ ಟರ್ಫ್ ಕಾಮಗಾರಿ: ಕಳೆದ ೨೦೧೩ರಲ್ಲಿ ಭೂಮಿಪೂಜೆ ನೆರವೇರಿ ನಂತರದ ದಿನಗಳಲ್ಲಿ ಹಲವಷ್ಟು ಅಡೆತಡೆಗಳನ್ನು ಕಂಡ ಸೋಮವಾರಪೇಟೆ ಜೂನಿಯರ್ ಕಾಲೇಜು ಮೈದಾನದ ಸಿಂಥೆಟಿಕ್ ಹಾಕಿ ಟರ್ಫ್ ಕಾಮಗಾರಿ, ಆಮೆಗತಿಯನ್ನೂ ನಾಚಿಸುತ್ತಿದೆ!

ಭೂಮಿಪೂಜೆ ನೆರವೇರಿ ಬರೋಬ್ಬರಿ ೯ ವರ್ಷಗಳಾದರೂ ಇಂದಿಗೂ ಟರ್ಫ್ ಕಾಮಗಾರಿ ಪೂರ್ಣಗೊಳ್ಳದೇ ಇರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಕಳೆದ ೨ ವರ್ಷಗಳ ಹಿಂದಷ್ಟೇ ಕಾಮಗಾರಿಗೆ ಮರುಜೀವ ನೀಡಲಾಗಿದೆ. ಗ್ರೇಟ್ ಸ್ಪೋರ್ಟ್ಸ್ ಇನ್‌ಫ್ರಾ ಪ್ರೆöÊವೇಟ್ ಲಿಮಿಟೆಡ್ ಸಂಸ್ಥೆಯು ತರಾತುರಿಯಲ್ಲಿ ಟರ್ಫ್ ಮ್ಯಾಟ್ ಅಳವಡಿಸಿದ್ದು, ಇತರ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೇ ರೂ. ೩ ಕೋಟಿಯಷ್ಟು ಹಣ ಡ್ರಾ ಮಾಡಿಕೊಂಡಿದೆ.

ಇನ್ನೂ ನಿರ್ಮಾಣದ ಹಂತದಲ್ಲಿಯೇ ಇರುವ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ಕಾಮಗಾರಿಗೆ ಫೆಡರೇಷನ್ ಆಫ್ ಇಂಟರ್‌ನ್ಯಾಷನಲ್ ಹಾಕಿ ಸಂಸ್ಥೆಯಿAದ ಗುಣಮಟ್ಟ ಖಾತ್ರಿ ಹಾಗೂ ಉತ್ತಮ ಗುಣಮಟ್ಟದ ಯೋಗ್ಯತಾ ಪತ್ರವನ್ನೂ ನೀಡಲಾಗಿದ್ದು, ಅಪೂರ್ಣ ಕಾಮಗಾರಿಗೆ ಯೋಗ್ಯತಾ ಪತ್ರ ನೀಡಿರುವುದರ ಹಿಂದೆ ಬಿಲ್ ಮಾಡಿಸಿಕೊಳ್ಳುವ ಹುನ್ನಾರ ಅಡಗಿತ್ತೇ? ಎಂಬ ಸಂಶಯ ಮೂಡುವಂತಾಗಿದೆ.

ಅಪೂರ್ಣ ಕಾಮಗಾರಿ: ಬಿಲ್ ಮಾಡಿಸುವ ಸಲುವಾಗಿ ಮೈದಾನಕ್ಕೆ ಟರ್ಫ್ ಮ್ಯಾಟ್ ಅಳವಡಿಸಿರುವುದನ್ನು ಬಿಟ್ಟರೆ ಇತರ ಯಾವುದೇ ಕಾಮಗಾರಿಗಳು ಪೂರ್ಣಗೊಂಡಿಲ್ಲ. ವಾಟರ್ ಟ್ಯಾಂಕ್ ನಿರ್ಮಾಣಗೊಂಡಿದ್ದರೂ ನೀರು ಸರಬರಾಜು ಆಗುತ್ತಿಲ್ಲ. ಬೋರ್‌ವೆಲ್ ಕೊರೆಸಲಾಗಿದ್ದರೂ ಮೋಟಾರ್ ಅಳವಡಿಸಿಲ್ಲ. ವಿದ್ಯುತ್ ಸಂಪರ್ಕ, ಟ್ರಾನ್ಸ್ಫಾರ್ಮರ್ ಒದಗಿಸದೇ ಇದ್ದರೂ ಮ್ಯಾಟ್ ಅಳವಡಿಸಲಾಗಿದೆ.

