ಕೂಡಿಗೆ, ಅ. ೪: ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಬಸವನಹಳ್ಳಿ ಗ್ರಾಮದ ಅರಣ್ಯ ಹಕ್ಕು ಸಮಿತಿಯ ಗ್ರಾಮಸಭೆ ಸಮಿತಿ ಅಧ್ಯಕ್ಷ ಗೋವಿಂದಪ್ಪ ಅವರ ಅಧ್ಯಕ್ಷತೆಯಲ್ಲಿ ಗ್ರಾಮದ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು. ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ವಾಸವಿರುವ ನಿವಾಸಿಗಳು ತಮ್ಮ ಜಾಗಗಳಿಗೆ ಖಾತೆ ಪಡೆದುಕೊಳ್ಳುವ ಸಂಬAಧ ಸಲ್ಲಿಸಿದ ಅರ್ಜಿಗಳ ಬಗ್ಗೆ ಚರ್ಚೆ ನಡೆಯಿತು.
ಸರಕಾರದ ಸೂಚನೆಯಂತೆ ವಿಭಾಗೀಯ ಮಟ್ಟಕ್ಕೆ ಸಲ್ಲಿಸಿದ ೧೫೮ ಅರ್ಜಿದಾರರ ಪೈಕಿ ಸೂಕ್ತ ದಾಖಲಾತಿಗಳನ್ನು ಸಲ್ಲಿಸಿದ ೯ ಮಂದಿ ಪರಿಶಿಷ್ಟ ಪಂಗಡದವರಿಗೆ ಹಕ್ಕು ಪತ್ರ ಮಂಜೂರಾಗಿರುವ ಬಗ್ಗೆ ಸಮಿತಿ ಕಾರ್ಯದರ್ಶಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸುಮೇಶ್ ಸಭೆಗೆ ಮಾಹಿತಿ ಒದಗಿಸಿದರು.
ಪ.ಪಂಗಡ, ಪ.ಜಾತಿ ಮತ್ತು ಸಾಮಾನ್ಯ ವರ್ಗದವರಿಗೆ ಪ್ರತ್ಯೇಕವಾಗಿ ನಿಗದಿಪಡಿಸಿರುವ ಮಾನದಂಡಗಳ ಅನುಗುಣವಾಗಿ ಒದಗಿಸಬೇಕಾದ ದಾಖಲೆಗಳ ವಿವರಗಳನ್ನು ಅವರು ಸಭೆಗೆ ಮಂಡಿಸಿದರು. ಸೂಕ್ತ ದಾಖಲಾತಿ, ಸಾಕ್ಷಾö್ಯಧಾರಗಳ ಮೇರೆಗೆ ಆಯ್ಕೆಯಾದವರಿಗೆ ಶೀಘ್ರದಲ್ಲಿ ಹಕ್ಕುಪತ್ರ ವಿತರಿಸಲಾಗುವುದು ಎಂದು ತಿಳಿಸಿದರು. ಅಗತ್ಯ ದಾಖಲೆಗಳ ಪೈಕಿ ಪೂರ್ವಜರಿಗೆ ಸೇರಿದ ೧೯೩೦ರ ಇಸವಿಯ ಹಿಂದಿನ ದಾಖಲಾತಿ ಗಳನ್ನು ಒದಗಿಸಲು ಕಷ್ಟವಾಗಿದ್ದು ಇದಕ್ಕೆ ಪರ್ಯಾಯ ಮಾರ್ಗ ಸೂಚಿಸುವಂತೆ ಕೆಲವು ಗ್ರಾಮಸ್ಥರು ಅಸಮಾಧಾನ ಹೊರಹಾಕಿದರು. ಇರುವಷ್ಟು ದಾಖಲೆಗಳನ್ನು ಒದಗಿಸಲಾಗಿದೆ. ಆದರೂ ಕಳೆದ ಮೂರು ದಶಕಗಳ ಬೇಡಿಕೆ ಈಡೇರಿಲ್ಲ ಎಂದು ಕೆಲವು ಗ್ರಾಮಸ್ಥರು ಆಕ್ರೋಷ ವ್ಯಕ್ತಪಡಿಸಿದರು. ೧೫೮ ಅರ್ಜಿಗಳನ್ನು ವಿಭಾಗೀಯ ಮಟ್ಟಕ್ಕೆ ಪಂಚಾಯಿತಿ ಯಿಂದ ಅನುಮೋದಿಸಿ ಕಳುಹಿಸಿ ಕೊಡಲಾಗಿದೆ. ಆದರೆ ಸಮರ್ಪಕ ದಾಖಲಾತಿಗಳು ಇಲ್ಲದೆ ಇರುವ ಕಾರಣ ಉಳಿದ ಮಂದಿಯ ಅರ್ಜಿಗಳು ಮಾನ್ಯವಾಗದಿರುವ ಬಗ್ಗೆ ಅಭಿವೃದ್ಧಿ ಅಧಿಕಾರಿ ಸಭೆಯ ಗಮನಕ್ಕೆ ತಂದರು.
