ಸೋಮವಾರಪೇಟೆ, ಅ. ೩: ಸೋಮವಾರಪೇಟೆಯಲ್ಲಿ ಜನೋತ್ಸವ ಮಾದರಿಯಲ್ಲಿ ಅದ್ದೂರಿಯಾಗಿ ಆಯುಧ ಪೂಜೋತ್ಸವ ನಡೆಸಲು ಮೋಟಾರ್ ಯೂನಿಯನ್ ಸಿದ್ದತೆ ನಡೆಸಿದೆ.

ಸೋಮವಾರಪೇಟೆ ಪಟ್ಟಣ ನವ ವಧುವಿನಂತೆ ಸಿಂಗಾರಗೊAಡಿದ್ದು, ಹಬ್ಬದ ಸಂಭ್ರಮ ಮನೆ ಮಾಡಿದೆ.

ಈಗಾಗಲೇ ಪಟ್ಟಣದ ಎಲ್ಲಾ ಪ್ರತಿಮೆಗಳನ್ನು ಶುಚಿಗೊಳಸಲಾಗಿದ್ದು, ತಳಿರು ತೋರಣ, ಬಾಳೆ ಕಂಬಗಳಿAದ ಅಲಂಕಾರಗೊಳಿಸಲಾಗಿದೆ. ಖಾಸಗಿ ಬಸ್ ನಿಲ್ದಾಣದಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದ್ದು, ತಾ. ೪ ರಂದು (ಇಂದು) ಬೆಳಗ್ಗಿನಿಂದ ರಾತ್ರಿಯವರೆಗೆ ವೈವಿಧ್ಯಮಯ ಕಾರ್ಯಗಳು ನಡೆಯಲಿವೆ ಎಂದು ಮೋಟಾರ್ ಯೂನಿಯನ್ ಅಧ್ಯಕ್ಷ ಕೆ.ಜಿ. ಸುರೇಶ್ ತಿಳಿಸಿದ್ದಾರೆ.

ಬೆಳಿಗ್ಗೆ ೭.೩೦ಕ್ಕೆ ನಗರದ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಸಕ್ತ ಸಾಲಿನ ಸಮಾರಂಭಕ್ಕೆ ಚಾಲನೆ ನೀಡಲಾಗುವುದು. ೮.೩೦ಕ್ಕೆ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು ಹಂಪಲು ವಿತರಣೆ, ೯ಗಂಟೆಗೆ ಸಮಾರಂಭದ ಉದ್ಘಾಟನೆ ನಡೆಯಲಿದೆ.

೯.೩೦ಕ್ಕೆ ಶಾಲಾ ಮಕ್ಕಳಿಗೆ ಡ್ಯಾನ್ಸ್-ಡ್ಯಾನ್ಸ್ ಸ್ಪರ್ಧೆ, ೧ ಗಂಟೆಗೆ ದಾನಿಗಳ ಸಹಕಾರದಿಂದ ಸಾವಿರಾರು ಮಂದಿಗೆ ಅನ್ನದಾನ, ಸಂಜೆ ೬.೩೦ಕ್ಕೆ ಆಯುಧ ಪೂಜಾ ಸಮಾರಂಭ ಉದ್ಘಾಟನೆ, ಅಲಂಕೃತ ವಾಹನ ಮತ್ತು ವರ್ಕ್ಶಾಪ್, ಸರ್ಕಾರಿ ಕಚೇರಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ.

ಈ ಬಾರಿ ಕನ್ನಡ ಕೋಗಿಲೆ ಮತ್ತು ಸರಿಗಮಪ ಖ್ಯಾತಿಯ ಪುರುಷೋತ್ತಮ್ ಅವರ ಪಿವಿಆರ್ ಇವೆಂಟ್ಸ್ ತಂಡದಿAದ ರಾತ್ರಿ ಸಂಗೀತ ರಸಮಂಜರಿ ಏರ್ಪಡಿಸಲಾಗಿದೆ. ಸರಿಗಮಪ ಖ್ಯಾತಿಯ ಪುರುಷೋತ್ತಮ್, ಶಶಿಧರ್, ಮಿಮಿಕ್ರಿ ಗೋಪಿ, ನಾಸಿರ ಬಾನು, ಸಂದೇಶ್, ಚನ್ನಪ್ಪ, ರಿಶು ಸೇರಿದಂತೆ ಇತರ ಗಾಯಕರು ಆಗಮಿಸಿ ಸಂಗೀತ, ಹಾಸ್ಯದ ರಸದೌತಣ ಉಣಬಡಿಸಲಿದ್ದಾರೆ ಎಂದು ಸುರೇಶ್ ಮಾಹಿತಿ ನೀಡಿದ್ದಾರೆ.

ಆಯುಧ ಪೂಜೋತ್ಸವ ಅಂಗವಾಗಿ ಪಟ್ಟಣದಲ್ಲಿ ಕುಂಬಳಕಾಯಿ, ಪೂಜಾ ಸಾಮಾಗ್ರಿ, ಹೂವಿನ ಖರೀದಿಯ ಭರಾಟೆ ಜೋರಾಗಿ ನಡೆದಿದೆ.