ಟರ್ಫ್ ಮ್ಯಾಟ್‌ಗೆ ನೀರು ಸಿಂಪಡಿಸಲು ಸಣ್ಣ ಜೆಟ್‌ಗಳನ್ನು ಅಳವಡಿಸಿದ್ದು, ಇದು ಪ್ರಯೋಜನಕ್ಕೆ ಬರುತ್ತಿಲ್ಲ. ಶೇ.೪೦ರಷ್ಟು ಕಾಮಗಾರಿಗಳು ಇನ್ನೂ ಬಾಕಿ ಉಳಿದಿದ್ದರೂ ಎಫ್‌ಐಹೆಚ್‌ನಿಂದ ದೃಢೀಕರಣ ಪತ್ರ ನೀಡಿರುವುದು ಆಡಳಿತ ವರ್ಗದ ಪಾರದರ್ಶಕತೆಯನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ.

೨೦೧೩ರಲ್ಲಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭ ಸೋಮವಾರಪೇಟೆಯ ಜೂನಿಯರ್ ಕಾಲೇಜು ಮೈದಾನದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯಿಂದ ರೂ. ೩.೪೦ ಕೋಟಿ ಅನುದಾನದಡಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಸಿಂಥೆಟಿಕ್ ಹಾಕಿ ಟರ್ಫ್ ಮೈದಾನ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಗಿತ್ತು.

ಕಳೆದ ತಾ. ೧೪.೦೩.೨೦೧೩ರಂದು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಂದಿನ ನಿರ್ದೇಶಕ ಬಲದೇವಕೃಷ್ಣ ಅವರ ಉಪಸ್ಥಿತಿಯಲ್ಲಿ ಟರ್ಫ್ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಉದ್ದೇಶಿತ ಕಾಮಗಾರಿಗೆ ಅನುದಾನ ಸಾಲದು ಎಂಬ ಅಭಿಪ್ರಾಯ ಕೇಳಿಬಂದ ಹಿನ್ನೆಲೆ, ಸ್ಥಳೀಯ ಹಾಕಿ ಪ್ರೇಮಿಗಳು ಶಾಸಕ ಅಪ್ಪಚ್ಚುರಂಜನ್ ಅವರ ಮೇಲೆ ನಿರಂತರ ಒತ್ತಡ ಹೇರಿದ ಪರಿಣಾಮ ಈ ಹಿಂದಿನ ಎಸ್ಟಿಮೇಟ್‌ಗಿಂತಲೂ ೭೫ ಲಕ್ಷ ಹೆಚ್ಚು ಅನುದಾನ ಒದಗಿಸಿ ಒಟ್ಟು ೪.೧೫ ಕೋಟಿ ವೆಚ್ಚದಲ್ಲಿ ಟರ್ಫ್ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿತ್ತು.

ಮೈದಾನದ ಮೇಲುಸ್ತುವಾರಿಗೆ ಶಾಸಕರ ಸಲಹೆಯಂತೆ ಸಮಿತಿ ರಚಿಸಲಾಗಿದ್ದು, ಸಮಿತಿಯ ಪ್ರಮುಖರು ಕಾಮಗಾರಿಯ ಬಗ್ಗೆ ಆಗಾಗ್ಗೆ ಗಮನ ಹರಿಸುತ್ತಿದ್ದರು. ಇದೀಗ ಸಮಿತಿಯಿರಲಿ; ಸ್ವತಃ ಶಾಸಕರ ಮಾತಿಗೂ ಇಲಾಖೆಯ ಅಭಿಯಂತರ, ಕಾಮಗಾರಿ ಗುತ್ತಿಗೆ ಪಡೆದಿರುವ ಗುತ್ತಿಗೆದಾರ ಕಂಪೆನಿ ಬೆಲೆ ನೀಡುತ್ತಿಲ್ಲ.

ಈಗಾಗಲೇ ಅಳವಡಿಸಿರುವ ಟರ್ಫ್ ಅಲ್ಲಲ್ಲಿ ಕಿತ್ತುಬರುತ್ತಿದೆ. ಬಿಸಿಲಿಗೆ ಒಣಗಿ ತನ್ನ ಸತ್ವವನ್ನು ಕಳೆದುಕೊಳ್ಳುತ್ತಿದೆ. ಟರ್ಫ್ ಕಾಮಗಾರಿ ಪೂರ್ಣಗೊಳ್ಳುವಷ್ಟರಲ್ಲಿ ಮ್ಯಾಟ್- ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಲಿದೆ ಎಂದು ಕ್ರೀಡಾಪ್ರೇಮಿಗಳು ಅಭಿಪ್ರಾಯಿಸಿದ್ದಾರೆ.

ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಮಾಜೀ ಸಚಿವರ ಮಾತನ್ನೇ ಅಧಿಕಾರಿಗಳು ಕೇಳುತ್ತಿಲ್ಲ. ಇನ್ನು ನಮ್ಮ ಮಾತು ಕೇಳುತ್ತಾರಾ? ಎಂದು ಕ್ರೀಡಾ ಪ್ರೇಮಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ!

ಸ್ಥಗಿತಗೊಂಡ ಶತಮಾನೋತ್ಸವ ಭವನ: ಇಲ್ಲಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಕಟ್ಟಡಕ್ಕೆ ೧೦೦ ವರ್ಷಗಳು ತುಂಬಿದ ಸವಿನೆನಪಿಗೆ ಬೃಹತ್ ಭವನ ನಿರ್ಮಿಸುವ ಯೋಜನೆಯೊಂದು ೨೦೦೭ರಲ್ಲಿ ಸಿದ್ಧಗೊಂಡು, ೧೫ ವರ್ಷ ಕಳೆದರೂ ಪೂರ್ಣಗೊಂಡಿಲ್ಲ.

೨೦೦೭ರಲ್ಲಿ ಎಂಎಲ್‌ಎ ಆಗಿದ್ದ ಬಿ.ಎ.ಜೀವಿಜಯ ಅವರು ಭವನ ನಿರ್ಮಾಣ ಸಮಿತಿಯ ಕಾರ್ಯಾಧ್ಯಕ್ಷರೂ ಆಗಿದ್ದರಿಂದ ತಮ್ಮ ಶಾಸಕರ ನಿಧಿಯಿಂದ

ರೂ. ೧೮ ಲಕ್ಷ, ಮಲೆನಾಡು ಅಭಿವೃದ್ಧಿ ಮಂಡಳಿಯಿAದ ವಿವಿಧ ಹಂತಗಳಲ್ಲಿ ರೂ. ೧೫ ಲಕ್ಷ, ರಾಜ್ಯ ಸಭಾ ಸದಸ್ಯ ರೆಹಮಾನ್‌ಖಾನ್ ಅವರು ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ನೀಡಿದ ರೂ ೪ ಲಕ್ಷ, ಕೇಂದ್ರ ಸಚಿವ ಎಂ.ವಿ.ರಾಜಶೇಖರನ್ ತಮ್ಮ ಕ್ಷೇತ್ರಾಭಿವೃದ್ದಿ ನಿಧಿಯಿಂದ ರೂ. ೨.೫ ಲಕ್ಷ ಹಾಗೂ ವಿಧಾನ ಪರಿಷತ್ ಸದಸ್ಯೆ ಮೋಟಮ್ಮರವರು ತಮ್ಮ ಕ್ಷೇತ್ರಾಭಿವೃದ್ಧಿ ನಿಧಿಯಿಂದ ರೂ ೩ ಲಕ್ಷ ಒದಗಿಸಿದ್ದರಿಂದ ಭವನ ನಿರ್ಮಾಣ ಶೇ.೪೦ರಷ್ಟು ಪೂರ್ಣಗೊಂಡಿದೆ.

ಇದೀಗ ೧೫ ವರ್ಷಗಳಾಗಿದ್ದು, ಶತಮಾನೋತ್ಸವ ಭವನ ಪಾಳುಬಿದ್ದ ಕಟ್ಟಡವಾಗಿದ್ದು, ಅಲೆಮಾರಿಗಳು, ಜಾನುವಾರುಗಳ ಆಶ್ರಯತಾಣವಾಗಿ ಪರಿಣಮಿಸಿದೆ. ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯೂ ನಿದ್ರಾವಸ್ಥೆಯಲ್ಲಿದ್ದು, ಇದನ್ನು ಎಚ್ಚರಿಸುವ ಕೆಲಸವನ್ನು ಯಾರೂ ಮಾಡುತ್ತಿಲ್ಲ!

ಈ ನಡುವೆ ೧೪ ವರ್ಷಗಳ ಬಳಿಕ ಶಾಸಕ ಅಪ್ಪಚ್ಚುರಂಜನ್ ಅವರು ಫೆಬ್ರವರಿ ೨೦೨೨ರ ತಾ. ೧೦ರಂದು ಭವನ ಕಟ್ಟಡಕ್ಕೆ ಭೇಟಿ ನೀಡಿದ್ದು, ವನವಾಸದಲ್ಲಿರುವ ಶತಮಾನೋತ್ಸವ ಭವನವನ್ನು ವೀಕ್ಷಣೆ ಮಾಡಿದ್ದಾರೆ.