ಈ ಸಂದರ್ಭ ಮಾತನಾಡಿದ ಗ್ರಾ.ಪಂ. ಅಧ್ಯಕ್ಷ ಬಿ.ಕೆ. ಚೆಲುವರಾಜು, ಗ್ರಾಮ ಪಂಚಾಯಿತಿ ಮೂಲಕ ಗ್ರಾಮಕ್ಕೆ ಬೇಕಾದ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ. ಹಕ್ಕುಪತ್ರ ಒದಗಿಸುವಲ್ಲಿ ಕೂಡ ಗ್ರಾ.ಪಂ. ಆಡಳಿತ ಮತ್ತು ಅಧಿಕಾರಿ ವರ್ಗ ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಶೀಘ್ರದಲ್ಲೇ ಗ್ರಾಮಸ್ಥರ ಬೇಡಿಕೆ ಈಡೇರಲಿದೆ ಎಂದು ತಿಳಿಸಿದರು.
ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಗ್ರಾ.ಪಂ. ಮಾಜಿ ಸದಸ್ಯ ಎಂ.ಎA. ಪ್ರಕಾಶ್ ಮಾತನಾಡಿ, ಗೊಂದಿಬಸವನಹಳ್ಳಿ ಸರ್ವೆ ನಂ. ೧/೧ರಲ್ಲಿ ೨೫೦-೩೦೦ ಕುಟುಂಬಗಳು ವಾಸವಾಗಿವೆ. ಈ ಪ್ರದೇಶ ಮೀಸಲು ಅರಣ್ಯಕ್ಕೆ ಸಂಬAಧಿಸಿದ್ದು ಎನ್ನಲಾಗಿ ಹಕ್ಕುಪತ್ರಕ್ಕಾಗಿ ಹಲವು ದಶಕಗಳಿಂದ ಶ್ರಮಿಸಲಾಗುತ್ತಿದೆ. ಇದಕ್ಕಾಗಿ ಗ್ರಾಮ ಅರಣ್ಯ ಹಕ್ಕು ಸಮಿತಿ ರಚಿಸಿಕೊಂಡು ಹೋರಾಡಲಾಗುತ್ತಿದ್ದು ಕೆಲವೊಂದು ದಾಖಲಾತಿಗಳ ಕೊರತೆಯಿಂದ ೧೪೯ ಮಂದಿಗೆ ಹಕ್ಕುಪತ್ರ ನಿರಾಕರಿಸಲಾಗಿದ್ದು ಶೀಘ್ರದಲ್ಲೇ ಇದನ್ನು ಸರಿಪಡಿಸಿ ಕೊಂಡು ವಿಭಾಗಾಧಿಕಾರಿಗಳನ್ನು ಭೇಟಿಯಾಗುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಗೊಂದಿಬಸವನಹಳ್ಳಿ ವ್ಯಾಪ್ತಿಯ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಬಿ. ಜಗದೀಶ್, ಕಾಂಜನಾ, ಮುರುಳಿ, ಮಲ್ಲಿಗೆ, ಮಣಿ, ಆಸಿಫ್, ಅರಣ್ಯ ಹಕ್ಕು ಸಮಿತಿಯ ಸದಸ್ಯರಾದ ಪ್ರಕಾಶ್ ಜಯಕುಮಾರ್, ಮೀನಾ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿ ವರ್ಗದವರು ಹಾಜರಿದ್ದರು.