ಮಡಿಕೇರಿ, ಅ.೧: ಹಿರಿಯ ನಾಗರಿಕರಿಗೆ ತಮ್ಮ ಮಕ್ಕಳಿಂದ ಯಾವುದಾದರೂ ಕಿರುಕುಳ ಅಥವಾ ಆಸ್ತಿಪಾಸ್ತಿಗಳನ್ನು ದುರುಪಯೋಗ ಪಡಿಸಿಕೊಂಡಿದ್ದಲ್ಲಿ ಪಾಲಕರ ಪೋಷಣೆ ಸಂರಕ್ಷಣಾ ಕಾಯಿದೆ ೨೦೦೭ ರಡಿ ವಿಚಾರಣೆ ನಡೆಸಲಾಗುವುದು ಎಂದು ಪಾಲಕರ ಪೋಷಣೆ ಸಂರಕ್ಷಣಾ ಕಾಯ್ದೆ ಅನುಷ್ಠಾನ ಸಮಿತಿ ಅಧ್ಯಕ್ಷರು ಹಾಗೂ ಉಪ ವಿಭಾಗಾಧಿಕಾರಿ ಯತೀಶ್ ಉಳ್ಳಾಲ್ ಹೇಳಿದರು.

ನಗರದ ಶಿಶುಕಲ್ಯಾಣ ಸಂಸ್ಥೆ ಸಭಾಂಗಣದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಹಿರಿಯ ನಾಗರಿಕರ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಶೇಷಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವಿಶ್ವ ಹಿರಿಯ ನಾಗರಿಕ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಹಿರಿಯ ನಾಗರಿಕರ ಕಾನೂನಿಗೆ ಚ್ಯುತಿ ಉಂಟಾದರೆ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ಮಾಹಿತಿ ನೀಡಬಹುದಾಗಿದೆ ಹಿರಿಯ ನಾಗರಿಕರ ಕಾನೂನಿಗೆ ಸಂಬAಧಿಸಿದ ವಿಷಯಗಳಿಗೆ ಮೊದಲ ಆದ್ಯತೆ ನೀಡಲಾಗುವುದು ಎಂದರು.

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ.ಪ್ರಸಾದ್ ಅವರು ಮಾತನಾಡಿ, ಸರ್ವರಿಗೆ ಸಮಪಾಲು, ಸರ್ವರಿಗೂ ಸಮಬಾಳು ಎಂಬ ನಾಣ್ಣುಡಿಯಂತೆ ಪ್ರತಿಯೊಬ್ಬರೂ ಹಿರಿಯ ನಾಗರಿಕರನ್ನು ಗೌರವಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಹಿರಿಯ ನಾಗರಿಕರಿಗೆ ತಲುಪಿಸಬೇಕು ಎಂದು ಹೇಳಿದರು.

ನಗರಸಭಾ ಅಧ್ಯಕೆÀ್ಷ ಅನಿತಾ ಪೂವಯ್ಯ ಮಾತನಾಡಿ, ಹಿರಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಪ್ರತಿಯೊಬ್ಬ ನಾಗರಿಕರಿಗೂ ಅಗತ್ಯ ಎಂದರು.

ತಹಶೀಲ್ದಾರ್ ಮಹೇಶ್ ಮಾತನಾಡಿ, ಹಿರಿಯರನ್ನು ಪ್ರೀತಿಯಿಂದ ಪಾಲನೆ ಪೋಷಣೆ ಮಾಡುವುದು ಮಕ್ಕಳ ಕರ್ತವ್ಯ ಎಂದರು. ಪ್ರಸ್ತುತ ಹಿರಿಯ ನಾಗರಿಕರನ್ನು ವೃದ್ಧಾಶ್ರಮಕ್ಕೆ ಕಳುಹಿಸುವ ಸನ್ನಿವೇಶ ಕಂಡುಬರುತ್ತಿದೆ. ಅದಕ್ಕೆಲ್ಲ ಕಡಿವಾಣ ಹಾಕುವ ಕೆಲಸವಾಗಬೇಕು ಎಂದು ಅವರು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಕೆ.ಡಿ.ದಯಾನಂದ ಮಾತನಾಡಿ, ತಂದೆ ತಾಯಿಯ ಪಾಲನೆ ಪೋಷಣೆ ಮಾಡುವುದು ಪುಣ್ಯದ ಕೆಲಸ ಎಂದು ತಿಳಿಸಿದರು.

ವಕೀಲರಾದ ಡಾ.ಮನೋಜ್ ಬೋಪಯ್ಯ ಮಾತನಾಡಿ, ಹಿರಿಯ ನಾಗರಿಕರ ರಕ್ಷಣೆಗಾಗಿ ಹಲವಾರು ಕಾನೂನುಗಳನ್ನು ಅನುಷ್ಠಾನ ಗೊಳಿಸಲಾಗಿದೆ. ಪ್ರಸ್ತುತ ಪ್ರತಿಯೊಂದು ಮಾಹಿತಿಯೂ ಕೂಡ ಡಿಜಿಟಲ್ ಯುಗದಲ್ಲಿ ನಮಗೆ ಲಭ್ಯವಿದೆ. ಆದರೆ ಜೀವನದ ಪಾಠಗಳು ಎಲ್ಲಿ ಹುಡುಕಿದರೂ ಸಿಗುವುದಿಲ್ಲ. ಆ ನಿಟ್ಟಿನಲ್ಲಿ ಹಿರಿಯರ ಅನುಭವದ ಜೊತೆಗೆ ಅಪಾರ ಜ್ಞಾನ ಭಂಡಾರವನ್ನು ಹೊಂದಿದ್ದಾರೆ. ಅದನ್ನು ಪ್ರತಿಯೊಬ್ಬರೂ ಪಡೆದುಕೊಳ್ಳುವಂತಾಗಬೇಕು ಎಂದರು.

ವಿರಾಜಪೇಟೆ ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷರಾದ ಶಂಕರಿ ಪೊನ್ನಪ್ಪ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕರಿಗೆ ಊರುಗೋಲು ಮತ್ತು ಶ್ರವಣ ಸಾಧನಗಳನ್ನು ವಿತರಿಸಲಾಯಿತು. ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಗಣ್ಯರು ಬಹುಮಾನ ವಿತರಿಸಿದರು.

ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಎನ್.ಮಂಜುನಾಥ್, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಕೆ.ಜಿ.ವಿಮಲಾ, ನಿರುಪಣಾಧಿಕಾರಿ ಪೂಣಚ್ಚ, ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು, ಹಿರಿಯ ನಾಗರಿಕರು, ಇತರರು ಇದ್ದರು.