ಮಡಿಕೇರಿ: ಜಿಲ್ಲಾಮಟ್ಟದ ಪ್ರಾಥಮಿಕ ವಿಭಾಗದ ಹಾಕಿ ಪಂದ್ಯಾವಳಿಯು ಕೂಡಿಗೆ ಸಾಯಿ ಮೈದಾನದಲ್ಲಿ ನಡೆಯಿತು. ಟಿ. ಶೆಟ್ಟಿಗೇರಿ ರೂಟ್ಸ್ ಶಾಲೆ ಚಾಂಪಿಯನ್, ಮಡಿಕೇರಿ ಡಿವೈಇಎಸ್ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. ಸೆಮಿಫೈನಲ್ ಹಂತದಲ್ಲಿ ಟಿ. ಶೆಟ್ಟಿಗೇರಿಯ ರೂಟ್ಸ್ ಶಾಲೆಯ ವಿದ್ಯಾರ್ಥಿನಿಯರು ಸೋಮವಾರಪೇಟೆಯ ಓಎಲ್‌ವಿ ಪಬ್ಲಿಕ್ ಶಾಲಾ ವಿದ್ಯಾರ್ಥಿನಿಯರನ್ನು ೩-೦ ಅಂತರದ ಗೋಲುಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿದರು. ಈ ಪಂದ್ಯದಲ್ಲಿ ರೂಟ್ಸ್ ಶಾಲೆಯ ವಿದ್ಯಾರ್ಥಿನಿಯಾದ ಎಸ್.ಪಿ. ದೇಚಮ್ಮ ೨ ಗೋಲು ಮತ್ತು ಹಿತ ಎಂ.ಕೆ. ೧ ಗೋಲನ್ನು ಗಳಿಸಿದ್ದರು. ಮಧ್ಯಾಹ್ನದ ನಂತರ ನಡೆದ ಅಂತಿಮ ಸುತ್ತಿನ ಪಂದ್ಯದಲ್ಲಿ ರೂಟ್ಸ್ ವಿದ್ಯಾರ್ಥಿನಿಯರು ಮಡಿಕೇರಿಯ ಡಿವೈಇಎಸ್ ಶಾಲೆಯ ವಿದ್ಯಾರ್ಥಿನಿಯರನ್ನು ೩-೨ ಗೋಲುಗಳಿಂದ ಸೋಲಿಸಿ ಜಯ ಸಾಧಿಸಿದರು. ಈ ಹಂತದಲ್ಲಿ ೬ನೇ ತರಗತಿಯ ವಿದ್ಯಾರ್ಥಿನಿಯಾದ ನೇನಾ ಕರುಂಬಯ್ಯ, ಜಶ್ಮಿತಾ ಟಿ.ಸಿ., ಜಾಗೃತಿ ಕರುಂಬಯ್ಯ ತಲಾ ಒಂದು ಗೋಲು ಹಾಕಿದರು.ಸಂಪಾಜೆ: ಸಂಪಾಜೆ ಪ್ರೌಢಶಾಲಾ ಬಾಲಕಿಯರು ಬಸವನಹಳ್ಳಿಯ ಮೊರಾರ್ಜಿ ಶಾಲೆಯ ಮೈದಾನದಲ್ಲಿ ಜರುಗಿದ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಈ ಸಂದರ್ಭ ವಿಜೇತ ಮಕ್ಕಳೊಂದಿಗೆ ಕವಿತ, ಕುಮಾರ್, ಸೋಮಶೇಖರ್ ಜಿಲ್ಲಾಧ್ಯಕ್ಷ, ಚೇತನ್, ಮಂಜುನಾಥ್ ಹಾಗೂ ಕುಶಾಲಪ್ಪ ಕೆ. ದೈಹಿಕ ಶಿಕ್ಷಣ ಶಿಕ್ಷಕರು ಇದ್ದರು.ಮಡಿಕೇರಿ: ಕೊಡಗು ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಾರ್ಷಿಕ ಕ್ರೀಡಾಕೂಟದಲ್ಲಿ ಅರುವತ್ತೋಕ್ಲುವಿನ ಸರ್ವದೈವತಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಬಾಲಕರು ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲೆಯ ಬಾಲಕಿಯರು ಟೇಬಲ್ ಟೆನ್ನಿಸ್ ಕ್ರೀಡೆಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ಮಡಿಕೇರಿ: ಉಡುಪಿಯ ಅಜ್ಜರಕಾಡು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ವಿಭಾಗ ಮಟ್ಟದ ದಸರಾ ವುಶು ಕ್ರೀಡಾಕೂಟ ದಲ್ಲಿ ಬೆಟ್ಟಗೇರಿ ಉದಯ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ವಿದ್ಯಾರ್ಥಿಗಳಾದ ಎಂ.ಎಸ್. ಪವನ್, ಪಿ.ಎಸ್. ಜೀವ, ಬಿ.ಪಿ. ಗೌರವ್ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಸೆ. ೨೯ ರಿಂದ ತಾ. ೨ ರವರೆಗೆ ಮೈಸೂರಿನಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ನಡೆಯಲಿದೆ.

