ಕುಶಾಲನಗರ, ಅ.೨: ಪುಟ್ಟ ಮಗುವೊಂದರ ಪ್ರಾಣ ಉಳಿಸುವಲ್ಲಿ ಕುಶಾಲನಗರ ಸರಕಾರಿ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.
ಕುಶಾಲನಗರದ ನಿವಾಸಿ ದೀವಿತ ತಮ್ಮಯ್ಯ ಎಂಬವರ ಪುತ್ರಿ ಶಾನ್ಯ (೧.೨ ವರ್ಷ) ಪ್ರಾಯದ ಮಗು ಮನೆಯಲ್ಲಿ ಏಕಾಏಕಿ ಉಸಿರಾಟದ ತೊಂದರೆಗೆ ಸಿಲುಕಿದಾಗ ತಕ್ಷಣ ಕುಶಾಲನಗರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಚಿಕಿತ್ಸೆಗೆ ದಾಖಲಿಸಲಾಗಿದೆ.
ಕುಶಾಲನಗರ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಕೆ.ಎನ್. ಶಿವಕುಮಾರ್ ಅವರಲ್ಲಿ ಮಗುವನ್ನು ತೋರಿಸಿದ್ದಾರೆ. ಮಗು ಯಾವುದೋ ವಸ್ತುವನ್ನು ನುಂಗಿರುವ ಸಾಧ್ಯತೆಯಿದೆ. ಅದರಿಂದ ಉಸಿರಾಟದ ತೊಂದರೆ ಯಾಗಿರಬಹುದು ಎಂದು ನಿವೃತ್ತ ನರ್ಸ್ ಮತ್ತು ಮಗುವಿನ ಅಜ್ಜಿ ಅನುಮಾನಿಸಿ ವೈದ್ಯರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯ ಶಿವಕುಮಾರ್ ಮಾಹಿತಿ ಬೆನ್ನಲ್ಲೇ, ಆಸ್ಪತ್ರೆಯಲ್ಲಿ ಲಭ್ಯವಿರುವ ಉಪಕರಣಗಳಿಂದ ಮಗುವನ್ನು ಪರೀಕ್ಷಿಸಲು ಆರಂಭಿಸಿದ್ದಾರೆ. ಅವರೊಂದಿಗೆ ವೈದ್ಯೆ ಪ್ರಿಯಾಂಕಾ ಮತ್ತು ತಂಡ ಜೊತೆ ಸೇರಿದ್ದಾರೆ. ಮಗುವಿನ ಹೃದಯ ಬಡಿತ ಮತ್ತು ಆಕ್ಸಿಜನ್ ಮಟ್ಟ ತೀವ್ರ ಕೆಳಮಟ್ಟಕ್ಕೆ ತಲುಪಿರುವುದನ್ನು ಅರಿತ ವೈದ್ಯಕೀಯ ತಂಡ ತಕ್ಷಣ ಬೇಕಾದ ಎಲ್ಲಾ ತರಹದ ಚಿಕಿತ್ಸೆಯನ್ನು ಆರಂಭಿಸಿದ್ದಾರೆ. ಮಗುವಿಗೆ ಹೆಚ್ಚುವರಿ ಚಿಕಿತ್ಸೆ ನೀಡಿದ್ದಾರೆ. ತಂತ್ರಜ್ಞಾನದ ಮೂಲಕ ಉಸಿರಾಟದ ನಾಳದಲ್ಲಿ ಬಿಳಿ ಬಣ್ಣದ ಬೀಜ ಕಂಡು ಬಂದಿದೆ.
ಅಷ್ಟರಲ್ಲಿ ಮೈಸೂರಿನ ಖಾಸಗಿ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಹೋಗಲು ವೈದ್ಯರು ತೀರ್ಮಾನಿಸಿ ಸೂಚನೆ ನೀಡಿದ್ದಾರೆ. ಮಗು ಮತ್ತು ಪೋಷಕರನ್ನು ಮಾತ್ರ ಕಳುಹಿಸಿದರೆ ಮಗುವಿನ ಜೀವಕ್ಕೆ ಅಪಾಯವಿದೆ ಎನ್ನುವುದು ತಿಳಿದಿದ್ದ ವೈದ್ಯ ಶಿವಕುಮಾರ್ ಅವರೊಂದಿಗೆ ವೈದ್ಯಕೀಯ ವಿದ್ಯಾರ್ಥಿ ಡಾ.ಶಫಿಕ್ ಅವರನ್ನು ಮಗುವಿನ ಪೋಷಕ ರೊಂದಿಗೆ ಮೈಸೂರಿಗೆ ಹೊರಟರು. ಆಸ್ಪತ್ರೆಯ ಆಂಬ್ಯುಲೆನ್ಸ್ನಲ್ಲಿ ಹೋಗುವ ದಾರಿ ಮಧ್ಯದಲ್ಲಿ ಮತ್ತೆ ಮಗುವಿನ ಎದೆಬಡಿತ ಮತ್ತು ಆಕ್ಸಿಜನ್ ಮಟ್ಟ ಇಳಿದಿದ್ದರಿಂದ ದಾರಿ ಮಧ್ಯದಲ್ಲಿ ವಾಹನ ನಿಲ್ಲಿಸಿ ಚಿಕಿತ್ಸೆ ನೀಡಿದ್ದಾರೆ.
