ಆತ್ಮಾಹುತಿ ಬಾಂಬ್ ದಾಳಿ-೧೯ ಮಂದಿ ಸಾವು

ಕಾಬೂಲ್, ಸೆ. ೩೦: ಅಫ್ಘಾನಿಸ್ತಾನದ ರಾಜಧಾನಿಯ ಶೈಕ್ಷಣಿಕ ಕೇಂದ್ರವೊAದರಲ್ಲಿ ಶುಕ್ರವಾರ ಬೆಳಿಗ್ಗೆ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಆತ್ಮಾಹುತಿ ದಾಳಿಯಲ್ಲಿ ೧೯ ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಪಸಂಖ್ಯಾತ ಹಜಾರಾ ಸಮುದಾಯದ ಪ್ರಧಾನವಾಗಿ ಶಿಯಾ ಮುಸ್ಲಿಂರು ವಾಸಿಸುತ್ತಿರುವ ಪ್ರದೇಶವಾಗಿರುವ ಪಶ್ಚಿಮ ಕಾಬೂಲ್‌ನ ದಶ್ತ್-ಎ-ಬರ್ಚಿ ಸಮೀಪದಲ್ಲಿ ದಾಳಿ ಸಂಭವಿಸಿದೆ. ಅಫ್ಘಾನಿಸ್ತಾನದಲ್ಲಿ ನಡೆದ ಕೆಲವು ಮಾರಣಾಂತಿಕ ದಾಳಿಗಳಲ್ಲಿ ಇದು ಒಂದಾಗಿದೆ. ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಶೈಕ್ಷಣಿಕ ಕೇಂದ್ರದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ದುರದೃಷ್ಟವಶಾತ್, ೧೯ ಜನರು ಸಾವಿಗೀಡಾಗಿದ್ದು, ೨೭ ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವಕ್ತಾರ ಖಾಲಿದ್ ಝದ್ರಾನ್ ಹೇಳಿದ್ದಾರೆ.

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಉಮೇದುವಾರಿಕೆ

ನವದೆಹಲಿ, ಸೆ. ೩೦: ತೀವ್ರ ಕುತೂಹಲ ಕೆರಳಿಸಿರುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹುದ್ದೆಯ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿ ಕಾರ್ಜುನ ಖರ್ಗೆ ಅಧ್ಯಕ್ಷ ಗಾದಿಯತ್ತ ದಾಪುಗಾಲಿರಿಸಿದ್ದಾರೆ. ರಾಜಸ್ಥಾನ ಸಿಎಂ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಹಾಗೂ ಪಕ್ಷದ ಮತ್ತೋರ್ವ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅಧ್ಯಕ್ಷ ಹುದ್ದೆ ಚುನಾವಣಾ ರೇಸ್‌ನಿಂದ ಹಿಂದೆ ಸರಿದಿರುವುದು ಮಲ್ಲಿ ಕಾರ್ಜುನ ಖರ್ಗೆ ಅಧ್ಯಕ್ಷ ಗಾದಿ ಹಾದಿ ಸುಗಮವಾದಂತಾಗಿದೆ. ಇಂದು ಬೆಳಿಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮ ಬೆಂಬಲಿತ ನಾಯಕರೊಂದಿಗೆ ದೆಹಲಿಯ ಎಐಸಿಸಿ ಪ್ರಧಾನ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಕೆ ಮಾಡಿದರು.

ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶ

ಗುಂಡ್ಲುಪೇಟೆ, ಸೆ. ೩೦: ಭಾರತ್ ಜೋಡೋ ಯಾತ್ರೆ ಕರ್ನಾಟಕದಲ್ಲಿ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯ ಪ್ರವೇಶಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಬಳಿ ಸಿದ್ದರಾಮಯ್ಯ ಅವರು ಬರ ಮಾಡಿಕೊಂಡರು. ಈ ವೇಳೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಡಾ. ಹೆಚ್.ಸಿ. ಮಹದೇವಪ್ಪ, ವಿಧಾನ ಪರಿಷತ್‌ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಹಾಜರಿದ್ದರು. ರಾಹುಲ್ ಗಾಂಧಿ ನೇತೃತ್ವದ ಪಾದಯಾತ್ರೆ ನಡೆಯಲಿದ್ದು, ೨೨ ದಿನ ಸಂಚರಿಸಲಿದೆ. ಭಾರತ್ ಜೋಡೋ ಐಕ್ಯತಾ ಯಾತ್ರೆ, ಗುಂಡ್ಲುಪೇಟೆಯಿAದ ಪ್ರವೇಶ ಮಾಡಿ, ಏಳು ಜಿಲ್ಲೆಯಲ್ಲಿ ಯಾತ್ರೆ ಸಂಚಾರ ಮಾಡಲಿದೆ. ಅವು ಚಾಮರಾಜನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ ಸಾಗಲಿದೆ. ನಮ್ಮ ವಿಚಾರಗಳನ್ನು ಹೇಳಲು ಈಗ ಯಾವುದೇ ದಾರಿಗಳು ಉಳಿದಿಲ್ಲ. ಸಂಸತ್ತಿನಲ್ಲಿ ಮತ್ತು ವಿಧಾನಸಭೆಗಳಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಮ್ಮ ಅಭಿವ್ಯಕ್ತಿಯ ಎಲ್ಲಾ ದಾರಿಗಳು ಮುಚ್ಚಿಹೋಗಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರನ್ನು ತಲುಪಲು ಪಕ್ಷಕ್ಕೆ ಉಳಿದಿರುವ ಏಕೈಕ ಆಯ್ಕೆ ‘ಭಾರತ್ ಜೋಡೋ ಯಾತ್ರೆ’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಚೆಕ್‌ಗಳಿಗೆ ಸಹಿ ಹಾಕಲು ಮುರುಘಾ ಶ್ರೀಗೆ ಹೈಕೋರ್ಟ್ ಅನುಮತಿ

