*ಗೋಣಿಕೊಪ್ಪ, ಅ. ೨: ೪೪ನೇ ದಸರಾ ಜನೋತ್ಸವದ ಆರನೇ ದಿನದ ಸಾಂಸ್ಕೃತಿಕ ಸಂಜೆಯಲ್ಲಿ ನಗುವಿನ ಹಬ್ಬದ ಸಂಭ್ರಮವಿತ್ತು. ಕಾವೇರಿ ಕಲಾವೇದಿಕೆಯಲ್ಲಿ ಕಾಮಿಡಿ ಕಿಲಾಡಿಗಳು ಎಂದೆ ಖ್ಯಾತಿಯಾಗಿರುವ ಝೀ ವಾಹಿನಿಯ ಕಲಾವಿದರು ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.
ಕಾಮಿಡಿ ಕಿಲಾಡಿ ಕಾರ್ಯಕ್ರಮದ ಖ್ಯಾತಿಯ ಸೂರಜ್, ಪ್ರವೀಣ್, ಕುಂದಾಪುರದ ಸೂರ್ಯ, ಹಿತೇಶ್ ಸುಮಾರು ಒಂದು ಗಂಟೆಗಳ ಕಾಲ ಹಾಸ್ಯದ ಹೊನಲನ್ನು ಹರಿಸಿದರು. ಸಂಜೆ ಚಲನಚಿತ್ರ ಹಿನ್ನೆಲೆ ಗಾಯಕ ಅನ್ವಿತ್‌ಕುಮಾರ್ ಹಾಗೂ ತನುಶ್ರೀ ತಂಡ ಭಾವಗೀತೆ, ಜಾನಪದ, ಚಲನಚಿತ್ರ ಗೀತೆಗಳು ಹಾಡುವ ಮೂಲಕ ರಂಜಿಸಿದರು. ಲಾಲ್‌ಕುಮಾರ್ ಅವರಿಂದ ಸಂಗೀತ ಸಂಜೆ, ಬಳ್ಳಾರಿಯ ಬಸವರಾಜ್ ಅವರ ಕುಚ್ಚಿಪುಡಿ ನೃತ್ಯ ಆಕರ್ಷಣೆಯಾಗಿತ್ತು.
ಇಂದಿನ ಕಾರ್ಯಕ್ರಮ: ಬೆಳಿಗ್ಗೆ ಹಾಗೂ ಸಂಜೆ ೭ ಗಂಟೆಗೆ ಸ್ವತಂತ್ರ ಹೋರಾಟಗಾರ ಭವನದಲ್ಲಿ ಶ್ರೀ ಚಾಮುಂಡೇಶ್ವರಿ ದೇವಿಗೆ ಪೂಜೆ. ಬೆ. ೧೦ ಗಂಟೆಗೆ ರೋಟರಿ ಕ್ಲಬ್ ವತಿಯಿಂದ ಮಕ್ಕಳಿಗೆ ಸಾಮೂಹಿಕ ಮತ್ತು ವೈಯಕ್ತಿಕ ಗೀತ ಗಾಯನ, ಕ್ಲೇ ಮಾಡಲಿಂಗ್, ಸಂಜೆ ೬ ಗಂಟೆಗೆ ಎಸ್. ಟಿ. ಗಿರೀಶ್ ತಂಡದ ಸಂಗೀತ, ಷಡಕ್ಷರಿ ತಂಡದ ಜನಪದ ಗಾಯನ, ೭ ಗಂಟೆಗೆ ಹೇಮಾವತಿ ನಾಟ್ಯಾಂಜಲಿ ನೃತ್ಯ ಸಂಗೀತ ಶಾಲೆಯ ಭರತನಾಟ್ಯ, ಜಾನಪದ, ಪಾಶ್ಚಾತ್ಯ ನೃತ್ಯ. ೮ ಗಂಟೆಗೆ ಸೈಕ್ಲೋನ್ ಡ್ಯಾನ್ಸ್ ಇನ್ಟಿಟ್ಯೂಟ್ ತಂಡದ ನೃತ್ಯ.