ವಿಶೇಷ ತಾಂತ್ರಿಕತೆಯ ಮೂಲಕ ಮೂಲಕ ಮಗುವಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಅಲ್ಲಿಂದ ಮೈಸೂರಿಗೆ ಮಗುವನ್ನು ತಲುಪಿಸುವ ಯತ್ನ ಮಾಡಲಾಯಿತು ಎಂದು ಡಾ.ಶಿವಕುಮಾರ್ ತಿಳಿಸಿದ್ದಾರೆ.
ಅಲ್ಲಿಂದ ೧೦೮ ಗೆ ಕರೆ ಮಾಡಿ ಅವರ ಸಹಕಾರದಿಂದ ಮೈಸೂರು ಸಂಚಾರಿ ಕಮಿಷನರ್ ಅವರನ್ನು ಸಂಪರ್ಕಿಸಿ ಮಗುವಿನ ಸ್ಥಿತಿಯನ್ನು ವಿವರಿಸಿ ಮೈಸೂರು ಸಮೀಪದ ಮೆಟಗಳ್ಳಿಯಿಂದ ಮೈಸೂರಿನ ಆಸ್ಪತ್ರೆಗೆ ಹೋಗುವ ದಾರಿಯುದ್ದಕ್ಕೂ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಿಸಿ ಮಗುವಿನ ಜೀವ ಉಳಿಸುವಲ್ಲಿ ಸಹಕಾರ ನೀಡಿರುವುದನ್ನು ವೈದ್ಯರು ಸ್ಮರಿಸಿದ್ದಾರೆ.
ಮೈಸೂರಿನ ಆಸ್ಪತ್ರೆಯ ಮಕ್ಕಳ ಸರ್ಜನ್ ಡಾ.ಸುಧಾಂಶು ಶಾನ್ಯ ಮಗುವಿನ ಪರಿಸ್ಥಿತಿಯನ್ನು ವೈದ್ಯ ಶಿವಕುಮಾರ್ ಸಂಪೂರ್ಣವಾಗಿ ತಿಳಿಸಿದ್ದರಿಂದ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಅನ್ನು ಸಿದ್ಧವಾಗಿಸಿಕೊಂಡು ಕಾಯುತ್ತಿದ್ದರು.
ಸಧ್ಯ ಅಪಾಯದಲ್ಲಿದ್ದ ಮಗು ಆಪರೇಷನ್ಗೆ ಒಳಗಾಗಿ ಈಗ ವೆಂಟಿಲೇಷನ್ನಲ್ಲಿ ಆರೋಗ್ಯ ಚೇತರಿಸಿಕೊಳ್ಳುತ್ತಿರುವುದಾಗಿ ಕುಶಾಲನಗರ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಮಧುಸೂದನ್ ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ್ದಾರೆ
ವೈದ್ಯಕೀಯ ವಿದ್ಯಾರ್ಥಿಗಳಾದ ಡಾ.ರಂಜಿತ್, ಡಾ.ಶಮನಾ, ಡಾ.ಕೃಷ್ಣ, ಡಾ.ಗೋಪಾಲಕೃಷ್ಣನ್, ಡಾ.ಶಾವುಲ್, ಡಾ.ಸುಗಪರಿಯಾ, ನರ್ಸ್ ಗಳಾದ ಪವಿತಾ, ಹಂಸಿನಿ ಮತ್ತು ಮಂಜುಳಾ ಶಾನ್ಯ ಮಗುವಿನ ಆರೋಗ್ಯಕ್ಕಾಗಿ ಶ್ರಮಿಸಿದ್ದು, ಒಂದು ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.