ಬೆಂಗಳೂರು, ಸೆ. ೩೦: ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನಕ್ಕೊಳಾಗಿರುವ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿ ಶರಣರು ಅಕ್ಟೋಬರ್ ತಿಂಗಳ ಚೆಕ್‌ಗಳಿಗೆ ಸಹಿ ಹಾಕಲು ಹೈಕೋರ್ಟ್ ಶುಕ್ರವಾರ ಷರತ್ತುಬದ್ಧ ಅನುಮತಿ ನೀಡಿದೆ. ಮಠದ ಸಿಬ್ಬಂದಿಗೆ ವೇತನ ಮತ್ತು ಇತರೆ ದೈನಂದಿನ ವೆಚ್ಚಗಳಿಗೆ ಸಂಬAಧಿಸಿದ ಚೆಕ್‌ಗಳಿಗೆ ಸಹಿ ಮಾಡಲು ಅನುಮತಿ ನೀಡುವಂತೆ ಜೈಲು ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸ್ವಾಮೀಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಷರತ್ತು ಬದ್ಧ ಅನುಮತಿ ನೀಡಿದೆ. ಮುರುಘಾ ಶ್ರೀಗಳು ವೇತನಕ್ಕೆ ಸಂಬAಧಿಸಿದ ಚೆಕ್‌ಗಳಿಗೆ ಮಾತ್ರ ಸಹಿ ಹಾಕಬೇಕು. ಸಹಿ ಪಡೆಯಲು ಚಿತ್ರದುರ್ಗ ಸೆಂಟ್ರಲ್ ಜೈಲಿನ ಅಧಿಕಾರಿಗಳು ಸಂಬAಧಪಟ್ಟವರಿಗೆ ಅನುಮತಿ ನೀಡಬೇಕು. ಸಹಿ ಹಾಕುವ ವೇಳೆ ತನಿಖಾಧಿಕಾರಿ, ಜೈಲು ಅಧೀಕ್ಷಕರು ಉಪಸ್ಥಿತರಿರಬೇಕು ಎಂದು ಹೈಕೋರ್ಟ್ ಹೇಳಿದೆ.

ಅತ್ಯಾಚಾರ ಎಸಗಿ ಬಾಲಕಿಯ ಮಾರಾಟ

ಪಾಟ್ನಾ, ಸೆ. ೩೦: ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಬಾಲಕಿಯನ್ನು ಮಾರಾಟ ಮಾಡಿದ ಅಮಾನವೀಯ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಮಹಿಳಾ ಪಿಂಪ್‌ಗೆ ೫೦,೦೦೦ ರೂ.ಗೆ ಬಾಲಕಿಯನ್ನು ಮಾರಾಟ ಮಾಡುವ ಮೊದಲು ಪೊಲೀಸ್ ಸಿಬ್ಬಂದಿ ಸೇರಿದಂತೆ ಹಲವರು ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಗುರುವಾರ ರಾತ್ರಿ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ತಂಡವೊAದು ಮಹಿಳೆಯ ವಶದಲ್ಲಿದ್ದ ಬಾಲಕಿಯನ್ನು ರಕ್ಷಿಸಿ ಪ್ರಕರಣವನ್ನು ಭೇದಿಸಿದ ಘಟನೆ ಬೆಳಕಿಗೆ ಬಂದಿದೆ. ಬಂಧಿತರನ್ನು ಸೋನಿ ದೇವಿ, ಜೈನಗರದ ಅಶೋಕ್ ಮಾರುಕಟ್ಟೆಯ ರಾತ್ರಿ ಕಾವಲುಗಾರ ಅರ್ಜುನ್ ಯಾದವ್ ಮತ್ತು ಎಲೆಕ್ಟಿçಷಿಯನ್ ಸಜನ್ ಕುಮಾರ್ ಎಂದು ಗುರುತಿಸಲಾಗಿದೆ.

