ಮಡಿಕೇರಿ, ಸೆ. ೩೦: ಲೋಕೋಪಯೋಗಿ ಉಪವಿಭಾಗ ಕಚೇರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಧರ್ಮಜಾ ಉತ್ತಪ್ಪ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ನಿಯೋಗ ತೆರಳಿ ಸರ್ಕಾರಕ್ಕೆ ಸೂಕ್ತ ವರದಿ ಸಲ್ಲಿಸಲು ಒತ್ತಾಯಿಸಿದರು.

ಮಡಿಕೇರಿ ಲೋಕೋಪಯೋಗಿ ಉಪವಿಭಾಗ ನಿರ್ವಹಣೆ ಮಾಡಿರುವ ಕೊಡಗು ಜಿಲ್ಲಾಡಳಿತ ಭವನ ಸೇರಿದಂತೆ ಅನೇಕ ಕಾಮಗಾರಿಗಳಲ್ಲಿ ಅಕ್ರಮ ನಡೆದಿದ್ದು ಇದರ ಬಗ್ಗೆ ಸರ್ಕಾರಕ್ಕೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಕೊಡಗು ಜಿಲ್ಲಾಧ್ಯಕ್ಷ ತೆನ್ನಿರ ಮೈನ ಅವರು ಸಲ್ಲಿಸಿದ ದೂರಿನ ಮೇರೆಗೆ ಇಲಾಖಾ ತನಿಖೆಗೆ ಆದೇಶ ನೀಡಿದ್ದು ಪಾರದರ್ಶಕ ವರದಿಯನ್ನು ಒಪ್ಪಿಸುವಂತೆ ಕಾರ್ಯಪಾಲಕ ಅಭಿಯಂತರರಿಗೆ ಧರ್ಮಜ ಉತ್ತಪ್ಪ ಅವರು ಒತ್ತಾಯ ಮಾಡಿದರು.

ಗುರುತರ ಆರೋಪ ಹೊತ್ತಿರುವ ಹಾಗೂ ಶಿಕ್ಷೆಗೆ ಒಳಗಾಗಿರುವ ಕಿರಿಯ ಇಂಜಿನಿಯರ್ ಕೆ.ಎಲ್. ದೇವರಾಜು ಅವರನ್ನು ಅನೇಕ ವರ್ಷಗಳಿಂದ ಒಂದೇ ಸ್ಥಳದಲ್ಲಿ ನಿಯುಕ್ತಿಗೊಳಿಸಿರುವ ಬಗ್ಗೆ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡೂರಾವ್ ಇಲಾಖೆಯಲ್ಲಿ ಭ್ರಷ್ಟ ಅಧಿಕಾರಿಗಳು ತುಂಬಿದ್ದು ಅವರನ್ನು ವರ್ಗಾಯಿಸದಿದ್ದರೆ ಉಗ್ರ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ನಿಯೋಗದಲ್ಲಿ ತೆನ್ನಿರ ಮೈನ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಪ್ರಭುರೈ, ಕುಶಾಲನಗರ ಕಾಂಗ್ರೆಸ್ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮುಖಂಡರಾದ ನರೇನ್ ಕಾರ್ಯಪ್ಪ, ವಸಂತ್ ಭಟ್, ಆಲೀರ ರಷೀದ್, ಕಲೀಲ್ ಬಾಷ, ವಿವೇಕಾನಂದ, ಹರೀಶ್ ಸೇರಿದಂತೆ ಮುಖಂಡರು ಮತ್ತಿತರರಿದ್ದರು.