ಕೊಡಗು ವುಶು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎನ್.ಸಿ. ಸುದರ್ಶನ್ ಹಾಗೂ ತರಬೇತುದಾರ ಬಿ.ಎ. ಆನಂದ ಪೂಜಾರಿ ಬೆಟ್ಟಗೇರಿ ಅವರ ಮಾರ್ಗದರ್ಶನದಲ್ಲಿ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡರು.

ಸೋಮವಾರಪೇಟೆ: ತಾಲೂಕು ಒಕ್ಕಲಿಗರ ಸಂಘದ ವಿಶ್ವಮಾನವ ಕುವೆಂಪು ಆಂಗ್ಲ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕಿಯರ ಷಟಲ್ ಬ್ಯಾಡ್ಮಿಂಟನ್ ತಂಡ ಜಿಲ್ಲಾ ಮಟ್ಟದಲ್ಲಿ ಪ್ರಶಸ್ತಿ ಗಳಿಸಿ ಮೈಸೂರು ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದೆ. ಕುಶಾಲನಗರದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಗೋಣಿಕೊಪ್ಪ ಕಳತ್ಮಾಡಿನ ಲಯನ್ಸ್ ಪ್ರೌಢಶಾಲೆ ತಂಡದ ವಿರುದ್ಧ ಜಯಗಳಿಸಿದರು. ಸಿಂಗಲ್ಸ್ನಲ್ಲಿ ಧನ್ಯ ಯಡೂರು ಪ್ರಶಸ್ತಿ ಗಳಿಸಿದರು. ಡಬಲ್ಸ್ನಲ್ಲಿ ಪುಷ್ಪಾಂಜಲಿ ಯಡೂರು ಮತ್ತು ಧನ್ಯ ಗೆಲುವು ಸಾಧಿಸಿದರು. ವಿಜೇತರೊಂದಿಗೆ ಲಯನ್ಸ್ ಶಾಲೆಯ ರಕ್ಷಾ, ಕುವೆಂಪು ಶಾಲೆಯ ಜೀವಿತ ಹಿರಿಕರ, ಬಿಂದು ಹಣಕೋಡು ಕೊಡಗು ಜಿಲ್ಲಾ ಶಟಲ್ ಬ್ಯಾಡ್ಮಿಂಟನ್ ತಂಡವನ್ನು ಪ್ರತಿನಿಧಿಸುತ್ತಾರೆ. ದೈಹಿಕ ಶಿಕ್ಷಣ ಶಿಕ್ಷಕಿ ಇಂದಿರಾ ತರಬೇತಿ ನೀಡಿದ್ದರು. ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವೇದಣ್ಣ, ಮುಖ್ಯಶಿಕ್ಷಕಿ ಮಿಲ್‌ಗ್ರೆಡ್ ಗೊನ್ಸಾಲ್ವೆಸ್ ಇದ್ದಾರೆ.ಹೆಬ್ಬಾಲೆ: ಸಮೀಪದ ಬಸವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲಾ ಮೈದಾನದಲ್ಲಿ ನಡೆದ ೧೪ ರಿಂದ ೧೭ರ ವಯೋಮಿತಿಯ ಜಿಲ್ಲಾಮಟ್ಟದ ಪ್ರಾಥಮಿಕ ಶಾಲಾ ವಿಭಾಗದ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ತಂಡ ಜಯಗಳಿಸಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದೆ.

ಮೊರಾರ್ಜಿ ದೇಸಾಯಿ ವಸತಿ ಶಾಲೆ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸೆಮಿಫೈನಲ್ಸ್ನಲ್ಲಿ ಮಡಿಕೇರಿ ತಾಲೂಕು ತಂಡವನ್ನು ಮಣಿಸಿ ನಂತರ ಫೈನಲ್ ಪಂದ್ಯಾವಳಿಯಲ್ಲಿ ವೀರಾಜಪೇಟೆ ತಾಲೂಕು ತಂಡವನ್ನು ಸೋಲಿಸುವ ಮೂಲಕ ವಿಜಯದ ಮಾಲೆಯನ್ನು ತನ್ನದಾಗಿಸಿಕೊಂಡಿದೆ.

ಹೆಬ್ಬಾಲೆ ಶಾಲಾ ತಂಡದ ನಾಯಕ ಪಂಕಜ್ ನೇತೃತ್ವದಲ್ಲಿ ಕ್ರೀಡಾಪಟುಗಳಾದ ಜಯಕುಮಾರ್, ಅಕ್ಷಯ, ಹೆಚ್.ಎಂ. ಮನೋಜ್, ಹೆಚ್.ಎಸ್. ಮನೋಜ್, ಅದ್ವಿತ್, ಪ್ರಜ್ಚಲ್, ಸಂಜಯ್ ಅವರು ಉತ್ತಮ ಆಟ ಪ್ರದರ್ಶನ ನೀಡಿದರು. ತರಬೇತುದಾರರಾಗಿ ಅತಿಥಿ ಶಿಕ್ಷಕಿ ನಿಲಾಂಭಿಕೆ ಹಾಗೂ ಶಿಕ್ಷಕರಾದ ಜಾನಕಿ, ಪುಷ್ಪಾವತಿ, ಬಬೀತಾ, ರಮೇಶ್ ಅವರು ಕಾರ್ಯನಿರ್ವಹಿಸಿದರು.