ದೇಶದ್ರೋಹ ಪ್ರಕರಣದ ಆರೋಪಿಗೆ ಜಾಮೀನು ಲಭಿಸಿದರು ಬಿಡುಗಡೆ ಇಲ್ಲ

ನವದೆಹಲಿ, ಸೆ. ೩೦: ೨೦೧೯ರಲ್ಲಿ ನಡೆದ ಜಾಮಿಯಾ ಗಲಭೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ದಾಖಲಾಗಿದ್ದ ದೇಶದ್ರೋಹ ಪ್ರಕರಣದಲ್ಲಿ ಜೆಎನ್‌ಯು ಮಾಜಿ ವಿದ್ಯಾರ್ಥಿ ಶರ್ಜಿಲ್ ಇಮಾಮ್‌ಗೆ ದೆಹಲಿ ಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅನುಜ್ ಅಗರವಾಲ್ ಅವರು ಶರ್ಜಿಲ್ ಇಮಾಮ್‌ಗೆ ಜಾಮೀನು ನೀಡಿದ್ದು, ನ್ಯಾಯಾಲಯದ ವಿವರವಾದ ಆದೇಶಕ್ಕಾಗಿ ಕಾಯಲಾಗುತ್ತಿದೆ. ಆದಾಗ್ಯೂ, ಜನವರಿ ೨೦೨೦ ರಿಂದ ನ್ಯಾಯಾಂಗ ಬಂಧನದಲ್ಲಿರುವ ಶರ್ಜಿಲ್ ಇಮಾಮ್, ದೆಹಲಿ ಗಲಭೆ ಸಂಚಿನ ಪ್ರಕರಣದಲ್ಲಿ ಇನ್ನೂ ಜಾಮೀನು ಪಡೆಯದ ಕಾರಣ ಅವರ ಜೈಲುವಾಸ ಮುಂದುವರೆಯಲಿದೆ. ಡಿಸೆಂಬರ್ ೧೩, ೨೦೧೯ ರಂದು ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಇಮಾಮ್ ಅವರನ್ನು ಬಂಧಿಸಿ, ಅವರ ವಿರುದ್ಧ ದೇಶ ದ್ರೋಹದ ಪ್ರಕರಣ ದಾಖಲಿಸಲಾಗಿತ್ತು.

ನ್ಯಾಯಮೂರ್ತಿ ಹುದ್ದೆಗೆ ಪಿ.ಬಿ. ವರಾಲೆ ಹೆಸರು ಶಿಫಾರಸ್ಸು

ಬೆಂಗಳೂರು, ಸೆ. ೩೦: ಕರ್ನಾಟಕ ಹೈಕೋರ್ಟ್ನ ಮುಂದಿನ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಪಿ.ಬಿ. ವರಾಲೆ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಬಾಂಬೆ ಹೈಕೋರ್ಟ್ನ ಹಿರಿಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಲೆ ಅವರನ್ನು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹುದ್ದೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಯು ಯು ಲಲಿತ್ ಅವರ ನೇತೃತ್ವದ ಕೊಲಿಜಿಯಂ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ನ್ಯಾ. ವರಾಲೆ ಅವರು ೧೯೮೫ರ ಆಗಸ್ಟ್ನಲ್ಲಿ ವಕೀಲರಾಗಿ ನೋಂದಾಯಿಸಿಕೊAಡರು.

ಆನ್‌ಲೈನ್‌ನಲ್ಲಿ ಮದ್ಯ ಮಾರಾಟಕ್ಕೆ ನಿರ್ಬಂಧ

ಬೆAಗಳೂರು, ಸೆ. ೩೦: ರಾಜ್ಯಾದ್ಯಂತ ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಮಾಡುವುದನ್ನು ನಿಷೇಧಿಸಲು ಸರ್ಕಾರ ತೀರ್ಮಾನಿಸಿದೆ. ಆನ್‌ಲೈನ್ ಮಾರಾಟ ವ್ಯವಸ್ಥೆಯಿಂದ ಅಬಕಾರಿ ಇಲಾಖೆಗೆ ನಿರೀಕ್ಷಿತ ಮಟ್ಟದಲ್ಲಿ ಆದಾಯ ಬರುವುದಿಲ್ಲ, ಜೊತೆಗೆ ಹಲವು ಮದ್ಯದಂಗಡಿಗಳಲ್ಲಿ ಸಿಬ್ಬಂದಿ ತಮ್ಮ ನೌಕರಿ ಕಳೆದುಕೊಳ್ಳುತ್ತಾರೆ ಎಂದು ಹೇಳಲಾಗಿದೆ. ಆನ್‌ಲೈನ್‌ನಲ್ಲಿ ಮದ್ಯ ಮಾರಾಟ ಪ್ರಸ್ತಾವನೆಯನ್ನು ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಮಾಡಿತ್ತು, ಆ ವೇಳೆ ವಿರೋಧ ಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದವು. ಅದಾದ ನಂತರ ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಮತ್ತೆ ಪ್ರಸ್ತಾಪ ಮಾಡಲಾಯಿತು, ಆನ್‌ಲೈನ್ ಮದ್ಯ ಮಾರಾಟದ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ವಿವಿಧ ರಾಜ್ಯಗಳಿಗೆ ತನ್ನ ಅಧಿಕಾರಿಗಳನ್ನು ಕಳುಹಿಸುವಂತೆ ಅಂದಿನ ಸರ್ಕಾರ ಅಬಕಾರಿ ಇಲಾಖೆಗೆ ಸೂಚಿಸಿತ್ತು.