ಈ ಸಂದರ್ಭ ಸಮಿತಿಯ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ಶಾಸಕರು, ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿ, ಶತಮಾನೋತ್ಸವ ಭವನವನ್ನು ಮಾಜೀ ಸಚಿವ ಜೀವಿಜಯ ಅವರ ನೇತೃತ್ವದಲ್ಲಿ ಪ್ರಾರಂಭಿಸಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಪೂರ್ಣಗೊಳ್ಳಲಿಲ್ಲ. ಸಮಿತಿಯ ಪ್ರಮುಖರು ಭವನ ಪೂರ್ಣಗೊಳಿಸುವ ಬಗ್ಗೆ ಮನವಿ ಸಲ್ಲಿಸಿದ್ದು, ಶೀಘ್ರದಲ್ಲೇ ಜೀವಿಜಯ ಅವರೊಂದಿಗೆ ಸಭೆ ನಡೆಸಿ, ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಭರವಸೆ ಇತ್ತಿದ್ದರು.

ಸದ್ಯದ ಮಟ್ಟಿಗೆ ಭವನವನ್ನು ಸಾರ್ವಜನಿಕ ಉಪಯೋಗಕ್ಕೆ ಒದಗಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಗುವುದು. ಪಿಲ್ಲರ್‌ಗಳನ್ನು ಅಳವಡಿಸಿ ಮೇಲ್ಭಾಗದಲ್ಲಿ ಶೀಟ್ ಅಳವಡಿಸಲಾಗುವುದು. ಅನುದಾನದ ಮೂಲ ನೋಡಿಕೊಂಡು ಹೆಚ್ಚುವರಿ ಕಾಮಗಾರಿ ಕೈಗೊಳ್ಳಲಾಗುವುದು. ಭವನದ ಬಾಗಿಲು, ಕಿಟಕಿಗಳ ಅವ್ಯವಸ್ಥೆ ಸರಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದ್ದರು.

೨೦೦೭ರಲ್ಲಿ ೧.೨೫ ಕೋಟಿ ವೆಚ್ಚದ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಲಾಗಿತ್ತು. ಇದೀಗ ಯೋಜನಾ ವೆಚ್ಚ ಅಧಿಕವಾಗಲಿದ್ದು, ಭವನದ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಟ ೨.೫೦ ಕೋಟಿ ಹಣದ ಅಗತ್ಯವಿದೆ ಎಂದು ಸಮಿತಿ ಪ್ರಮುಖರು ಶಾಸಕರ ಗಮನ ಸೆಳೆದಿದ್ದರು. ಪಟ್ಟಣ ಪಂಚಾಯಿತಿ ಮೂಲಕ ೧ ಕೋಟಿ ಅನುದಾನ ಒದಗಿಸುವ ಬಗ್ಗೆ ಪ್ರಯತ್ನ ನಡೆಸಲಾಗುವುದು ಎಂದು ಶಾಸಕ ರಂಜನ್ ಭರವಸೆಯನ್ನೂ ನೀಡಿದ್ದರು.

ಶತಮಾನೋತ್ಸವ ಭವನ ನಿರ್ಮಾಣ ಸಮಿತಿಯ ಗೌರವಾಧ್ಯಕ್ಷರನ್ನಾಗಿ ಜೀವಿಜಯ ಅವರನ್ನು ಮುಂದುವರೆಸುವುದು, ಶಾಸಕ ಅಪ್ಪಚ್ಚುರಂಜನ್ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿ, ಉಳಿದಂತೆ ಕ್ರಿಯಾಶೀಲ ಸದಸ್ಯರನ್ನು ಸಮಿತಿಗೆ ಸೇರಿಸಿಕೊಂಡು ಭವನ ನಿರ್ಮಾಣಕ್ಕೆ ಮುಂದಡಿಯಿಡುವ ಬಗ್ಗೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.

ಅತ್ತ ಶಾಸಕರು ತೆರಳಿದ ನಂತರ ಇತ್ತ ಸಮಿತಿಯವರು ಸುಮ್ಮನಾದರು. ಪರಿಣಾಮ ೭ ತಿಂಗಳಾದರೂ ಈವರೆಗೆ ಕಾಮಗಾರಿ ಪ್ರಾರಂಭಗೊAಡ ಕುರುಹು ಕಾಣುತ್ತಿಲ್ಲ. ಒಟ್ಟಾರೆ ಸೋಮವಾರಪೇಟೆ ಪಟ್ಟಣದಿಂದ ಕೇವಲ ೫೦೦ ಮೀಟರ್ ಅಂತರದಲ್ಲಿ ಎರಡು ಬೃಹತ್ ಯೋಜನೆಗಳು ಹಳ್ಳ ಹಿಡಿಯುತ್ತಿದ್ದರೂ ವಿರೋಧ ಪಕ್ಷಗಳು, ಸಾರ್ವಜನಿಕರು ನಿದ್ರಾವಸ್ಥೆಯಲ್ಲಿದ್ದಾರೆ.

- ವಿಜಯ್ ಹಾನಗಲ್